ವರ್ತಕರ ಮೇಲೆ ಮೊಕದ್ದಮೆ: ಚೇಂಬರ್ ಆಕ್ರೋಶ

ಕೊಡಗು: ಕೊರೊನಾ ಹಾಗೂ ಲಾಕ್ ಡೌನ್ ನಿಂದ ಕಂಗಾಲಾಗಿರುವ ವರ್ತಕ ಸಮುದಾಯದ ವಿರುದ್ಧ ಮಡಿಕೇರಿಯಲ್ಲಿ ಪೊಲೀಸರು ಅನವಶ್ಯಕ ಮೊಕದ್ದಮೆ ದಾಖಲಿಸುತ್ತಿದ್ದು, ಈ ಬಗ್ಗೆ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮಡಿಕೇರಿ ಸ್ಥಾನೀಯ ಸಮಿತಿ ತೀವ್ರ ಕಳವಳ ವ್ಯಕ್ತಪಡಿಸಿದೆ.
ಅಂಗಡಿ ಮುಂಗಟ್ಟುಗಳ ಎದುರು ನಿಯಮ ಪಾಲಿಸದೆ ಗುಂಪು ಗುಂಪಾಗಿ ಜನ ಸೇರುತ್ತಿದ್ದು, ಅಂತಹ ಸಂದರ್ಭ ವರ್ತಕರನ್ನು ಗುರಿಯಾಗಿಸಿ ಪೊಲೀಸರು ವಿವಿಧ ಕಾನೂನಿನಡಿ ಎಫ್ಐಆರ್ ದಾಖಲಿಸುತ್ತಿದ್ದು, ವರ್ತಕರ ಮೇಲಿನ ದಬ್ಬಾಳಿಕೆಯನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿದೆ.
ತಾ. 7ರ ಶುಕ್ರವಾರದಂದು ಮಡಿಕೇರಿಯಲ್ಲಿ ನಿರೀಕ್ಷೆಗೂ ಮೀರಿದ ಜನಸಂದಣಿ ಉಂಟಾಗಿ ವ್ಯಾಪಾರಸ್ಥರು ಕೂಡ ತೊಂದರೆ ಅನುಭವಿಸಬೇಕಾಯಿತು.
ಅಂಗಡಿ ಮುಂಗಟ್ಟುಗಳ ಎದುರು ಜನ ಮುಗಿಬಿದ್ದು ಆಹಾರ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ವರ್ತಕರ ಮನವಿಗೆ ಸ್ಪಂದಿಸದ ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ವರ್ತಕರ ಮೇಲೆ ಮೊಕದ್ದಮೆ ದಾಖಲಿಸಿ ಇದೀಗ ನ್ಯಾಯಾಲಯ ಅಲೆಯುವಂತೆ ಮಾಡಿರುವುದು ಎಷ್ಟು ನ್ಯಾಯ ಎಂದು ಚೇಂಬರ್ ಪ್ರಶ್ನಿಸಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ವರ್ತಕರೊಂದಿಗೆ ಸೌಜನ್ಯದಲ್ಲಿ ವರ್ತಿಸಿದರೂ, ಕೆಲವು ಕಿರಿಯ ಅಧಿಕಾರಿಗಳು ವರ್ತಕರನ್ನು ತುಚ್ಛವಾಗಿ ಏಕವಚನದಲ್ಲಿ ಸಂಭೋದಿಸಿ, ಅಂಗಡಿಯಿಂದ ಹೊರ ಬರುವಂತೆ ಆದೇಶಿಸಿ ದಂಡ ವಿಧಿಸಿದ್ದು, ಇದರಿಂದ ವರ್ತಕರ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಚೇಂಬರ್ ಆಕ್ರೋಶ ವ್ತಕ್ತಪಡಿಸಿದೆ.
ಘಟನೆ ಕುರಿತು ಇಂದು ಅಂತರ್ಜಾಲ ಮೂಲಕ ಸಭೆ ನಡೆಸಿದ ಪದಾಧಿಕಾರಿಗಳು ಹಲವು ಪೊಲೀಸರ ವರ್ತನೆ ಹಾಗೂ ಕ್ರಮವನ್ನು ತೀವ್ರವಾಗಿ ಖಂಡಿಸಿದರು.