fbpx

ವಿವಿಧ ಉದ್ದೇಶಕ್ಕೆ ಶೀಘ್ರ ಭೂಮಿ ಕಾಯ್ದಿರಿಸಿ: ಚಾರುಲತಾ ಸೋಮಲ್

ಜಿಲ್ಲೆಯಲ್ಲಿ ವಸತಿ, ವಿದ್ಯಾರ್ಥಿ ನಿಲಯ, ಅಂಗನವಾಡಿ, ಕಚೇರಿಗಳು, ಸಮುದಾಯ ಭವನ, ಕಸ ವಿಲೇವಾರಿ, ಸ್ಮಶಾನ, ಹೀಗೆ ಹಲವು ಉದ್ದೇಶಗಳಿಗೆ ಜಾಗ ಕಾಯ್ದಿರಿಸಿಕೊಡಬೇಕೆಂದು ಮನವಿಗಳು ಬರುತ್ತಿವೆ. ಆ ದಿಸೆಯಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕಂದಾಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳಿಗೆ ಬೇಡಿಕೆಗಳಿಗೆ ಸಂಬಂಧಿಸಿದಂತೆ ತ್ವರಿತವಾಗಿ ಸ್ಪಂದಿಸಬೇಕು. ಜೊತೆಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ತಾಲ್ಲೂಕು ಮಟ್ಟದಲ್ಲಿ ಚರ್ಚಿಸಿ ಜಾಗ ಕಾಯ್ದಿರಿಸಲು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರ ಜೊತೆ ಸಮನ್ವಯತೆ ಸಾಧಿಸಿದಲ್ಲಿ ಶೀಘ್ರ ಜಾಗವನ್ನು ಕಾಯ್ದಿರಿಸಬಹುದಾಗಿದೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಜಿ.ಪಂ.ಸಿಇಒ ಅವರಿಂದ ಮಾಹಿತಿಯ ಪಟ್ಟಿಯನ್ನು ಪಡೆಯುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಜಾಗ ಕಾಯ್ದಿರಿಸುವ ಸಂಬಂಧ ನಿಖರ ಮಾಹಿತಿ ಒದಗಿಸಬೇಕು. ಈಗಾಗಲೇ ಜಿಲ್ಲಾಡಳಿತ ವತಿಯಿಂದ ಸಾಕಷ್ಟು ಭೂಮಿಯನ್ನು ಕಾಯ್ದಿರಿಸಿ ವಿವಿಧ ಯೋಜನೆಗಳಿಗೆ ಜಾಗ ಒದಗಿಸಲಾಗಿದೆ. ಹಾಗೆಯೇ ಮುಂದಿನ ಬೇಡಿಕೆಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ತಹಶೀಲ್ದಾರರಿಗೆ ಒದಗಿಸುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಸಮಗ್ರ ಗಿರಿಜನ ಕಲ್ಯಾಣ, ಪಶುಪಾಲನೆ, ತೋಟಗಾರಿಕೆ, ಹೀಗೆ ಹಲವು ಇಲಾಖೆಗಳು ಜಾಗ ಒದಗಿಸುವಂತೆ ಮನವಿ ಬಂದಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಹೇಳಿದರು.
ಭೂ ದಾಖಲೆಗಳ ಉಪ ನಿರ್ದೇಶಕರಾದ ಪಿ.ಶ್ರೀನಿವಾಸ್ ಅವರು ಸರ್ಕಾರಿ ಜಾಗ ಸಂಬಂಧಿಸಿದಂತೆ ಈಗಾಗಲೇ ಅನುಮೋದನೆಯಾಗಿರುವುದಕ್ಕೆ ಸರ್ವೇ ಮಾಡಿ ನಕ್ಷೆ ತಯಾರಿಸಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ತಹಶೀಲ್ದಾರರಾದ ಗೋವಿಂದ ರಾಜು, ಮಹೇಶ್, ಯೋಗಾನಂದ, ಪ್ರಕಾಶ್ ಅವರು ಜಾಗ ಕಾಯ್ದಿರಿಸುವ ಬಗ್ಗೆ ಹಲವು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಅರವಿಂದ ಬಾಬು, ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕರಾದ ಸುರೇಶ್ ಭಟ್, ಐಟಿಡಿಪಿ ಇಲಾಖಾ ಅಧಿಕಾರಿ ಶ್ರೀನಿವಾಸ್, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಲಿಂಗರಾಜು, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ಕುಸುಮ ಇತರರು ಜಾಗ ಮನವಿ ಸಂಬಂಧ ಮಾಹಿತಿ ನೀಡಿದರು.

ಮಾಹಿತಿ ಒದಗಿಸಿ: ವಿವಿಧ ಇಲಾಖೆಯಲ್ಲಿ ಹೊರಗುತ್ತಿಗೆಯಡಿ ನೇಮಕವಾಗಿರುವ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಪಿಎಫ್ ಪಾವತಿಸಬೇಕು. ಆ ದಿಸೆಯಲ್ಲಿ 22 ಇಲಾಖೆಗಳು ಮಾಹಿತಿ ನೀಡಿದ್ದು, ಉಳಿದ ಇಲಾಖೆಗಳು ಮಾಹಿತಿ ನೀಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಸ್ಪಷ್ಟ ನಿರ್ದೇಶನ ನೀಡಿದರು.

ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸರ್ಕಾರದ ಸೌಲಭ್ಯವನ್ನು ಕಲ್ಪಿಸುವ ದಿಸೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಕ್ರಮವಹಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತಿಳಿಸಿದರು. ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ ಇತರರು ಇದ್ದರು.

error: Content is protected !!