fbpx

ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಪ್ರಾರಂಭ

ಕೆ. ರೋಸಯ್ಯ, ಬಿಪಿನ್ ರಾವತ್, ಪುನೀತ ರಾಜಕುಮಾರ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ

(ಸುವರ್ಣ ವಿಧಾನ ಸೌಧ ಬೆಳಗಾವಿ) ಡಿ.13: ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನ ಇಂದು ಸುವರ್ಣ ವಿಧಾನ ಸೌಧದಲ್ಲಿ ಪ್ರಾರಂಭವಾಯಿತು. 15ನೇ ವಿಧಾನಸಭೆಯ 11ನೇ ಅಧಿವೇಶನದ ಮೊದಲನೇ ದಿನದಂದು ಮಾಜಿ ರಾಜ್ಯಪಾಲ ಕೆ. ರೋಸಯ್ಯ, ಮಾಜಿ ಸಚಿವರಾದ ಎಸ್.ಆರ್. ಮೋರೆ, ವಿರೂಪಾಕ್ಷಪ್ಪ ಅಗಡಿ, ಮಾಜಿ ಶಾಸಕರಾದ ಕೆ. ರಾಮಭಟ್, ಡಾ. ಎಂ.ಪಿ.ಕರ್ಕಿ, ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಹಾಗೂ ಅವರ ಜೊತೆಗೆ ಹೆಲಿಕ್ಯಾಪ್ಟರ್ ದುರಂತದಲ್ಲಿ ಮಡಿದ ಸೇನಾಧಿಕಾರಿಗಳು, ಚಿತ್ರನಟರಾದ ಪುನೀತ ರಾಜ್‍ಕುಮಾರ, ಎಸ್. ಶಿವರಾಂ ಹಾಗೂ ಬಹುಶೃತ ವಿದ್ವಾಂಸ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರ ನಿಧನಕ್ಕೆ ಸಂತಾಪ ಸೂಚನೆ ನಿರ್ಣಯ ಕೈಗೊಳ್ಳಲಾಯಿತು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಗಲಿದ ಗಣ್ಯರ ಕುರಿತು ಸಂತಾಪ ಸೂಚನೆಯನ್ನು ವಿಸ್ತøತವಾಗಿ ವಾಚಿಸಿ ಅಗಲಿದ ಗಣ್ಯರ ಬದುಕು, ಸಾಧನೆಗಳನ್ನು ಸದನಕ್ಕೆ ವಿವರಿಸಿದರು. ಸಂತಾಪ ಸೂಚನೆ ನಿರ್ಣಯದ ಮೇಲೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಆಂಧ್ರಪ್ರದೇಶದ ರಾಜಕಾರಣದಲ್ಲಿ ಹಂತ ಹಂತವಾಗಿ ಮೇಲೆ ಬಂದ ಕೆ. ರೋಸಯ್ಯ ಅವರು ಹಣಕಾಸು ಮಂತ್ರಿಯಾಗಿ 16 ಬಾರಿ ಬಜೆಟ್ ಮಂಡಿಸುವ ಮೂಲಕ ದೇಶದಲ್ಲಿ ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಕೀರ್ತಿ ಹೊಂದಿದ್ದರು. ಕರ್ನಾಟಕ ರಾಜ್ಯದೊಂದಿಗೆ ಅವಿನಾಭಾವ ನಂಟು ಇಟ್ಟುಕೊಂಡಿದ್ದರು. ಕೆಲ ಕಾಲ ರಾಜ್ಯದ ಹಂಗಾಮಿ ರಾಜ್ಯಪಾಲರಾಗಿ ಅವರು ನೀಡಿರುವ ಸೇವೆಯನ್ನು ಸ್ಮರಿಸಿದರು. ಭಾರತದ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಡಾ. ಮಧುಲಿಕಾ ರಾವತ್, ಸೇನಾಧಿಕಾರಿಗಳಾದ ಬ್ರಿಗೇಡಿಯರ್ ಎಲ್.ಎಸ್. ಲಿಡ್ಡೆರ್, ಲೆಫ್ಟಿನಂಟ್ ಕಮಾಂಡ್ ಹರ್ಜಿಂದರ್ ಸಿಂಗ್, ವಿಂಗ್ ಕಮಾಂಡರ್ ವಿ.ಎಸ್. ಚೌಹಾನ್, ಸ್ಕ್ವಾಡ್ರನ್ ಲೀಡರ್ ಕೆ.ಸಿಂಗ್ ಇತರ ಸೇನಾಧಿಕಾರಿಗಳಾದ ದಾಸ್, ಪ್ರದೀಪ, ಜಿತೇಂದ್ರ ಕುಮಾರ ನಾಯಕ್, ವಿವೇಕಕುಮಾರ್, ಬಿ. ಸಾಯಿ ತೇಜ್, ಗುರುಸೇವಕ ಸಿಂಗ್, ಸತ್ಪಾಲ್ ಅವರು ಡಿಸೆಂಬರ್ 8 ರಂದು ಸಂಭವಿಸಿದ ಹೆಲಿಕ್ಯಾಪ್ಟರ್ ದುರಂತದಲ್ಲಿ ಸಾವಿಗೀಡಾಗಿದ್ದು, ದೇಶಕ್ಕೆ ದಿಗ್ಭ್ರಮೆ ಉಂಟು ಮಾಡಿದೆ.ದೇಶದ ಮೂರು ಸೇನೆಗಳ ಮುಖ್ಯಸ್ಥರಾಗಿದ್ದ ಇವರು ಬಹಳಷ್ಟು ಭದ್ರತೆ ಹೊಂದಿರುವ ಸೇನಾ ಹೆಲಿಕ್ಯಾಪ್ಟರ್‍ನಲ್ಲಿ ಪ್ರಯಾಣಿಸುತ್ತಿರುವಾಗ ನಡೆದಿರುವ ಈ ದುರಂತಕ್ಕೆ ನಿಖರ ಕಾರಣಗಳು ತನಿಖೆಯಿಂದ ತಿಳಿಯಬೇಕಾಗಿದೆ. ಜನರಲ್ ಬಿಪಿನ್ ರಾವತ್ ಅವರು ದೇಶದ ರಕ್ಷಣೆಗಾಗಿ ನೀಡಿದ ಸೇವೆ ಉನ್ನತ ಮಟ್ಟದ್ದಾಗಿದೆ. ದೇಶದ ಭದ್ರತೆಯ ಸ್ಪಷ್ಟ ಹಾಗೂ ನಿಖರ ಚಿತ್ರಣ ಅವರಲ್ಲಿ ಇತ್ತು. ಧೈರ್ಯ ಮತ್ತು ಸಾಹಸಗಳಿಂದ ಸೈನ್ಯದ ಒಳಗೆ ಮತ್ತು ಹೊರಗೆ ಅಪಾರ ಅಭಿಮಾನ ಹೊಂದಿದರು. ಕನ್ನಡದ ಹೆಸರಾಂತ ಸೇನಾನಿಗಳಾದ ಜನರಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯಾ ಸೇರಿದಂತೆ ಕೊಡಗಿನ ಸೈನಿಕರ ಬಗ್ಗೆ ಗೌರವ ಹೊಂದಿದ್ದರು. ಕಾಶ್ಮಿರ ಮತ್ತು ಈಶಾನ್ಯ ರಾಜ್ಯಗಳ ರಕ್ಷಣೆ, ಮಯನ್ಮಾರ್‍ನಲ್ಲಿ ಉಗ್ರರ ನಿಯಂತ್ರಣ, ಸರ್ಜಿಕಲ್ ಸ್ಟ್ರೈಕ್ ತಂತ್ರಗಳನ್ನು ರೂಪಿಸುವಲ್ಲಿ ರಾವತ್ ಅವರ ಪಾತ್ರ ದೊಡ್ಡದು. ಸೇನೆಯ ಆಡಳಿತದಲ್ಲಿಯೂ ಅವರ ದಕ್ಷತೆ ಹಿರಿದಾಗಿತ್ತು. ಸೇನೆಯಲ್ಲಿ ಆಧುನಿಕತೆಯ ಜೊತೆಗೆ ಭಾರತೀಯತೆಯನ್ನು ತರುವಲ್ಲಿ ಅವರ ಸೇವೆ ಗಣನೀಯವಾಗಿದೆ. ಹೆಲಿಕ್ಯಾಪ್ಟರ್ ಅಪಘಾತದಲ್ಲಿ ಬದುಕುಳಿದಿರುವ ಕ್ಯಾಪ್ಟನ್ ವರುಣಸಿಂಗ್ ಅವರಿಗೆ ಉತ್ತಮ ಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಗುಣಮುಖರಾಗಲಿ ಎಂದು ಮುಖ್ಯಮಂತ್ರಿಗಳು ಆಶಿಸಿದರು. ಮಾಜಿ ಸಚಿವ ಎಸ್.ಆರ್. ಮೋರೆ ಅವರು ನೇರ, ನಿಷ್ಠುರ ರಾಜಕಾರಣಿಯಾಗಿ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದರು. ಸಹಕಾರ ಮತ್ತು ನಗರಾಭಿವೃದ್ಧಿ ಸಚಿವರಾಗಿ ಉತ್ತಮ ಕೆಲಸಗಳನ್ನು ನಿರ್ವಹಿಸಿದ್ದರು. ಮಾಜಿ ಸಚಿವ ಕೊಪ್ಪಳದ ವಿರೂಪಾಕ್ಷಪ್ಪ ಅಗಡಿ ಅವರು ಜನಪರ ಕಾಳಜಿಯುಳ್ಳ ವ್ಯಕ್ತಿಯಾಗಿದ್ದರು. ಅವರ ತಂದೆ ಮಾಜಿ ಸಂಸದ ಸಂಗಣ್ಣ ಅಗಡಿ ಅವರ ರೀತಿಯಲ್ಲಿಯೇ ಅಭಿವೃದ್ಧಿ ರಾಜಕಾರಣ ಮಾಡಿದವರು ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಸಂಘವನ್ನು ಕಟ್ಟಿ ಬೆಳೆಸಿದ ಮಾಜಿ ಶಾಸಕ ಕೆ. ರಾಮಭಟ್ ಹೊನ್ನಾವರದ ವೈದ್ಯ ಡಾ. ಎಂ.ಪಿ. ಕರ್ಕಿ, ಪ್ರೊ. ಕೆ.ಎಸ್. ನಾರಾಯಣಾಚಾರ್ಯ, ಹಿರಿಯ ನಟ ಎಸ್. ಶಿವರಾಂ ಅವರ ಬದುಕು ಮತ್ತು ಸಾಧನೆಗಳನ್ನು ಮುಖ್ಯಮಂತ್ರಿಯವರು ಗುಣಗಾನ ಮಾಡಿದರು.

ನಟ ಪುನೀತ್ ಸ್ಮರಣೆ: ಪ್ರತಿಭೆ, ಸಜ್ಜನಿಕೆ ಹಾಗೂ ವಿಚಾರಗಳ ಮೇರು ಸಂಗಮವಾಗಿದ್ದ ಪುನೀತ್ ರಾಜಕುಮಾರ್ ಅವರು 46ರ ಯೌವನದಲ್ಲಿಯೇ ಅಕಾಲಿಕವಾಗಿ ಸಾವಿಗೀಡಾಗಿರುವುದು ನಾಡಿಗೆ ಆಗಿರುವ ದೊಡ್ಡ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಷಾದಿಸಿದರು.

