ವಾರದಲ್ಲಿ 3 ದಿನ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಅವಕಾಶ: ಡಿಸಿ

ಕೊಡಗು: ಕೋವಿಡ್-19 ನಿಯಂತ್ರಣ ಜೊತೆಗೆ, ಸರ್ಕಾರದ ಮಾರ್ಗಸೂಚಿ ಪಾಲಿಸುವ ನಿಟ್ಟಿನಲ್ಲಿ ವಾರದ 3 ದಿನ ಬೆಳಗ್ಗೆ 06 ರಿಂದ ಬೆಳಗ್ಗೆ 10 ಗಂಟೆ ಯವರೆಗೆ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಅವಕಾಶ ಮಾಡಲು ಉದ್ದೇಶಿಸಲಾಗಿದೆ ಎಂದು ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ಸರ್ಕಾರ ಹೊರಡಿಸಿರುವ ಲಾಕ್‍ಡೌನ್ ಮಾರ್ಗಸೂಚಿ ಪಾಲನೆ ಸಂಬಂಧ ಅಧಿಕಾರಿಗಳ ಜೊತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಗ್ಗೆ 6 ರಿಂದ ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಲು ಉದ್ದೇಶಲಾಗಿದ್ದು, ಈ ಬಗ್ಗೆ ಲಿಖಿತ ಆದೇಶ ಹೊರಡಿಸಲಾಗುವುದು ಎಂದರು.
ಸಂತೆಗೆ ಆಗಮಿಸಿ ತರಕಾರಿ, ಹಣ್ಣು ಮತ್ತು ಇತರೆ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದವರಿಗೆ, ತಾತ್ಕಾಲಿಕ ಗುರುತಿನ ಚೀಟಿ ನೀಡಿ ತರಕಾರಿ, ಹಣ್ಣನ್ನು ತಳ್ಳುಗಾಡಿ ಅಥವಾ ಚಿಕ್ಕ ಗೂಡ್ಸ್ ವಾಹನದಲ್ಲಿ ಬಡಾವಣೆಗೆ ತೆರಳಿ ಮಾರಾಟ ಮಾಡಲು ಅವಕಾಶ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ತರಕಾರಿ ಅಥವಾ ಇನ್ನಿತರೆ ಖರೀದಿಗೆ ಮಾರುಕಟ್ಟೆ ಬರುವುದನ್ನು ತಪ್ಪಿಸಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಬಡಾವಣೆಗೆ ತೆರಳಿ ತರಕಾರಿ ಮತ್ತು ಹಣ್ಣು ಮಾರಾಟ ಮಾಡುವವರಿಗೆ ವಾರಕ್ಕೊಮ್ಮೆ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು ಸಲಹೆ ಮಾಡಿದರು.

ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಕಡಿಮೆಯಾಗುತ್ತಿಲ್ಲ, ಆದ್ದರಿಂದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಿ ಪರೀಕ್ಷೆ ಮಾಡುವುದರ ಜೊತೆಗೆ, ಹೋಂ ಕ್ವಾರಂಟೈನ್‍ಗಳಲ್ಲಿ ಕಡ್ಡಾಯವಾಗಿ ಇರುವಂತೆ ಕ್ರಮವಹಿಸಬೇಕು. ಆ ನಿಟ್ಟಿನಲ್ಲಿ ಅಗತ್ಯ ಕಾಳಜಿ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂಬಂಧ ತಹಶೀಲ್ದಾರಗಳು, ತಾ.ಪಂ.ಇಒಗಳು ಗಮನಹರಿಸಬೇಕು. ಕೋವಿಡ್ 19 ಪಾಸಿಟಿವ್ ಕಂಡುಬಂದಲ್ಲಿ ಅವರ ಮನೆಯವರ ಜೊತೆಗೆ ಸಂಪರ್ಕಿತರನ್ನು ಪತ್ತೆ ಹಚ್ಚಬೇಕು. ನಿಯಮಗಳನ್ನು ಉಲಂಘಿಸಿದ್ದಲ್ಲಿ ಅಂತಹವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಯವರು ಕಂದಾಯ, ಪೊಲೀಸ್, ಪಂಚಾಯತರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸ್ಥಳೀಯ ಸಂಸ್ಥೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಏಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಸಂಪರ್ಕಿತರನ್ನು ಪತ್ತೆ ಹಚ್ಚುವಲ್ಲಿ ಇನ್ನಷ್ಟು ಪ್ರಯತ್ನಿಸಬೇಕಿದೆ. ಸೋಂಕಿತರು ಕಂಡುಬಂದಲ್ಲಿ ಕೋವಿಡ್ ಆರೈಕೆ ಕೇಂದ್ರಕ್ಕೆ ಕಳುಹಿಸಬೇಕು. ಅಗತ್ಯ ಮಾತ್ರೆಗಳನ್ನು ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಹೋಂ ಐಷೋಲೇಶನ್‍ಲ್ಲಿ ಇರುವವರು ಬಗ್ಗೆ ಆಗಾಗ ನಿಗಾ ವಹಿಸಬೇಕು. ಕೋವಿಡ್ ಆರೈಕೆ ಕೆಂದ್ರಗಳಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸುಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಅಂತರ ರಾಜ್ಯ ಮತ್ತು ಅಂತರ ಜಿಲ್ಲೆಯಿಂದ ಆಗಮಿಸುವವರ ಮಾಹಿತಿ ಸಂಗ್ರಹಿಸಿ, ಅಂತಹವರನ್ನು ಹೋಂ ಕ್ವಾರಂಟೈನ್ ಮಾಡಿ, ಸೀಲ್ ಹಾಕುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

error: Content is protected !!