ವ್ಯರ್ಥ ಪ್ರಯತ್ನ ಮಾಡಿದ ಲಡ್ಕಿ!

ಸೋನಿಯಾ ಗಾಂಧಿ ಬಿಟ್ಟರೆ ಕಾಂಗ್ರೆಸ್‌ಗೆ ಪ್ರಿಯಾಂಕಾ ವಾದ್ರಾ ಅವರೇ ದೊಡ್ಡ ನಾಯಕಿಯಾಗಬಲ್ಲರು, ಇಂದಿರಾಗಾಂಧಿಯ ವರ್ಚಸ್ಸು ಪ್ರಿಯಾಂಕಾ ಅವರಿಗಿದೆ ಎನ್ನುವ ನಿರೀಕ್ಷೆಯು ದೇಶಾದ್ಯಂತ ಪಕ್ಷದ ಕಾರ್ಯಕರ್ತರಲ್ಲಿ ನೆಲೆಯೂರಿತ್ತು. ಆದರೆ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಆ ಎಲ್ಲಾ ನಿರೀಕ್ಷೆಯನ್ನು ಧೂಳೀಪಟ ಮಾಡಿದೆ.
“ಲಡ್ಕೀ ಹೂಂ, ಲಡ್ ಸಕ್ತೀ ಹೂಂ’ ಎಂಬ ಸ್ಲೋಗನ್‌ನೊಂದಿಗೆ ನಾರಿಶಕ್ತಿಯನ್ನೇ ಪ್ರಮುಖವಾಗಿಸಿಕೊಂಡು ಹೆಚ್ಚು ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳನ್ನೇ ಕಣಕ್ಕಿಳಿಸಿ ಗೆಲ್ಲುವ ಅವರ ಯತ್ನವೂ ಫಲ ನೀಡಲಿಲ್ಲ, ಇನ್ನೇನು ಚುನಾವಣೆ ಸಮೀಪಿಸುತ್ತಿದ್ದಂತೆ ಈ ಅಭಿಯಾನದ ಪ್ರಮುಖ ಮುಖಗಳೇ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ, ಕಮಲ ಹಿಡಿದರು. ಪ್ರಿಯಾಂಕಾರನ್ನು ನಂಬಿ ಕಣಕ್ಕಿಳಿದ ಹಲವು ಹೆಣ್ಣು ಮಕ್ಕಳು ಠೇವಣಿಯನ್ನೂ ಕಳೆದುಕೊಂಡರು.
ಕುಟುಂಬ ರಾಜಕೀಯ ಹಿನ್ನೆಲೆ ಅಥವಾ ಹೆಣ್ಣೆಂಬ ಕರುಣೆ ಚುನಾವಣೆಯಲ್ಲಿ ನಡೆಯುವುದಿಲ್ಲ ಎನ್ನುವುದನ್ನು ಉತ್ತರ ಪ್ರದೇಶದ ಜನರು ಪ್ರಿಯಾಂಕಾ ಅವರಿಗೆ ತೋರಿಸಿಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ನಿಂತು ಕೆಲಸ ಮಾಡುವವರಿಗೆ ಮಾತ್ರವೇ ಮಣೆ ಎನ್ನುವುದನ್ನೂ ಮತದಾರರು ಸ್ಪಷ್ಟಪಡಿಸಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್‌ನ ‘ಬ್ರಹ್ಮಾಸ್ತ್ರ’ ಎಂದು ಬಿಂಬಿತರಾಗಿದ್ದ ಪ್ರಿಯಾಂಕಾ ವಾದ್ರಾ ಅವರು ಕಾರ್ಯಕರ್ತರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.