ವೈವಾಹಿಕ ಜೀವನಕ್ಕೆ ಪ್ರವೇಶಿಸಿದ ಅಂತರಾಷ್ಟ್ರೀಯ ಹಾಕಿ ಆಟಗಾರ ಸೋಮಣ್ಣ

ವಿರಾಜಪೇಟೆ, ಅ.08: ಬಹುಬೇಡಿಕೆಯ ಹಾಕಿ ಆಟಗಾರರ ಪೈಕಿ ಒಬ್ಬರಾಗಿರುವ ಅಂತರಾಷ್ಟ್ರೀಯ ಹಾಕಿಪಟು, ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಕರಿನೆರವಂಡ ಸೋಮಣ್ಣ ಅವರು ಶುಕ್ರವಾರದಂದು ವೈವಾಹಿಕ ಜೀವನಕ್ಕೆ ಪ್ರವೇಶಿಸಿದರು.

ವಿರಾಜಪೇಟೆಯ ಕೊಡವ ಸಮಾಜದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಗೋಣಿಕೊಪ್ಪಲಿನ ಚೇಮಿರ ಬೆಳ್ಯಪ್ಪ ಮತ್ತು ಗೀತಾ ದಂಪತಿಗಳ ಪುತ್ರಿ ನಮೃತ (ನೀತಿ) ಅವರನ್ನು ತಮ್ಮ ಕೊಡವ ಸಂಪ್ರದಾಯದಂತೆ ಬಾಳಸಂಗಾತಿಯಾಗಿ ಸ್ವೀಕರಿಸುವ ಮೂಲಕ ಸೋಮಣ್ಣ ಅವರು ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದರು.

ಹಾಕಿ ಕ್ರೀಡೆಯಲ್ಲಿ ತಮ್ಮ ವಿಭಿನ್ನ ಕೌಶಲ್ಯ ಮತ್ತು ಕೈಚಳಕದ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಯತ್ತ ಶರವೇಗದಲ್ಲಿ ಕೊಂಡೊಯ್ಯುವಲ್ಲಿ ಪ್ರಖ್ಯಾತಿ ಪಡೆದಿರುವ ಸೋಮಣ್ಣ ಅವರ ವಿವಾಹ ಕಾರ್ಯಕ್ರಮವನ್ನು ಸಾಕ್ಷೀಕರಿಸಲು ಒಲಂಪಿಯನ್ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಹಾಕಿ ಪಟುಗಳು ಸೇರಿದಂತೆ ಹಾಕಿ ಆಟಗಾರರ ದಂಡೇ ವಿರಾಜಪೇಟೆಗೆ ಆಗಮಿಸಿತು.

2007ರಲ್ಲಿ ಮೆಕಾವೋನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಹಿರಿಯರ ಹಾಕಿ ತಂಡವನ್ನು ಪ್ರತಿನಿಧಿಸುವ ಮೂಲಕ ಮೊದಲ ಅಂತರಾಷ್ಟ್ರೀಯ ಪಂದ್ಯವಾಡಿದ ಸೋಮಣ್ಣ ಅವರು, ಅದೇ ವರ್ಷ ಮಲೇಷಿಯಾದಲ್ಲಿ ನಡೆದ ಸುಲ್ತಾನ್ ಅಜ್ಲಾನ್ ಶಾ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದರು.

1997ರಲ್ಲಿ ‘ಸಾಯಿ’ ಮೂಲಕ ಹಾಕಿ ಕ್ರೀಡಾ ಜಗತ್ತಿಗೆ ಪ್ರವೇಶಿಸಿ 2000ಸಾಲಿನಿಂದ ಕರ್ನಾಟಕ ಹಾಕಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಸೋಮಣ್ಣ ಅವರು, 2014ರವರೆಗೆ ರಾಷ್ಟ್ರದ ವಿವಿದೆಡೆ ನಡೆದ ಪಂದ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ರಾಜ್ಯ ಹಾಕಿ ತಂಡದ ನಾಯಕರಾಗಿಯೂ ಗಮನಸೆಳೆದಿದ್ದ ಸೋಮಣ್ಣ ಅವರು, ಭಾರತ ಹಾಕಿ ತಂಡದ ಹಿರಿಯ ಮತ್ತು ಕಿರಿಯ ವಿಭಾಗದ ಹಲವಾರು ಶಿಬಿರಗಳಲ್ಲಿ ಪಾಲ್ಗೊಂಡಿದ್ದರು.

