fbpx

ಲಾಕ್ಡೌನ್ ನಿಂದ Some(ಪೂರ್ಣ) ಪರಿಹಾರ!?

-ನಿಶಾ ಹೇಂತಾರ್ , ಹವ್ಯಾಸಿ ಬರಹಗಾರರು

‌ ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರು ಸೋಂಕು ತಡೆಗಟ್ಟುವಲ್ಲಿ ಮಾದರಿಯೆಂದು ಪ್ರಶಂಸಿಸಿದ ಕೇಂದ್ರ ಸರ್ಕಾರದ ಹೊಗಳಿಕೆಯನ್ನು, ತೀವ್ರಗತಿಯಲ್ಲಿ ಏರುತ್ತಿರುವ ಕೊರೊನಾ ಹುಸಿಮಾಡಿಸಿದೆ. ಆರಂಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳಿಗೆ ಸಮಯ ಮೀರಿ ಹೋಗಿದ್ದರಿಂದ ದೇಶದಾದ್ಯಂತ ಲಾಕ್ಡೌನ್ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಇದರಿಂದ ಜನರ ಸುರಕ್ಷತೆ ಬಯಸಿದ ಸರ್ಕಾರಕ್ಕೆ ಶಿಸ್ತುಬದ್ಧ ಪಾಲನೆಯ ಕೊರತೆಯು ಮತ್ತೆ ‌ನಿರಾಸೆ ಮೂಡಿಸಿದೆ.


ಕೊರೊನಾ ಒಂದೆಡೆ ಪ್ರಪಂಚದಾದ್ಯಂತ ಎಲ್ಲಾ ವರ್ಗದ ಜನರಿಗೂ ತನ್ನ ಅಸ್ತಿತ್ವದ ಬಿಸಿ ಮುಟ್ಟಿಸಿದೆ. ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶದಲ್ಲಿ ಬಡವರ ಸಂಖ್ಯೆಯೇ ಬಹಳ. ಅದರಲ್ಲೂ ದಿನಗೂಲಿ ಮಾಡಿ ಹೊಟ್ಟೆ ತುಂಬಿಸೋ ಜನಸಾಮಾನ್ಯರಿಗೆ ಸೋಂಕಿಗಿಂತ ಹಸಿವಿನ ಭರಾಟೆಯೇ ಮಸಣದ ಗುಂಡಿ ತೋಡುವಂತೆ ಮಾಡಿರುವುದು ವಿಷಾದಕರ. ಮತ್ತೊಂದೆಡೆ ದೇಶದ ಆರ್ಥಿಕತೆಯು ಹತ್ತಾರು ವರ್ಷ ಹಿನ್ನಡೆದಿದೆ. ಇವೆಲ್ಲಕ್ಕೂ ಲಾಕ್ಡೌನ್ ಒಂದೇ ಸಂಪೂರ್ಣ ಪರಿಹಾರವಲ್ಲ. ಹೀಗೆ ಲಾಕ್ಡೌನ್ ಮುಂದುವರಿಸುವುದರಿಂದ ಯೋಜನೆಯಿಲ್ಲದ ಭಾರತದ ನಿರ್ಮಾಣವಾಗುವುದರಲ್ಲಿ ಸಂದೇಹವೇ ಇಲ್ಲ. ಬಡಜನರು ಕೊರೊನಾ ವಗ್ಗರಿಸೋ ಮುಂಚೆಯೇ ಸಾವಿಗೆ ಶರಣಾಗುವುದರಲ್ಲಿ ಎರಡು ಮಾತಿಲ್ಲ. ವೇಗವಾಗಿ ಹರಡುತ್ತಿರುವ ಮತ್ತು ತಡಗಟ್ಟಲು ಕಷ್ಟವೆನಿಸಿದ ಕೊರೊನ ಮಹಾಮಾರಿ ಕೊಲೆಗಾರನೇ ಹೌದು. ಆದರೆ ಇಷ್ಟೆಲ್ಲಾ ಲಾಕ್ಡೌನ್ ಆದ ಮೇಲೂ ಹತೋಟಿಗೆ ಸಿಗದಿದ್ದಾಗ ಸಾಮಾನ್ಯ ಪರಿಸ್ಥಿತಿ ಯಲ್ಲೇ ಸಮತೋಲನ(Balanced)ವಾಗಿ ಹತ್ತಿಕ್ಕುವ ಪ್ರಯತ್ನವಾಗಬೇಕಿದೆ.

ಗಾಳಿಯಲ್ಲಿ ಖಾಯಿಲೆ ಹರಡುತ್ತೆ ಅಂದರೆ ಉಸಿರಾಡುವುದನ್ನು ನಿಲ್ಲಿಸಲಾಗುವುದೇ? ನೀರಿನಲ್ಲಿ ಹರಡುತ್ತೆ ಅಂದರೆ ನೀರು ಬಳಸದೆ ಇರಲಾದೀತೆ? ಯಾವುದೋ ಆಕ್ಸಿಡೆಂಟ್ ಆದ ಮಾತ್ರಕ್ಕೆ ವಾಹನ ಸಂಚಾರ ಸ್ಥಗಿತಗೊಳಿಸುವುದೇ? ಹಾಗೆಯೇ ಕಟ್ಟಿಹಾಕುವ ಯೋಚನೆ ಬಿಟ್ಟು ಕಟ್ಟುನಿಟ್ಟಾದ ಯೋಜನೆಯನ್ನು ಪರ್ಯಾಯವಾಗಿ ಕಂಡುಕೊಳ್ಳುವುದು ಉತ್ತಮ. ಏಕಾಏಕಿ ಲಾಕ್ಡೌನ್ ಮಾಡಿದ್ದರಿಂದ ಆದ ಪ್ರಯೋಜನವಾದರೂ ಏನು? ಅದೆಷ್ಟೋ ಮಾನವ ಸಂಪನ್ಮೂಲಗಳನ್ನು ಕಳೆದುಕೊಂಡಾಗಿದೆ. ದುಡಿದು ತಿನ್ನೋ ಕೈಗಳು ಹೊಟ್ಟೆಯ ನೇವರಿಸುತ್ತಿದೆ.

ಕಸುಬು,ಆಹಾರ,ಆಶ್ರಯವಿಲ್ಲದೆ ದಿನವಾದರೂ ಹೇಗೆ ಕಳೆಯೋದು? ಎಷ್ಟೋ ಮನೆಗಳಲ್ಲಿ ಕೌಟುಂಬಿಕ ಕಲಹ, ಸಾವು-ನೋವು, ಆತ್ಮಹತ್ಯೆಗಳೇ ಪರಿಹಾರವಾಗಿದೆ! ಬೀದಿ ವ್ಯಾಪಾರಿಗಳು, ಕೈಗಾಡಿ ತಳ್ಳೋರು, ಆಟೋ, ಕ್ಯಾಬ್ ಚಾಲಕರು‌, ಸಂತೆ ವ್ಯಾಪಾರಿಗಳೆಲ್ಲಾ ಕೈಚೆಲ್ಲಿ ಕುಳಿತಿದ್ದಾರೆ. ರೈತರು ಬೆಳೆಗೆ ಬೆಲೆ ಸಿಗದೆ ಕಂಗಾಲಾಗಿದ್ದಾರೆ.‌ ಮುಂದೊಂದು ದಿನ ಸಂಪೂರ್ಣವಾಗಿ ಜನರು ಸರ್ಕಾರವನ್ನವಲಂಭಿಸದೆ ಇರುವಂತೆ ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ. ಇನ್ನೊಂದೆಡೆ ವ್ಯಾಪಾರ, ವಹಿವಾಟುಗಳನ್ನು ಅವಲಂಬಿಸಿದ GST ಗೆ ಹೊಡೆತ ಬಿದ್ದು ಸರ್ಕಾರ ಎಲ್ಲಾ ರೀರಿಯಲ್ಲೂ ಆರ್ಥಿಕ ಹೊರೆ ಎದುರಿಸುತ್ತಿದೆ.

