fbpx

ಶಂಕರ್ ನಾಗ್ ಬದುಕಿದ್ದಾಗ ಅವರಿಗಿದ್ದ ಅಭಿಮಾನಿಗಳಿಗಿಂತ ಆಕ್ಸಿಡೆಂಟ್ ಆಗಿ ಸತ್ತಾಗ ಹುಟ್ಟಿಕೊಂಡ ಅಭಿಮಾನಿಗಳೇ ಜಾಸ್ತಿ!

✍️ಶಿವಶಂಕರ್ ಜಿ.

ಪತ್ರಿಕೆ, ರೇಡಿಯೋ ಮತ್ತು ದೂರದರ್ಶನದಲ್ಲಿ ಶಂಕರ್’ನಾಗರ ಬಗ್ಗೆ ಓದುತ್ತಾ, ಕೇಳುತ್ತಾ ಮತ್ತು ನೋಡುತ್ತಾ ನಾನೂ ಕೂಡ ಅವರ ಪ್ರಭಾವಕ್ಕೆ ಒಳಗಾದವನೇ.’ಅದಮ್ಯ ಚೇತನ’, ‘ಮಿಂಚಿ ಮಾಯವಾದ ಪ್ರತಿಭೆ’, ‘ಪ್ರತಿಭೆಯ ಖನಿ… ಚಟುವಟಿಕೆಯ ವಾಲ್ಕೆನೊ’ -ಹೀಗೆಲ್ಲಾ ಅವರನ್ನು ವರ್ಣಿಸಲಾಗುತ್ತಿತ್ತು. ಅವುಗಳಲ್ಲೆಲ್ಲ ಈ “ಚಟುವಟಿಕೆಯ ವಾಲ್ಕೆನೊ” ಎನ್ನುವುದು ಮಾತ್ರ ನನ್ನ ತಲೆಯಲ್ಲಿ ಬಲವಾಗಿ ಕೂತುಬಿಟ್ಟಿತ್ತು. ಇದ್ದಕ್ಕಿದ್ದಂತೆ ನಾನು ನನ್ನ ಎಲ್ಲಾ ಕ್ರಿಯೆಗಳಲ್ಲೂ ಅತಿಯಾದ ವೇಗವನ್ನು ರೂಢಿಸಿಕೊಳ್ಳತೊಡಗಿದ್ದೆ! ಅದರ ಪರಿಣಾಮವಾಗಿ ಎಚ್ ಎಂ ಟಿ ವಾಚ್ ಫ್ಯಾಕ್ಟರಿಯಲ್ಲಿ ಅಪ್ರೆಂಟಿಸ್ಷಿಪ್ ಮಾಡುತ್ತಿದ್ದ ನಾನು ಒಂದು ದಿನ, ಹಿರಿಯ ಕಾರ್ಮಿಕರು ವರ್ಷಾನುಗಟ್ಟಲೆಯಿಂದ ಮಾಡಿಕೊಂಡು ಬಂದಿದ್ದ ಉತ್ಪಾದನಾ ಪ್ರಮಾಣಕ್ಕಿಂತ ದುಪ್ಪಟ್ಟು ಪ್ರೊಡಕ್ಷನ್ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದೆ.”ಯಾಕಪ್ಪ ಹುಡುಗಾ, ಏನಾಗಿದೆ ನಿಂಗೆ? ಹಿಂಗ್ ಹೊಡೀತಾಬಿದ್ದಿದೀಯಲ್ಲಾ! ದಿನಾ ಹಿಂಗೇ, ಇಷ್ಟೇ ಮಾಡಕ್ಕಾಗುತ್ತಾ?” ಎಲ್ಲರೂ ಅಮರಿಕೊಂಡಿದ್ದರು. ಅವರಿಗೆ ಗೊತ್ತಿರಲಿಲ್ಲ – ನನ್ನ ಮೈಮೇಲೆ ಶಂಕರ್ ನಾಗ್ ಬಂದಿರುವ ವಿಷಯ. ನನ್ನದಲ್ಲದ ಆ ವೇಗ ಹೆಚ್ಚು ದಿನ ಉಳಿಯಲಿಲ್ಲ.
ಇನ್ನು ರಾಜಕುಮಾರ್ ಬಗ್ಗೆ ಹಿಂದೊಮ್ಮೆ ಇಲ್ಲಿ ಬರೆದಿದ್ದಂತೆ, ಆ ದಿನಗಳಲ್ಲಿ “ನಾನು ರಾಜಕುಮಾರ್ ಭಕ್ತ” ಎಂದು ಹೇಳಿಕೊಳ್ಳುವುದೇ ಹೆಮ್ಮೆಯ ಸಂಗತಿಯಾಗಿರುತ್ತಿತ್ತು. ಬಹಳಷ್ಟು ಅಭಿಮಾನಿಗಳು ರಾಜ್ ಸಿನಿಮಾದಲ್ಲಿ ತೊಟ್ಟಂತೆ ಬಟ್ಟೆ ತೊಡುವುದು, ಅವರ ಹೇರ್ ಸ್ಟೈಲ್, ಅವರಂತೆ ಮೀಸೆ ಬಿಡುವುದು ಇತ್ಯಾದಿ ವಿಧಾನಗಳಲ್ಲಿ ಅವರನ್ನು ಅನುಕರಿಸುತ್ತಿದ್ದರು.


