ವಿಶ್ವ ಗುಬ್ಬಚ್ಚಿ ದಿನ ಆಚರಣೆ :ಪಕ್ಷಿ ಸಂಕುಲ ರಕ್ಷಣೆಯ ಕಾಳಜಿ ಅಗತ್ಯ

ಅವಸಾನದಂಚಿನಲ್ಲಿರುವ ಗುಬ್ಬಚ್ಚಿ ಸೇರಿದಂತೆ ಎಲ್ಲಾ ಪಕ್ಷಿ ಸಂಕುಲ ರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ಸಂಕಲ್ಪ ತೊಡಬೇಕು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷರೂ ಆದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮನವಿ ಮಾಡಿದರು.
ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ವತಿಯಿಂದ ಶಾಲೆಯ ಎಸ್.ಡಿ.ಎಂ.ಸಿ.,ಇಕೋ ಕ್ಲಬ್, ವಿಜ್ಞಾನ ಸಂಘ ಹಾಗೂ ಎನ್.ಎಸ್.ಎಸ್.ಘಟಕದ ವತಿಯಿಂದ ವಿಶ್ವ ಗುಬ್ಬಚ್ಚಿ ದಿನದ ಅಂಗವಾಗಿ ಏರ್ಪಡಿಸಿದ್ದ ಪಕ್ಷಿ ಸಂಕುಲ ಸಂರಕ್ಷಣೆ ಕುರಿತ ಜಾಗೃತಿ ಆಂದೋಲನದಲ್ಲಿ ಗುಬ್ಬಚ್ಚಿಗಳ ಸಂರಕ್ಷಣೆ ಕುರಿತು ಮಾತನಾಡಿದರು.
ನಮ್ಮ ಮನೆಯಂಗಳದಲ್ಲಿ ನಮ್ಮ ದಿನನಿತ್ಯದ ಬದುಕಿನೊಂದಿಗೆ ಕುಟುಂಬದ ಸದಸ್ಯರಂತೆ ಜೀವಕಳೆ ನೀಡುತ್ತಿದ್ದ ಗುಬ್ಬಚ್ಚಿಯು ಇಂದು ಕಾಂಕ್ರೀಟ್ ಕಾಡಿನ ಭರಾಟೆಯಲ್ಲಿ ಅಪರೂಪವಾಗುತ್ತಿರುವುದು ಪರಿಸರ ಅಸಮತೋಲನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಪ್ರೇಮಕುಮಾರ್ ಹೇಳಿದರು.
ಬೇಸಿಗೆ ಅವಧಿಯಲ್ಲಿ ಮನೆಗಳ ಮುಂದೆ ಶುದ್ಧ ನೀರು ಮತ್ತು ಕಾಳನ್ನು ಇಟ್ಟು ಗುಬ್ಬಚ್ಚಿಗಳ ಜೀವ ಸಂಕುಲವನ್ನು ಉಳಿಸಬೇಕು. ತಾರಸಿ ಕಟ್ಟಡಗಳ ಬಳಿಯೂ ಗೂಡುಗಳ ಮಾದರಿಯನ್ನು ಇಟ್ಟು ಸಂರಕ್ಷಣೆಗೆ ಮುಂದಾಗಬೇಕು. ಕೃಷಿಯಲ್ಲಿ ಕೀಟ ನಾಶಕಗಳ ಬಳಕೆ ನಿಯಂತ್ರಿಸಬೇಕು. ಇದರಿಂದ ಹುಳು-ಹುಪ್ಪಟೆ ಹೆಚ್ಚು ದೊರೆತು ಗುಬ್ಬಚ್ಚಿಗಳ ಆವಾಸ ಹಿಗ್ಗುತ್ತದೆ. ಬೆಳೆಗಳನ್ನು ಕಾಡುವ ಕೀಟಗಳನ್ನು ಜೈವಿಕವಾಗಿ ಹತೋಟಿ ಮಾಡಲು ಸಾಧ್ಯವಾಗುತ್ತದೆ’ ಎಂದರು.
ಪಕ್ಷಿ-ಪ್ರಾಣಿಗಳ ಸಂತತಿ ಕ್ಷೀಣಿಸುತ್ತಿರುವುದು ಆತಂಕಕಾರಿ ಆಗಿದೆ. ಆದ್ದರಿಂದ ನಾವು ಪಕ್ಷಿ-ಪ್ರಾಣಿಗಳನ್ನು ರಕ್ಷಿಸಿ ಇಡೀ ಜೀವಿ ಸಂಕುಲವನ್ನು ಉಳಿಸಬೇಕಿದೆ ಎಂದರು.
ನಾವು ಗುಬ್ಬಚ್ಚಿಯೊಂದಿಗೆ ಎಲ್ಲಾ ಪಕ್ಷಿ ಸಂಕುಲಗಳ ಸಂರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ ಎಂದರು.
ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ, ಪಕ್ಷಿ ಸಂಕುಲ ಸಂರಕ್ಷಣೆ ಮತ್ತು ಜೀವಿ ಪ್ರಪಂಚದ ಕುರಿತು ಮಾಹಿತಿ ನೀಡಿದರು.
ಬೇಸಿಗೆ ವೇಳೆಯಲ್ಲಿ ಶಾಲಾ ಅಂಗಳ ಸೇರಿದಂತೆ ಮನೆಯ ಅಂಗಳದಲ್ಲಿ ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ಶಾಲಾ ಮಕ್ಕಳು ಗುಬ್ಬಚ್ಚಿಗಳಿಗೆ ಮಡಿಕೆ/ ಪಾತ್ರೆಗಳಲ್ಲಿ ನೀರು ಇಟ್ಟು ಕಾಳು ಇತ್ಯಾದಿ ಆಹಾರ ಧಾನ್ಯಗಳನ್ನು ಒದಗಿಸುವ ಕುರಿತು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು.