fbpx

ವನ್ಯ “ಕನ್ಯೆ”ಯರು


ಫೋಟೋ ಕೃಪೆ :ಸುದೀರ್ ಹೊದೆಟ್ಟಿ
ಕೊಡಗು:ಬಳಕುವ ನೋಟ,ದೂರದ ಪ್ರದೇಶಗಳಿಗೂ ಕೇಳುವ ಇವರ ಮಾತುಗಳು,ಹಾಲಿನ ಬಣ್ಣದ ನೋಟ,ಚುಮುಚುಮು ಚಳಿಯಲ್ಲಿ ಇವರೊಂದಿಗೆ ಚೆಲ್ಲಾಟ ಆಡಬೇಕು ಎನ್ನುವ ಇಚ್ಚೆಯಾದರೂ ಸ್ವಲ್ಪ ಡೇಂಜರ್. ಹೌದು ನಾನು ಹೇಳುತ್ತಿರುವುದು ಭಾಗಮಂಡಲ ಕರಿಕೆ ನಡುವಿನ ತಿರುವುಳಲ್ಲಿ ಸಿಗುವ ವನ್ಯ ಕನ್ಯೆಯರು ಅರ್ಥಾತ್ ಜಲ ಕನ್ಯರ ಬಗ್ಗೆ.

ಭಾಗಮಂಡಲದಿಂದ ಒಂದಷ್ಟು ಕಾಫಿ ತೋಟ,ಏಲಕ್ಕಿ ತೋಟಗಳನ್ನು ದಾಟಿ ತಲಕಾವೇರಿ ವನ್ಯಧಾಮಕ್ಕೆ ಪ್ರವೇಶ ಮಾಡುತ್ತಿದ್ದಂತೆ ಈ ದೃಶ್ಯ ನೋಡಲು ಸಾಧ್ಯ. ಪ್ರತೀ ತಿರುವಿನಲ್ಲಿ ಸಿಗುವ ಈ ಜಲಧಾರೆಗಳು ಮಳೆಗಾಲದಲ್ಲಿ ಭೋರ್ಗರೆಯುವ ಶಬ್ದ ದೂರದ ಪ್ರದೇಶಗಳಿಗೂ ಕೇಳಿಸುತ್ತದೆ.ಮಳೆ ಹೆಚ್ಚಾಗಿ ನೀರು ಇದ್ದರಂತೂ ರಸ್ತೆಯ ಮೇಲೆಯೆ ನೀರು ಧುಮ್ಮಿಕ್ಕಿ ಬರುತ್ತದೆ.
ಬೆಟ್ಟದಲ್ಲಿ ಹುಟ್ಟಿ ಪರಿಶುದ್ದವಾಗಿ ಧುಮ್ಮಿಕ್ಕುವ ಜಲಧಾರೆಗಳು ವರ್ಷಂಪ್ರತಿ ಇದ್ದರೂ ಮಳೆಗಾಲದಲ್ಲಿ ಅಬ್ಬರ ಹೆಚ್ಚಾಗಿರುತ್ತದೆ.ಕಡಿದಾದ ರಸ್ತೆಯಲ್ಲಿ ಕೇರಳ,ಕರಿಕೆ ಭಾಗದಿಂದ ಭಾಗಮಂಡಲ ಕಡೆ ಬರುವ ವೋಹನಗಳು ಹೆಚ್ಚಾಗಿ ಸಂಚಾರ ಮಾಡುವುದರಿಂದ ಇವುಗಳೇನು ಪ್ರವಾಸಿತಾಣವಲ್ಲ,ಕಾಡಿನಲ್ಲೇ ಕಾಡಿನಲ್ಲೇ ಮರೆಯಾಗಿ ಕರಿಕೆ ಪ್ರವೇಶಿಸುವ ಸಂದರ್ಭ ಸಿಗುವ ಭೋರುಕಾ ವಿದ್ಯುತ್ ಘಟಕವನ್ನು ಸೇರುತ್ತದೆ.ಬೆತ್ತ,ಬಿದಿರು ಸೇರಿದಂತೆ ಹುಲಿ,ಕಾಡುಕುರಿ,ಕಾಳಿಂಗ ಸರ್ಪ,ಕಾಡೆಮ್ಮೆ,ಕಾಡಾನೆಗಳ ಆವಾಸತಾಣವಾಗಿರುವ ತಲಕಾವೇರಿ ವನ್ಯಜೀವಿ ವಿಭಾಗದಲ್ಲಿ ಕೆಲವೊಂದು ಭಾರಿ ಇವುಗಳ ದರ್ಶನವಾಗುತ್ತದೆ.ಹಾಗೆ ಜನ ಸಂಚಾರ ಕಡಿಮೆ ಇರುವುದರಿಂದ ಆಗಾಗೆ ಅದೃಷ್ಟವಿದ್ದರೆ ಪ್ರಾಣಿಗಳ ದರ್ಶನವಾಗುವ ಲಕ್ಷಣಗಳಿದೆ.ಇನ್ನು ಭಾಗಮಂಡಲದ ಪೋಲಿಸ್ ಠಾಣೆಯ ಸಮೀಪವೇ ಚೆಕ್ಪೋಸ್ಟ್ ಇದ್ದು ಮತ್ತೊಂದು ಭಾಗದಲ್ಲಿಯೂ ಚೆಕ್ಪೋಸ್ಟ್ ಇದ್ದು ತೀವ್ರ ತಪಾಸಣೆಗಳೂ ನಡೆಯುತ್ತದೆ,ಒಂದು ಕಾಲದಲ್ಲಿ ನಕ್ಷಲ್ ಪೀಡಿತ ಪ್ರದೇಶವೂ ಇದಾಗಿತ್ತು.