‘ಕಾಮನಬಿಲ್ಲು’ ಚಿತ್ರದಲ್ಲಿ ರಾಜಕುಮಾರ್ ಯೋಗ ಮಾಡುವುದನ್ನು ನೋಡಿ ವಿಸ್ಮಯಗೊಂಡು, ಅವರಿಂದ ಸ್ಫೂರ್ತಿ ಪಡೆದು ನಾನೂ ಯೋಗ ಮಾಡುವುದನ್ನು ಕಲಿತೆ. ಅದರಲ್ಲೂ ನೌಲಿಕ್ರಿಯೆಯನ್ನು ಕಲಿಯಲೇಬೇಕೆಂದು ಸತತವಾಗಿ ಅಭ್ಯಾಸ ಮಾಡಿ ಯಶಸ್ವಿಯೂ ಆಗಿಬಿಟ್ಟೆ! ರಜೆಯಲ್ಲಿ ಅಜ್ಜಿಯೂರಿಗೆ ಹೋದಾಗ, ಅಲ್ಲಿನ ಗೌರ್ನಮೆಂಟ್ ಸ್ಕೂಲಿನ ಜಗಲಿಯ ಮೇಲೆ ನಿಂತು ಅಂಗಿ ಕಳಚಿ ನೌಲಿಕ್ರಿಯೆ ಮಾಡುತ್ತಿದ್ದರೆ, ಕೆಳಗೆ ಹಳ್ಳಿಯ ಗೆಳೆಯರು ‘ಬಡ್ಡೈದ ಏನ್ಲ ಇಂಗ್ ತಿರುಗುಸ್ತನೆ ಒಟ್ಟೆಯಾ!!’ ಎನ್ನುತ್ತ ಬಾಯಿಬಿಟ್ಟುಕೊಂಡು ನೋಡುತ್ತಿದ್ದರು. ನಾನು ನನ್ನ ಅಭಿಮಾನಿ ದೇವರುಗಳ ಕಡೆಗೆ ಅಣ್ಣಾವ್ರ ಠೀವಿಯಿಂದ ನೋಡುತ್ತಾ ಒಮ್ಮೆ ಮೂಗು ನೀವಿಕೊಳ್ಳುತ್ತಿದ್ದೆ.
ಯೋಗದ ನಂತರ ನನ್ನ ದೃಷ್ಟಿ ರಾಜಕುಮಾರ್ ಮೂಗಿನ ಮೇಲೆ ಹೊರಳಿತು!ನಾನು ಅರಳೆಣ್ಣೆಯನ್ನು ನನ್ನ ಮೂಗಿಗೆ ಲೇಪಿಸಿಕೊಂಡು ಹಲವು ತಿಂಗಳು ದಿನಾಲೂ ನೀವಿಕೊಳ್ಳುತ್ತಿದ್ದೆ! ಮತ್ತು ಪ್ರತಿ ದಿನವೂ ಮೂಗು ಉದ್ದವಾಯಿತಾ ಎಂದು ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದೆ. 