ಕಳೆದ ಅಕ್ಟೋಬರ್ 29 ರಂದು ಬೆಳಗಿನ ವ್ಯಾಯಾಮ ಕಸರತ್ತುಗಳನ್ನು ಮುಗಿಸಿ ಸಹಜವಾಗಿಯೇ ಇದ್ದ ಪುನೀತ್ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದದ್ದು ದೊಡ್ಡ ದುರಂತ. ಘಟನೆ ಸಂಭವಿಸಿದ ತಕ್ಷಣ ಅವರ ಕುಟುಂಬದೊಂದಿಗೆ ಮಾತನಾಡಿ ಅವರ ಸಹಕಾರದೊಂದಿಗೆ ಯಾವುದೇ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಚ್ಚರವಹಿಸಿ ಅಂತಿಮ ವಿಧಿ ವಿಧಾನಗಳನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಹರಿದ ಬಂದ ಜನಸಾಗರ, ಯುವಕರ ಅಭಿಮಾನ, ಭಾವನಾತ್ಮಕವಾಗಿ ಜನರ ಹೃದಯದಲ್ಲಿ ಗಳಿಸಿದ ಸ್ಥಾನಕ್ಕೆ ಸಾಕ್ಷಿಯಾಯಿತು. ಸದಾಕಾಲ ಬಡವರು, ಅನಾಥರು, ವೃದ್ಧರ ಹಿತಚಿಂತನೆ ಮಾಡಿದ ಪುನೀತ್ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಅನುಕೂಲಕ್ಕೆ ಸ್ವತ: ಆಸಕ್ತಿವಹಿಸಿ ಡಾ. ರಾಜಕುಮಾರ್ ಲರ್ನಿಂಗ್ ಆ್ಯಪ್ ರೂಪಿಸಿದ್ದರು. ಈ ಮೊಬೈಲ್ ಅಪ್ಲಿಕೇಶನ್‍ನ್ನು ತಮ್ಮಿಂದ ಬಿಡುಗಡೆ ಮಾಡಿಸಿದ್ದರು ಎಂದು ಮುಖ್ಯಮಂತ್ರಿಗಳು ನೆನಪುಗಳನ್ನು ಮೆಲಕು ಹಾಕಿದರು. ವನ್ಯಜೀವಿ ಸಂರಕ್ಷಣೆ ಹಾಗೂ ಪರಿಸರ ಕಾಳಜಿ ಕುರಿತು ವೆಬ್ ಬಿಡುಗಡೆ ಮಾಡಲು ಕೋರಿದ್ದರು. ಆ ಕುರಿತು ಚರ್ಚಿಸಲು ಅಕ್ಟೋಬರ್ 30 ರಂದು ದಿನಾಂಕ ನಿಗದಿಪಡಿಸಿದ್ದೆವು. ಆದರೆ ವಿಧಿ ಲಿಖಿತ ಬೇರೆಯೇ ಇತ್ತು. ಅಕ್ಟೋಬರ್ 29 ರಂದೇ ಅವರು ನಮ್ಮಿಂದ ದೂರವಾಗಿ ಬಾರದ ಲೋಕಕ್ಕೆ ತೆರಳಿದರು. ರಾಜ್ಯ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಿದೆ. ಪ್ರಶಸ್ತಿ ಪ್ರದಾನ ದಿನಾಂಕ ನಿಗದಿಪಡಿಸಲಾಗುವುದು. ಭಾರತ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿಗೂ ಪುನೀತ್ ಹೆಸರನ್ನು ಶಿಫಾರಸ್ಸು ಮಾಡಲಾಗುವುದು ಎಂದರು.
