ವಾಂಡರ್ಸ್ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ

ಮಡಿಕೇರಿ, ಏ.೧; ವಾಂಡಸ್೯ ಕ್ಲಬ್ ವತಿಯಿಂದ ಏರ್ಪಡಿಸಿಕೊಂಡು ಬರುತ್ತಿರುವ ೨೭ನೇ ವರ್ಷದ ಉಚಿತ ಬೇಸಿಗೆ ಶಿಬಿರಕ್ಕೆ ಇಂದು ಚಾಲನೆ ನೀಡಲಾಯಿತು. ಜಿಲ್ಲಾ ಕ್ರೀಡಾಂಗಣದಲ್ಲಿ ಶಿಬಿರ ಆರಂಭಗೊAಡಿತು. ಶಿಬಿರ ಆಯೋಜನೆಗೆ ಕಾರಣಕರ್ತರಾದ, ಕೊಡಗಿನ ಕ್ರೀಡಾ ಕ್ಷೇತ್ರದ ಭೀಷ್ಮ ಎಂದೇ ಜನಜನಿತವಾಗಿದ್ದ ದಿ. ಸಿ.ವಿ.ಶಂಕರ್ ಸ್ವಾಮಿ ಅವರ ಜನ್ಮ ದಿನವಾದ ಇಂದು ಅವರ ಹಾಗೂ ಸದ್ಗುರು ದಿ. ಬಿ.ಕೆ. ಸುಬ್ಬಯ್ಯ ಅವರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಅಥಿತಿಯಾಗಿ ಪಾಲ್ಗೊಂಡಿದ್ದ ಹಿರಿಯರಾದ ಜಿ.ಟಿ. ರಾಘವೇಂದ್ರ ಮಾತನಾಡಿ; ವಿದ್ಯಾರ್ಥಿಗಳು ಶಿಸ್ತು ಪಾಲನೆಯೊಂದಿಗೆ ಗುರುಗಳಿಗೆ ಗೌರವ ನೀಡಬೇಕು, ಎಂದಿಗೂ ಗುರಿಯೊಂದಿಗೆ ಗುರು ಇರಬೇಕು, ಶಿಬಿರದಲ್ಲಿ ಕಲಿತದ್ದನ್ನು ಪರಿಪಾಲನೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕೆಂದು ಹೇಳಿದರು.
ಶಕ್ತಿ ಪತ್ರಿಕೆ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ಮಕ್ಕಳು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಅದರ ಪ್ರಯೋಜನ ಪಡೆದುಕೊಳ್ಳಬೇಕು. ಜೀವನ ಎಂದಿಗೂ ಶಾಶ್ವತವಲ್ಲ, ಎಂದಾದದರು ಒಂದು ದಿನ ಎಲ್ಲರೂ ಹೋಗಲೇಬೇಕಿದೆ. ಆದರೆ ಹೋಗುವ ಮುನ್ನ ಏನಾದರೂ ಸಾಧನೆ ಮಾಡುವದರೊಂದಿಗೆ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಿ ಹೋಗಬೇಕು. ಶಿಬಿರದಲ್ಲಿ ಕಲಿತದನ್ನು ಮುಂದುವರಿಸುತ್ತಾ ರಾಜ್ಯ, ರಾಷ್ಟç ಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ವಾಂಡರ‍್ಸ್ ಅಧ್ಯಕ್ಷ ಕೋಟೇರ ಮುದ್ದಯ್ಯ ಶುಭ ಹಾರೈಸಿದರು.
ರಾಷ್ಟ್ರೀಯ ಹಾಕಿ ಆಟಗಾರ ಗಣೇಶ್, ಸಿ.ವಿ.ಶಂಕರ್ ಅವರ ಪುತ್ರ ಗುರುದತ್, ಪತ್ನಿ ಪುಣ್ಯ, ವಾಂಡರ‍್ಸ್ ಕಾರ್ಯದರ್ಶಿ ಬಾಬು ಸೋಮುಯ್ಯ, ತರಬೇತುದಾರರಾದ ಶಾಂ ಪೂಣಚ್ಚ, ಕುಡೆಕಲ್ ಸಂತೋಷ್, ಅಶೋಕ್, ಮಹಮ್ಮದ್ ಆಸಿಫ್ ಇತರರಿದ್ದರು. ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್ ಕಾರ್ಯಕ್ರಮ ನಿರ್ವಹಿಸಿ, ಶಿಬಿರಾರ್ಥಿಗಳಿಗೆ ಯೋಗ, ಪ್ರಾಣಾಯಾಮ ಹೇಳಿಕೊಟ್ಟರು. ಇದೇ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಮಕ್ಕಳಿಗೆ ಹಂಚಿ ಶಂಕರ್ ಅವರ ಹುಟ್ಟು ಹಬ್ಬ ಆಚರಿಸಲಾಯಿತು. ಮೇ.೧ರವರೆಗೆ ಶಿಬಿರ ನಡೆಯಲಿದೆ.