ಮುಂದೆ ಯೋಗ, ಮೂಗು ಎಲ್ಲವೂ ಮರೆತುಹೋಗಿ ಹರೆಯಕ್ಕೆ ಬಂದಾಗ, ನನ್ನ ಪ್ರೀತಿಯ ಹುಡುಗಿ ಒಮ್ಮೆ ಮೂಗು ಹಿಡಿದು ‘ನಿನ್ ಮೂಗು ಚನಾಗಿದೆ ಕಣೋ’ ಎಂದಾಗ ಸಾರ್ಥಕ ಭಾವದಲ್ಲಿ ತೇಲಿಹೋಗಿದ್ದೆ… ಅವರನ್ನು ನೋಡಿದಾಗ ‘ಅವರಂತೆ’, ಇವರನ್ನು ನೋಡಿದಾಗ ‘ಇವರಂತೆ’ ಆಗಲು ಹವಣಿಸುವ ನಾವು ನಮ್ಮಂತೆಯೇ ಇರಲು ಏಕೆ ಬಯಸುವುದಿಲ್ಲ?! ಅನುಕರಣೆಯಿಂದ ನಾವು ಯಾರಂತಾದರೂ ಆಗಲು ಸಾಧ್ಯವೇ? ಆಗುವ ಅಗತ್ಯವಾದರೂ ಇದೆಯೇ? ಸುರೇಶ್ ಕುಲಕರ್ಣಿಯವರ “ಬೇಂದ್ರೆ ಬೆಳಕು” ಪುಸ್ತಕದಲ್ಲಿ ಪ್ರಭಾವ ಮತ್ತು ಪ್ರೇರಣೆಯ ಬಗ್ಗೆ ಒಂದು ಅದ್ಭುತವಾದ ಪುಟ್ಟ ಬರಹವಿದೆ:
ಹುಬ್ಬಳ್ಳಿಯಲ್ಲಿ ಮುನಸಿಪಲ್ ಟೌನ್ ಹಾಲಿನಲ್ಲಿ ಶ್ರೀ ಅರವಿಂದೋ ಅವರ ‘ಸಾವಿತ್ರಿ’ ಬಗ್ಗೆ ಬೇಂದ್ರೆಯವರನ್ನು ಮಾತನಾಡಲು ಕರೆದಿದ್ದರು. ಬೇಂದ್ರೆಯವರ ಬಗ್ಗೆ ಪರಿಚಯ ಮಾಡಿಕೊಡುವವರು, ಬೇಂದ್ರೆಯವರ ಮೇಲೆ ಶ್ರೀ ಅರವಿಂದರ ಪ್ರಭಾವ ಆಗಿದೆ… ಎಂದು ಪರಿಚಯಿಸಿದರು.