ಪ್ರತಿಪಕ್ಷದ ನಾಯಕ ಎಸ್. ಸಿದ್ದರಾಮಯ್ಯ ಮಾತನಾಡಿ, ರಷ್ಯಾದ ಅತ್ಯಾಧುನಿಕ ತಂತ್ರಜ್ಞಾನಗಳಿಂದ ನಿರ್ಮಿತವಾದ ಸೇನಾ ಹೆಲಿಕ್ಯಾಪ್ಟರ್ ದುರಂತದಲ್ಲಿ ಜನರಲ್ ಬಿಪಿನ್ ರಾವತ್ ಹಾಗೂ ಇತರ ಸೇನಾಧಿಕಾರಿಗಳು ಮರಣ ಹೊಂದಿರುವುದು ಅಘಾತ ಉಂಟು ಮಾಡಿದೆ. ನಟ ಪುನೀತ್ ರಾಜಕುಮಾರ್ ಅವರ ಜನಪ್ರಿಯತೆ ಚಲನಚಿತ್ರ ರಂಗದ ಆಚೆಯೂ ವ್ಯಾಪಕವಾಗಿತ್ತು. ಅವರ ನಿಧನಕ್ಕೆ ಸಮಸ್ತ ಕನ್ನಡಿಗರು ಕಂಬನಿ ಮಿಡಿದಿದ್ದಾರೆ. ವರ ನಟ ಡಾ. ರಾಜಕುಮಾರ್ ಅವರ ಮಗನಾಗಿದ್ದರೂ ಕೂಡ ಅವರ ಪ್ರಭಾವದ ಹೊರತಾಗಿ ಸ್ವಂತ ವ್ಯಕ್ತಿತ್ವ ರೂಪಿಸಿಕೊಂಡಿದ್ದರು. ಹಿರಿಯ ನಟ ಶಿವರಾಂ ಆಧ್ಯಾತ್ಮ ಹಾಗೂ ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದರು. ಅವರ ಮನೆಯಲ್ಲಿರುವ ಖಾಸಗಿ ಪುಸ್ತಕಗಳ ಸಂಗ್ರಹವನ್ನು ಸರ್ಕಾರ ಗ್ರಂಥಾಲಯವಾಗಿ ಪರಿವರ್ತಿಸಲು ಯೋಚಿಸಬೇಕೆಂದು ಸಲಹೆ ನೀಡಿದರು.
ಕೊಪ್ಪಳದ ಮಾಜಿ ಸಚಿವ ವಿರೂಪಾಕ್ಷಪ್ಪ ಅಗಡಿ ಅವರು ನಿಷ್ಠುರ ನಾಯಕರಾಗಿದ್ದರು. ತಾವು ಕೊಪ್ಪಳದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ತಮಗೆ ಹೊಟೇಲ್‍ನಲ್ಲಿ ತಂಗಲು ಬಿಡದೇ ಅವರ ಮನೆಯಲ್ಲಿಯೇ ಉಳಿಸಿಕೊಂಡಿದ್ದರು. ಚುನಾವಣೆಯ ಏಜೆಂಟ್ ಆಗಿ ಬೆಂಬಲಿಸಿದ್ದರು ಎಂದರು.
ಮಾಜಿ ರಾಜ್ಯಪಾಲ ಕೆ. ರೋಸಯ್ಯ, ಕೆ. ರಾಮಭಟ್, ಡಾ. ಎಂ.ಪಿ. ಕರ್ಕಿ, ಕೆ.ಎಸ್. ನಾರಾಯಣಾಚಾರ್ಯ ಅವರ ಪ್ರತಿಭೆಯನ್ನು ಸಿದ್ದರಾಮಯ್ಯ ಸ್ಮರಿಸಿದರು.

ಜೆ.ಡಿ.ಎಸ್. ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಖಾಶೆಂಪುರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್, ಮುಜರಾಯಿ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರುಗಳಾದ ಟಿ.ಡಿ. ರಾಜೇಗೌಡ, ಶಿವಲಿಂಗೇಗೌಡ, ಎಸ್. ಅಂಗಾರ, ಎನ್. ಮಹೇಶ, ಕುಮಾರ ಬಂಗಾರಪ್ಪ ಮತ್ತಿತರರು ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದರು. ಅಗಲಿದ ಗಣ್ಯರಿಗೆ ಸದನವು ಮೌನಾಚರಣೆ ಮಾಡಿ ಗೌರವ ಸಲ್ಲಿಸಿತು.


error: Content is protected !!