ಲಾಕ್ ಡೌನ್ ಸಂದರ್ಭದ ಆಪತ್ಬಾಂಧವರು

ಬೆಳಗಾವಿಯಲ್ಲಿ ನಿರಂತರ ಸೇವೆ ಸಲ್ಲಿಸಿದ ಯುವಕರ ತಂಡ

ಬೆಳಗಾವಿ : ಲಾಕ್ ಡೌನ್ ಸಂದರ್ಭದಲ್ಲಿ ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಮೂಲಕ ಬೆಳಗಾವಿಯ ಕೆಲವೊಂದು ಸ್ವಯಂ ಸೇವಾ ಸಂಸ್ಥೆಗಳು ತಮ್ಮ ಸೇವಾ ಕಾರ್ಯವನ್ನು ಭಾನುವಾರ ಮುಕ್ತಾಯಗೊಳಿಸಿವೆ. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಹಸಿದವರಿಗೆ ಊಟ ಹಾಗೂ ಉಪಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬೆಳಗಾವಿ ಜಿಲ್ಲೆಯಾದ್ಯಂತ ಕೊರೋನಾ ಎರಡನೇ ಅಲೆಗೆ ಜನಜೀವನ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿತ್ತು. ನಗರ ಪ್ರದೇಶಗಳಲ್ಲಿ ತುತ್ತು ಅನ್ನಕ್ಕಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲೆಯ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಬಡವರಿಗೆ ಸಹಾಯ ಹಸ್ತ ಚಾಚಿವೆ. ಜಿತೆಗೆ ಕೇವಲ ಒಂದು ದಿನಕ್ಕೆ ಮಾತ್ರ ತಮ್ಮ ಸೇವಾ ಕಾರ್ಯ ಮಾಡದೆ ಕಳೆದ ಒಂದು ತಿಂಗಳಿನಿಂದ ನಿರಂತರ ಸೇವೆ ಮಾಡಿದ್ದು ಭಾನುವಾರ ಕೊನೆಗೊಳಿಸಿವೆ.

ಬಡವರಿಗೆ ಮಹಾಂತ ವಕ್ಕುಂದ ಫೌಂಡೇಶನ್ ಸಂಜೀವಿನಿ : ಹೌದು ಬೆಳಗಾವಿಯ ಯುವ ನಾಯಕ ಮಹಾಂತೇಶ್ ವಕ್ಕುಂದ ಹಾಗೂ ಸ್ನೇಹಿತರ ಬಳಗ ಕಳೆದ ಒಂದು ತಿಂಗಳಿನಿಂದ ನಿರಂತರ ಸೇವೆ ಮಾಡುವ ಮೂಲಕ ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ಕೊರೋನಾ ಎರಡನೇ ಅಲೆ ಭೀಕರತೆ ಅರಿತ ಅವರು ಸ್ವಂತ ಹಣದಿಂದ ಆಕ್ಸಿಜನ್ ವಿತರಣೆ ಮಾಡಿದರು. ನಂತರ ಸತತವಾಗಿ 30 ದಿನಗಳ ವರೆಗೆ ಪ್ರತಿನಿತ್ಯ ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡುವ ಮೂಲಕ ಕೊರೋನಾ ಸಂದರ್ಭದಲ್ಲಿ ಬಡವರಿಗೆ ಸಂಜೀವಿನಿ ಆಗಿದ್ದಂತು ಸುಳ್ಳಲ್ಲ.

ಹಸಿದವರ ಪಾಲಿಗೆ ಆಪತ್ಭಾಂಧವರಾದ ಒನ್ ನೇಷನ್ ಯೂತ್ ಸದಸ್ಯರು : ಸ್ವಂತ ಖರ್ಚಿನಿಂದ ಕಳೆದ ಒಂದು ತಿಂಗಳಿನಿಂದ ಒನ್ ನೇಷನ್ ಯೂತ್ ಸಂಘಟನೆ ಸದಸ್ಯರು ಹಸಿದವರಿಗೆ ಅನ್ನ ನೀಡುವ ಕೆಲಸ ಮಾಡಿದ್ದಾರೆ.

ಪ್ರತಿನಿತ್ಯ ಸುಮಾರು 200 ಜನರಿಗೆ ಊಟ ಹಾಗೂ ಉಪಹಾರ ನೀಡುವ ಮೂಲಕ ಕೊರೋನಾ ಸಂಕಷ್ಟದಲ್ಲಿದ್ದವರ ನೆರವಿಗೆ ನಿಂತಿದ್ದರು. ಅಷ್ಟೇ ಅಲ್ಲದೆ ಕೊರೋನಾ ಸೋಂಕಿತ ಕುಟುಂಬಗಳಿಗೆ ತಾವೇ ಖುದ್ದಾಗಿ ಊಟ ನೀಡುವ ಕೆಲಸವನ್ನು ಈ ತಂಡದ ಸದಸ್ಯರು ಮಾಡಿದ್ದರು. ಜೊತೆಗೆ ನಗರದ ಸರ್ಕಾರಿ ಆಸ್ಪತ್ರೆ ಹಾಗೂ ಅನೇಕ ಸ್ಥಳಗಳಿಗೆ ತೆರಳಿ ಹಸಿದವರಿಗೆ ಊಟ ನೀಡುವ ಕೆಲಸ ಈ ಯುವಕರ ತಂಡ ಮಾಡಿದೆ. ಸಂಪೂರ್ಣ ತಂಡದ ಮುಂದಾಳತ್ವ ವಹಿಸಿದ್ದ ನಾಗರಾಜ್ ಗಸ್ತಿ ಅವರು ಮೊವತ್ತು ದಿನಗಳ ನಿರಂತರ ಸೇವೆಯಲ್ಲಿ ತೊಡಗಿಕೊಂಡು ಹಸಿದವರ ಪಾಲಿಗೆ ಆಪತ್ಭಾಂಧವರಾಗಿದ್ದಂತು ಸತ್ಯ.

ಸೇವೆಯಲ್ಲಿ ದೇವರನ್ನು ಕಂಡ ಡಾ. ಸೋನಾಲಿ : ಹೌದು ವೃತ್ತಿಯಲ್ಲಿ ವೈದ್ಯರಾಗಿರುವ ಬೆಳಗಾವಿಯ ಡಾ. ಸೋನಾಲಿ ಸರ್ನೊಬತ್ ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ನಿರಂತರ ಸೇವೆ ಮಾಡಿದರು. ಅನೇಕ ಕಾಡು ಪ್ರದೇಶದದಲ್ಲಿದ್ದ ಬಡ ಕುಟುಂಬಗಳಿಗೆ ಆಹಾರ ಕಿಟ್ ಮತ್ತು ಔಷಧ ಸೇರಿದಂತೆ ಅನೇಕ ಉಪಯುಕ್ತ ವಸ್ತುಗಳನ್ನು ನೀಡುವ ಮೂಲಕ ತಮ್ಮ ಸೇವೆಯನ್ನು ಸಲ್ಲಿಸಿದ್ದರು. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಇವರು ಮಾಡಿದರು.

error: Content is protected !!