ಮುಂದೆ ಬೇಂದ್ರೆಯವರು ‘ಸಾವಿತ್ರಿ’ ಬಗ್ಗೆ ಮಾತಾಡುವ ಮೊದಲು,”ಪ್ರಭಾವ ಮತ್ತು ಪ್ರೇರಣೆ ಎರಡೂ ಬೇರೆ ಬೇರೆ. ನನ್ನ ಮೇಲೆ ಶ್ರೀ ಅರವಿಂದರ ಪ್ರೇರಣೆಯಾಗಿದೆ. ಪ್ರಭಾವ ಎಂಬುವದು ಮೊಳೆಯುವ ಬೀಜಕ್ಕೆ ಉರಿಬಿಸಿಲಿನಂತೆ; ಪ್ರೇರಣೆ ಮೊಳೆಯುವ ಬೀಜಕ್ಕೆ ನೀರೆರೆದಂತೆ. ನನ್ನ ಮೇಲೆ ಶ್ರೀ ಅರವಿಂದರ ಪ್ರೇರಣೆಯಾಗಿದೆ, ಅವರ ಕೃಪೆಯಿಂದ ಇಂದು ಮಾತನಾಡಲು ಒಪ್ಪಿದ್ದೇನೆ. ದೇವರ ಪ್ರೇರಣೆಯಾಗಬೇಕೆ ವಿನಃ ಪ್ರಭಾವ ಆಗಬಾರದು.”
ಬೇಡರ ಕಣ್ಣಪ್ಪ, ಸಂತ ತುಕಾರಾಂ, ಭಕ್ತ ಕುಂಬಾರ, ಗುರು ರಾಘವೇಂದ್ರ, ಬಬ್ರುವಾಹನ, ಹಿರಣ್ಯ ಕಶ್ಯಪ, ಕೃಷ್ಣದೇವರಾಯ, ಮಯೂರ, ಇಮ್ಮಡಿ ಪುಲಿಕೇಶಿ, ರಣಧೀರ ಕಂಠೀರವ… ಹೀಗೇ ನೂರಾರು ಪಾತ್ರಗಳ ಪರಕಾಯ ಪ್ರವೇಶ ಮಾಡಿದರೂ ಯಾರ ಪ್ರಭಾವಕ್ಕೂ ಒಳಗಾಗಲಿಲ್ಲ, ಬದಲಿಗೆ ಆ ಎಲ್ಲರೂ ಮುತ್ತುರಾಜನಿಗೆ ಪ್ರೇರಣೆಯಾದರು! 
ಬೆಂಕಿಯ ದೃಶ್ಯ ಮೂಡಿದಾಗ ಸುಟ್ಟುಹೋಗದ, ಮಳೆಯ ದೃಶ್ಯಕ್ಕೆ ಒದ್ದೆಯಾಗದ, ಬಣ್ಣಬಣ್ಣದ ಚಿತ್ರಗಳೆಲ್ಲಾ ಮೂಡಿ ಮರೆಯಾದ ಮೇಲೂ ಪರಿಶುಭ್ರ ಹಾಗೂ ನಿಷ್ಕಳಂಕವಾಗಿಯೇ ಉಳಿಯುವ ಬಿಳಿ ಪರದೆಯಂತೆ “ನಿಮ್ಮ ರಾಜಕುಮಾರ”.

✍️ಶಿವಶಂಕರ್ ಜಿ.

ಬೆಂಗಳೂರು ಬಾಷ್ ಲಿಮಿಟೆಡ್ ನಲ್ಲಿ ಟೆಕ್ನೀಷಿಯನ್.ಸಾಹಿತ್ಯ, ಸಂಗೀತ, ರಂಗಭೂಮಿ ಹಾಗೂ ಜಾಗತಿಕ ಸಿನಿಮಾ ಆಸಕ್ತಿಯ ಕ್ಷೇತ್ರಗಳು.ಚಾರಣ ಮತ್ತು ಬರಹ ಹವ್ಯಾಸ.ವಿದಾಯ, ಇಬ್ಬಂದಿ, ತಿರುವು – ಧಾರಾವಾಹಿಯಾಗಿರುವ ಕಥೆಗಳು. ಈಟೀವಿಗಾಗಿ ಪಿ.ಎಚ್. ವಿಶ್ವನಾಥ್ ನಿರ್ದೇಶಿಸಿದ ‘ಪ್ರೇಮ ಕಥೆಗಳು’ ಧಾರಾವಾಹಿಗೆ ಚಿತ್ರಕಥೆ, ಸಂಭಾಷಣೆ.’ಸರ್ವಶಿಕ್ಷಣ ಅಭಿಯಾನ’ಕ್ಕಾಗಿ ಹಲವಾರು ಸಾಕ್ಷ್ಯ ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ಹಾಗೂ ಸಹನಿರ್ದೇಶನ.ಜಾಲ, ಗಲಿಬಿಲಿ ಕಲ್ಲೇಶಿ ಧಾರಾವಾಹಿಗೆ ಶೀರ್ಷಿಕೆ ಗೀತೆ ರಚನೆ.

error: Content is protected !!