ವಾರಣಾಸಿಯ ತುಂಬಾ ಶಿವ ನಾಮಸ್ಮರಣೆ!

ವಾರಣಾಸಿ: ಪೂರ್ತಿ ವಿಶ್ವವೇ ಸೋಮವಾರದಂದು ಮಹಿಳಾ ದಿನಾಚರಣೆಯನ್ನು ಆಚರಿಸಿದೆ. ಆದರೆ ಭಾರತದ ಪುಣ್ಯ ಕ್ಷೇತ್ರವಾದ ವಾರಣಾಸಿಯಲ್ಲಿ ಈ ದಿನವನ್ನು ಸಂಪೂರ್ಣ ವಿಶೇಷವಾಗಿ ಆಚರಿಸಲಾಗಿದೆ. 14 ರಾಜ್ಯಗಳ ಸಾವಿರ ಮಹಿಳೆಯರು ಒಂದೆಡೆ ಸೇರಿ, ಗಂಗೆಗೆ ಅಭಿಮುಖವಾಗಿ ನಿಂತು ಒಕ್ಕೊರಲಿನಿಂದ ಶಿವ ತಾಂಡವ ಗೀತೆಯನ್ನು ಹಾಡಿದ್ದಾರೆ.

ಇಂತದ್ದೊಂದು ವಿಶೇಷ ಕಾರ್ಯಕ್ರಮವನ್ನು ಮುಂಬೈನ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಮಗ್ರ ಅಭಿವೃದ್ಧಿಯ ಪ್ರತಿಷ್ಠಾನದ ವತಿಯಿಂದ ನಡೆಸಲಾಗಿದೆ. ವಾರಣಾಸಿಯ ಅಸ್ಸಿ ಘಾಟ್ನಲ್ಲಿ ಗಂಗಾ ನದಿಯ ದಡದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೆಹಲಿ, ಕೇರಳ ಮಹಾರಾಷ್ಟ್ರ ಸೇರಿ ಒಟ್ಟು 14 ರಾಜ್ಯಗಳಿಂದ ಬಂದಿದ್ದ ಒಂದು ಸಾವಿರ ಮಹಿಳೆಯರು ಒಂದೇ ರೀತಿಯ ಬಟ್ಟೆ ಧರಿಸಿ ಶಿವ ತಾಂಡವ ಗೀತೆ ಹಾಡಿದ್ದಾರೆ. ಕೈನಲ್ಲಿ ದೀಪ ಹಿಡಿದು ಶಿವನ ನಾಮ ಹಾಡಿದ ವಿಡಿಯೋ ಎಂತವರನ್ನು ಒಮ್ಮೆಲೆ ಭಕ್ತಿಯಿಂದ ಕೈ ಮುಗಿಯುವಂತೆ ಮಾಡಿದೆ.

ಕಾರ್ಯಕ್ರಮದಲ್ಲಿ ಕರೊನಾ ಮುಂಜಾಗ್ರತೆಯನ್ನೂ ವಹಿಸಲಾಗಿತ್ತು. ಅಲ್ಲಿದ್ದ ಪ್ರತಿಯೊಬ್ಬ ಮಹಿಳೆಯು ಮುಖಕ್ಕೆ ಫೇಸ್​ ಶೀಲ್ಡ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಶಿವ ತಾಂಡವದ ನಂತರ ಗಂಗಾ ಆರತಿಯನ್ನೂ ಮಾಡಲಾಗಿದೆ.

error: Content is protected !!