ವಂಚನೆ ಪ್ರಕರಣ ಪತ್ತೆ , ಆರೋಪಿಗಳ ಬಂಧನ

ಕೊರಿಯರ್ ಸಂಸ್ಥೆಯ ನೌಕರರು ಆಪಲ್ ಕಂಪನಿಯ ಅಸಲಿ ಮೊಬೈಲ್ ಚಾರ್ಜರ್ ಗಳನ್ನು ತೆಗೆದು ನಕಲಿ ಚಾರ್ಜರ್‌ಗಳನ್ನು ಹಾಕಿ ಸಂಸ್ಥೆಗೆ ವಂಚನೆ ಮಾಡಿದ್ದ ಪ್ರಕರಣವನ್ನು ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪತ್ತೆ ಮಾಡಿ ಐವರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಮೆ. ಡೆಲಿವರಿ ಲಿಮಿಟೆಡ್ ಎಂಬ ಖಾಸಗಿ ಕೊರಿಯರ್ ಕಂಪನಿಯ ಮುಖಾಂತರ ದಿನಾಂಕ: 09-05-2022 ರಿಂದ 23-08-2022 ರವರಗೆ ಬೇರೆ ಬೇರೆ ದಿನಗಳಲ್ಲಿ ವಿವಿಧ ಕಂಪನಿಯ, ಮುಖ್ಯವಾಗಿ ಆಪಲ್ ಕಂಪನಿಯ ಮೊಬೈಲ್ ಚಾರ್ಜರ್‌ಗಳನ್ನು ಹಾಸನದ ಗೋದಾಮಿನಿಂದ ಕುಶಾಲನಗರದ ವ್ಯಾಪಾರಸ್ಥರಿಗೆ ರವಾನಿಸಿದಾಗ ಉಡಾನ್ ಕಂಪನಿಯ ಉದ್ಯೋಗಿ ಹಿತೇಶ್ ರೈ ಕೊರಿಯರ್ ಬಾಯ್‌ಗಳೊಂದಿಗೆ ಸೇರಿಕೊಂಡು ಆಪಲ್ ಕಂಪನಿಯ ಅಸಲಿ ಮೊಬೈಲ್ ಚಾರ್ಜರ್ ಗಳನ್ನು ತೆಗೆದು ನಕಲಿ ಮೊಬೈಲ್ ಚಾರ್ಜರ್‌ಗಳನ್ನು ಹಾಕಿ ಸಂಸ್ಥೆಗೆ 25 ಲಕ್ಷ ರೂ ವಂಚನೆ ಮಾಡಿದ್ದು ಈ ಬಗ್ಗೆ ದಿನಾಂಕ: 4-09-2022 ರಂದು ನೀಡಿದ ಪುಕಾರಿನ ಮೇರೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಕುಶಾಲನಗರ ಪಟ್ಟಣ ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿಯವರನ್ನೊಳಗೊಂಡ ತಂಡ ಆರೋಪಿಗಳಾದ 1). ಹಿತೇಶ್ ರೈ, ಸುರತ್ಕಲ್, ದಕ್ಷಿಣ ಕನ್ನಡ, 2). ಧರ್ಮ ಎಸ್.ಆರ್ ,ಗುಡ್ಡೆಹೊಸೂರು, ಕುಶಾಲನಗರ ತಾಲ್ಲೂಕು. 3). ತೀರ್ಥೇಶ್ ರೈ ಪಿ.ಕೆ, ರಂಗಸಮುದ್ರ, ಕುಶಾಲನಗರ ತಾಲ್ಲೂಕು. 4). ಕೀರ್ತನ್ ಎಂ.ಟಿ , ಆದಿ ಶಂಕರಾಚಾರ್ಯ ಬಡಾವಣೆ, ಕುಶಾಲನಗರ., 5). ವಿನಯ್ ಎಸ್.ಆರ್, ಶಿರಂಗಾಲ ಗ್ರಾಮ, ಕುಶಾಲನಗರ ತಾಲ್ಲೂಕು. ಎಂಬುವವರನ್ನು ದಸ್ತಗಿರಿ ಮಾಡಿ ಬಂಧಿತರಿಂದ ₹. 14,10,000 ನಗದು, ₹. 73,000 ಮೌಲ್ಯದ ಮೊಬೈಲ್ ಚಾರ್ಜರ್‌ಗಳು, 1874 ನಕಲಿ ಮೊಬೈಲ್ ಚಾರ್ಜರ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಸೋಮವಾರಪೇಟೆ ಉಪವಿಭಾಗ ಡಿವೈ.ಎಸ್.ಪಿ ಆರ್.ವಿ ಗಂಗಾಧರಪ್ಪ ರವರ ನೇತೃತ್ವದ ಕುಶಾಲನಗರ ವೃತ್ತ ಸಿ.ಪಿ.ಐ ಬಿ.ಜಿ ಮಹೇಶ್, ಕುಶಾಲನಗರ ಠಾಣೆ ಪಿಎಸ್‌ಐ ಎಂ.ಡಿ ಅಪ್ಪಾಜಿ, ಪ್ರೊ.ಪಿಎಸ್.ಐ ಕಾಶಿನಾಥ ಬಗಲಿ, ಎಎಸ್‌ಐ ಗಣಪತಿ ಪಿ.ಕೆ, ಸಿಬ್ಬಂದಿಯವರಾದ ಜಯಪ್ರಕಾಶ್, ಸಂದೀಪ್, ಅರುಣ್ ಕುಮಾರ್, ಮನೋಜ್ ಕುಮಾರ್, ಸಿದ್ದರಾಜು, ಶ್ರೀಮತಿ ಸೌಮ್ಯ, ರಾಜೇಶ್, ಗಿರೀಶ್, ಪ್ರವೀಣ್, ಯೋಗೇಶ್ ರವರು ಪಾಲ್ಗೊಂಡಿದ್ದರು. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.