ವಿಷ ಕುಡಿದ ಪ್ರೇಮಿಗಳು, ಮಹಿಳೆ ಸಾವು, ಪುರುಷನ ಸ್ಥಿತಿ ಗಂಭೀರ!

|ಸುಂದರ ನಗರದಲ್ಲಿ ನಡೆದ ದುರ್ಘಟನೆ|
ಪ್ರೀತಿಗೆ ಬಿದ್ದ ವಿವಾಹಿತರಿಬ್ಬರು ಸ್ವಗ್ರಾಮದಿಂದ ಬಂದು ಒಂದು ತಿಂಗಳು ಸಂಸಾರ ನಡೆಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸುಂದರನಗರದಲ್ಲಿ ನಡೆದಿದೆ. ವಿಷ ಸೇವನೆಯಿಂದ ಮಹಿಳೆ ವಿದ್ಯಾ ಸಾವನ್ನಪ್ಪಿದರೆ ವಿಶ್ವನಾಥ್ ಎಂಬಾತನ ಸ್ಥಿತಿ ಚಿಂತಾಜನಕವಾಗಿದೆ.
ಘಟನೆ ವಿವರ: ಮೂಲತಃ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದ ವಿಶ್ವನಾಥ್ (35) ಮತ್ತು ಚಿಕ್ಕನೇರಳ ಗ್ರಾಮದ ವಿದ್ಯಾ ( 29) ಎಂಬವರಿಗೆ ಈಗಾಗಲೆ ಮದುವೆಯಾಗಿ ಎರಡೆರೆಡು ಮಕ್ಕಳಿದ್ದಾರೆ. ವಿದ್ಯಾ ಎಂಬಾಕೆ ಮನೆಗೆ ಗಾರೆ ಕೆಲಸಕ್ಕೆಂದು ವಿಶ್ವನಾಥ್ ತೆರಳಿದ ಸಂದರ್ಭ ಇಬ್ಬರ ನಡುವೆ ಪ್ರೀತಿ ಮೂಡಿದೆ. ಇಬ್ಬರು ಕೂಡ ಸಂಗಾತಿ, ಕುಟುಂಬ, ಮಕ್ಕಳು, ಊರನ್ನು ತೊರೆದು ಕುಶಾಲನಗರ ಬಳಿಯ ಸುಂದರನಗರಕ್ಕೆ ಓಡಿ ಬಂದಿದ್ದಾರೆ. ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ಒಂದು ತಿಂಗಳ ಕಾಲ ದಾಂಪತ್ಯ ನಡೆಸಿದ್ದಾರೆ. ಸೋಮವಾರ ಸಂಜೆ ವಿಶ್ವನಾಥನ ಕಾರಿನಲ್ಲಿ ಮನೆಯಿಂದ ಹೊರಟ ಇಬ್ಬರು ಕೂಡ ಹೆಬ್ಬಾಲೆ ಬಳಿ ಕಾರಿನಲ್ಲಿಯೇ ವಿಷ ಸೇವಿಸಿದ್ದಾರೆ.
ಬಳಿಕ ವಿಶ್ವನಾಥ್ ಹೆಬ್ಬಾಲೆಯ ಸ್ನೇಹಿತನೊಬ್ಬನಿಗೆ ಫೋನಾಯಿಸಿ ತಾವು ವಿಷ ಸೇವಿಸಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಆತನ ಸ್ನೇಹಿತ ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ಕೂಡ ಪಿರಿಯಾಪಟ್ಟಣ ಆಸ್ಪತ್ರೆಗೆ ದಾಖಲಿಸಿದ್ದಾನೆ.
ಆದರೆ ವಿದ್ಯಾ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರೆ ವಿಶ್ವನಾಥನ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಈ ಸಂಬAಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.