2014ರಲ್ಲಿ ರಾಜ್ಯ ಸರ್ಕಾರದ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಗೆ ಭಾಜನರಾದ ಸೋಮಣ್ಣ ಅವರು, ಇದಕ್ಕೂ ಮೊದಲು 2009ರಲ್ಲಿ ಕರ್ನಾಟಕ ಓಲಂಪಿಕ್ ಅಸೋಸಿಯೇಷನ್ ವತಿಯಿಂದ ನೀಡಲಾಗುವ ‘ವರ್ಷದ ಅತ್ಯುತ್ತಮ ಆಟಗಾರ’ ಪ್ರಶಸ್ತಿಯನ್ನೂ ಪಡೆದಿದ್ದರು.

ಕರಡ ಸಮೀಪದ ಪಾಲಂಗಾಲ ಗ್ರಾಮದ ಕರಿನೆರವಂಡ ಕೆ. ಮಂದಪ್ಪ ಮತ್ತು ಇಂದಿರಾ ದಂಪತಿಗಳ ಪುತ್ರರಾಗಿರುವ ಸೋಮಣ್ಣ ಅವರು, ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದು, ಹಾಲಿ ಕೆನರಾ ಬ್ಯಾಂಕ್ ಹಾಕಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅಲ್ಲದೆ ಕರ್ನಾಟಕ ಪುರುಷರ ಹಾಕಿ ತಂಡದ ತರಬೇತುದಾರರಾಗಿ ಮತ್ತು ಹಾಕಿ ಕರ್ನಾಟಕದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸೋಮಣ್ಣ ಅವರ ವಿವಾಹ ಮಹೋತ್ಸವದಲ್ಲಿ ಒಲಂಪಿಯನ್ ಹಾಕಿ ಪಟುಗಳಾದ ವಿ. ಆರ್. ರಘುನಾಥ್, ಎಸ್.ವಿ. ಸುನಿಲ್, ಎಸ್.ಕೆ. ಉತ್ತಪ್ಪ, ನಿಕ್ಕಿನ್ ತಿಮ್ಮಯ್ಯ, ಭರತ್ ಚೆಟ್ರಿ, ಸಿ.ಎಸ್. ಪೂಣಚ್ಚ, ಅಂತರಾಷ್ಟ್ರೀಯ ಹಾಕಿ ಪಟುಗಳಾದ ವಿಕ್ರಂಕಾಂತ್, ನಿತಿನ್ ತಿಮ್ಮಯ್ಯ, ವಿ.ಎಸ್. ವಿನಯ್, ಪ್ರಧಾನ್ ಸೋಮಣ್ಣ, ಪಿ.ಎಲ್. ತಿಮ್ಮಣ್ಣ, ಎ.ಬಿ.ಚೀಯಣ್ಣ, ಕೆ.ಕೆ.ಪೂಣಚ್ಚ, ಬಿ. ಸಿ.ಪೂಣಚ್ಚ, ಪಿ. ಶಣ್ಮುಗಂ, ಎ.ಸಿ. ಕುಟ್ಟಪ್ಪ, ಆಭರಣ್ ಸುದೇವ್, ಬಿಪಿನ್ ತಿಮ್ಮಯ್ಯ, ಕೆ.ಪಿ.ರಾಯ್, ಕೆ.ಕೆ. ಭರತ್, ಜಗದೀಪ್ ದಯಾಳ್, ನಿಲನ್ ಪೂಣಚ್ಚ, ಅಂತರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಸೇರಿದಂತೆ ಕರ್ನಾಟಕದ ಹಾಕಿ ತಂಡದ ಹಲವು ಸದಸ್ಯರು, ಅಪಾರ ಸಂಖ್ಯೆಯ ಗೆಳೆಯರ ತಂಡ ಪಾಲ್ಗೊಂಡು ಸಂಭ್ರಮಿಸಿದರು.

error: Content is protected !!