ವಿಕಲಚೇತನರು ಐಪಿಎಸ್ ಸೇವೆಗೆ ಅರ್ಜಿ ಸಲ್ಲಿಸಲು ಏ. 1ರವರೆಗೆ ಅವಕಾಶ: ಸುಪ್ರಿಂ ಆದೇಶ

ವಿಕಲಚೇತನರೂ ಸಹ ಐಪಿಎಸ್ (ಭಾರತೀಯ ಪೊಲೀಸ್ ಸೇವೆ), ಐಆರ್‌ಪಿಎಫ್‌ಎಸ್ (ಭಾರತೀಯ ರೈಲ್ವೆ ಭದ್ರತಾ ಪಡೆ), ಡಿಎಎನ್‌ಐಪಿಎಸ್ (ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ಐಲೆಂಡ್ ಪೊಲೀಸ್ ಸೇವೆ)ಗೆ ಯುಪಿಎಸ್ಸಿಗೆ ಅರ್ಜಿ ಸಲ್ಲಿಸಲು ಸುಪ್ರಿಂಕೋರ್ಟ್ ಅವಕಾಶ ನೀಡಿದೆ.
ಕೇಂದ್ರದ ಆಗಸ್ಟ್ 18, 2021 ರ ಅಧಿಸೂಚನೆಯನ್ನು ಪ್ರಶ್ನಿಸುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಎ.ಎಸ್. ಓಕಾ ಅವರ ಪೀಠಕ್ಕೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಈ ವಿಷಯದಲ್ಲಿ ಪ್ರತಿ ಅಫಿಡವಿಟ್ ಸಲ್ಲಿಸಲು ಸರ್ಕಾರವು ಸಮಯ ಬಯಸುತ್ತದೆ ಎಂದು ತಿಳಿಸಿದರು. ಅಫಿಡವಿಟ್ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠಕ್ಕೆ ತಿಳಿಸಿದರು.
ಈ ವಿನಂತಿ ನ್ಯಾಯಸಮ್ಮತ ಮತ್ತು ಸಮಂಜಸವಾಗಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಅದರ ಪ್ರಕಾರ, ಏಪ್ರಿಲ್ 1, 2022 ರಂದು ಅಥವಾ ಅದಕ್ಕೂ ಮೊದಲು ಪ್ರಧಾನ ಕಾರ್ಯದರ್ಶಿ, ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಅವರ ಕಚೇರಿಯಲ್ಲಿ ಸಂಜೆ 4 ಗಂಟೆಯ ಮೊದಲು ಅರ್ಜಿ ಸಲ್ಲಿಸಬಹುದು ಎಂದು ಪೀಠ ಹೇಳಿದೆ.
ಈಗ ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆಯನ್ನು ಯಾವುದೇ ರೀತಿಯಲ್ಲಿ ತಡೆಯಬಾರದು ಎಂದು ತನ್ನ ಆದೇಶದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪೀಠವು ಏಪ್ರಿಲ್ 18ರಂದು ವಿಚಾರಣೆಯನ್ನು ಮುಂದೂಡಿದೆ.