ಏನೇ ಇರಲಿ ಕೊಡಗಿನವರಿಗಿಂತ ಹೆಚ್ಚಾಗಿ ಈ ಜಲಪಾತ ವೀಕ್ಷಣೆಗೆ ಕೇರಳಿಗರೇ ಹೆಚ್ಚಾಗಿರುತ್ತಾರೆ,ಜಲಪಾತದ ಬಳಿಯೇ ಊಟ ಮಾಡಿ ಒಂದು ಜರ್ನಿಯ ಪಿಕ್ ನಿಕ್ ಸ್ಪಾಟ್ ಆಗಿಬಿಟ್ಟಿದೆ, ಕೋವಿಡ್ 19 ನಂತರ ಕೇರಳದಿಂದ ಜಿಲ್ಲೆಯ ಪ್ರವೇಶ ನಿಷೇಧ ಇದ್ದ ಕಾರಣ ಕೇರಳಿಗರು ಜಲಪಾತವನ್ನು ಮಿಸ್ ಮಾಡಿಕೊಂಡಿದಂತೂ ನಿಜ,ಅದರಲ್ಲೂ ಮುಸಲ್ಮಾನರ ಹಬ್ಬಗಳು,ಓಣಂ ಸಂದರ್ಭದಲ್ಲಿ ಕುಟುಂಬ ಸಮೇತ ಯುವಕ ಯುವತಿಯರು ಮೋಜು ಮಸ್ತಿ ನಡೆಸುತ್ತಾರೆ. ದಾರಿಯುದ್ದಕ್ಕೂ ಸಣ್ಣ ಪುಟ್ಟ ಜಲಪಾತ ಸೇರಿದಂತೆ ಎರಡು ಪ್ರಮುಖ ಜಲಪಾತಗಳಿದ್ದು ಇದೀಗ ವೀಕ್ಷಣೆಗೆ ಯೋಗ್ಯವಾಗಿದೆ. ಧಾರಾಕಾರ ಮಳೆ,ದಟ್ಟ ಮಂಜು,ಚಳಿ ನಡುವೆ ಈ ಜಲಕನ್ಯರ ಸೌಂದರ್ಯ ನೋಡುವುದೇ ಒಂದು ಅವಿಸ್ಮರಣೀಯ ಕ್ಷಣ. ಕಡಿದಾದ ರಸ್ತೆಗಳು, ಆಗಾಗೆ ಕಾಡಿನ ಮರಗಳು ರಸ್ತೆಗೆ ಬಿದೊದಿರುತ್ತದೆ.ಮೊದಲೇ ಹೇಳಿದಂತೆ ಇದ್ಯಾವುದೇ ಪ್ರವಾಸಿ ತಾಣವಲ್ಲದ ನೈಸರ್ಗಿಕವಾಗಿ ಧುಮ್ಮಿಕ್ಕುವ ಜಲಪಾತವಾಗಿರುವ ಕಾರಣ ನಿಮ್ಮ ಸ್ವಂತ ವಾಹನದಲ್ಲೇ ತೆರಳಬೇಕು,ಪ್ಲಾಸ್ಟಿಕ್ ಬಳಕೆ,ಮದ್ಯಪಾನ ಮಾಡಿ ಬಾಟಲಿಗಳನ್ನು ಬಿಸಾಡುವುದು ಸಂಪೂರ್ಣ ನಿಷೇಧವಾಗಿದ್ದು ಅರಣ್ಯ ಇಲಾಖೆ ಗಮನಕ್ಕೆ ಬಂದರೆ ದಂಡ ಖಂಡಿತವಾಗಿಯೂ ಕಟ್ಟಬೇಕಾಗುತ್ತೆ. ಭೇಟಿ ನೀಡುವುದಾದರೆ ಈ ಸಂದರ್ಭ ಸೂಕ್ತವಾಗಿದೆ.

error: Content is protected !!