ವಿವಿಧ ಸಮಸ್ಯೆಗಳ ಕುರಿತು ಚರ್ಚೆ

ಬೆಳೆ ಹಾನಿ ಸಂಬಂಧಿಸಿದಂತೆ ಕಳೆದ ಬಾರಿಯಂತೆ ಸಮೀಕ್ಷೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪರಿಹಾರ ಕೇಂದ್ರದಲ್ಲಿ ಇರುವವರಿಗೆ ತಕ್ಷಣವೇ 10 ಸಾವಿರ ರೂ. ನೀಡುವಂತೆ ಮತ್ತು ಪ್ರಾಣಹಾನಿ ಸಂಭವಿಸಿದಲ್ಲಿ ತಕ್ಷಣವೇ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಅವರು ಮಡಿಕೇರಿ ವೀರಾಜಪೇಟೆ ವಲಯದಿಂದ 33 ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಸಿದ್ಧ್ದವಾಗಿದೆ. ಈ ತಂಡದಲ್ಲಿ 176 ಜನ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಈಗಾಗಲೇ 257 ಮರಗಳು ರಸ್ತೆ, ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದು, ಮರಗಳನ್ನು ತೆರವುಗೊಳಿಸಲಾಗಿದೆ. ಅರಣ್ಯ ಇಲಾಖೆಯ ರ್ಯಾಪಿಡ್ ರೆಸ್ಪಾನ್ಸ್ ಟೀಂ 24 ಗಂಟೆಗಳೂ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ವಿದ್ಯುತ್ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ ಸುರಿದ ಧಾರಕಾರ ಮಳೆ ಮತ್ತು ಗಾಳಿಯಿಂದಾಗಿ 1800 ವಿದ್ಯುತ್ ಕಂಬಗಳು ಹಾನಿಯಾಗಿದೆ ಎಂದು ಮಾಹಿತಿ ನೀಡಿದರು. ವಿದ್ಯುತ್ ಅವಘಡ ಉಂಟಾದಲ್ಲಿ ನಿರ್ವಹಿಸಲು 200 ರಿಂದ 300 ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ಕರೆಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಕೊಡಗು ಸೂಕ್ಷ್ಮ ಪ್ರದೇಶವಾಗಿದೆ. ಜನ ತಿಂಗಳುಗಳಗಟ್ಟೆಲೆ ಕತ್ತಲೆಯಲ್ಲಿರುವಂತಾಗಬಾರದು. ಈ ಬಗ್ಗೆ ಗಮನಹರಿಸಿ, ವಿದ್ಯುತ್ ಸಂಬಂಧ ಯಾವುದೇ ಸಮಸ್ಯೆಗಳಿದ್ದರೂ ಸಹ ಬಗೆಹರಿಸಿ ಎಂದರು.
ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ಸಮಸ್ಯೆಯಾಗದಂತೆ ಎಚ್ಚರ ವಹಿಸಿ. ವಿದ್ಯುತ್ ಅತ್ಯವಶ್ಯಕವಾಗಿದ್ದು, ಸಮರ್ಪಕ ವಿದ್ಯುತ್ ಪೂರೈಕೆ ಬಗ್ಗೆ ಎಚ್ಚರ ವಹಿಸಿ. ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಬಾರದು ಎಂದು ಉಸ್ತುವಾರಿ ಸಚಿವರು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಗೋವಿಂದರಾಜು ಇತರರು ಇದ್ದರು.