ಸರಕಾರಿ ನೌಕರರಿಗೆ ಸಂಬಳ ಕೊಡುವ , ಘೋಷಿಸಿರುವ ಸಾಕಷ್ಟು ಯೋಜನೆಗಳಿಗೆ ಹಣ ಹೊಂದಿಸುವ ಅದೆಷ್ಟೋ ಕೆಲಸಗಳಾಗಬೇಕಿದೆ . ಮುಂದಿನ ವರ್ಷಗಳಲ್ಲಿ ವಿತ್ತೀಯ ಕೊರತೆ ಹೆಚ್ಚಾಗುವುದರ ಜೊತೆಗೆ GDP: -5% ಆಗುವ ಸಾಧ್ಯತೆಯಿರುವುದು ನಮ್ಮ ಆರ್ಥಿಕತೆಗೆ ಕಂಟಕವೇ ಹೌದು. ಹೀಗಿರುವಾಗ ಸರ್ಕಾರದ ಜೊತೆ ಜನರೂ ಕೈಜೋಡಿಸುವ ಕೆಲಸವಾಗಬೇಕಿದೆ. ಈಗಾಗಲೇ ಚಾಲ್ತಿಯಲ್ಲಿರುವ ಸಾಮಾಜಿಕ ಅಂತರ ಕಾಯ್ದಿರಿಸುವಿಕೆ, ಮನೆಯಿಂದ ಹೊರಗಿಳಿಯುವಾಗ ಮಾಸ್ಕ್ ಬಳಕೆ ಜನಸಂದಣಿ ನಿಯಂತ್ರಣ, ಮದುವೆ, ಸಮಾರಂಭಗಳಿಗೆ ಜನರ ಮಿತಿ, ಇವೆಲ್ಲವೂ ಜನರ ಅರಿವಿನೊಂದಿಗೆ ಶಿಸ್ತುಬಧ್ದವಾಗಿ ಕಾರ್ಯಗತಗೊಳ್ಳಬೇಕು. ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಸ್ಥಳೀಯ ಮಟ್ಟದಲ್ಲೇ ಮಟ್ಟಹಾಕುವ ಸ್ವಯಂಪ್ರೇರಿತ ‌ ಕೆಲಸವಾಗಬೇಕು. ಆರೋಗ್ಯದ ಮೇಲೆ ಬಂಡವಾಳ ಹಾಕಿ ಜನಜಾಗೃತಿ ಮೂಡಿಸುವುದು ಒಳಿತು.

ಆಹಾರ ಭದ್ರತೆಗಾಗಿ ಜೀವ ಜಂಜಾಟದಲ್ಲಿ ಹೊಟ್ಟೆ ತುಂಬಿಸುವ ಜನಸಾಮಾನ್ಯರ ಪ್ರಮೇಯಕ್ಕೆ ಮತ್ತೊಮ್ಮೆ 60 ರ ದಶಕದ ಹಸಿರು ಕ್ರಾಂತಿಯಾಗುವುದು ಒಳಿತು. ಅದು ನಮ್ಮಿಂದಲೇ ಅಂದರೆ ಜನಸಾಮಾನ್ಯರಿಂದಲೇ ಆಗಬೇಕು. ಸುಸ್ಥಿರವಾದ ‌ ಕೃಷಿಯ ಕಡೆ ಗಮನಹರಿಸಬೇಕು. ಜನಜೀವನ ಜಾಗೃತವಾಗಬೇಕಿದೆ. ಆರೋಗ್ಯದಲ್ಲಿ ರಾಜಕೀಯ ಮಾಡದೆ ಮುಂಜಾಗ್ರತೆ ವಹಿಸಬೇಕು. ಶಿಸ್ತುಬಧ್ದವಾಗಿ ತಮ್ಮ ಆರೋಗ್ಯದ ಚಿಂತನೆ ತಾವೇ ಮಾಡಬೇಕಿದೆ. ಇದಕ್ಕಾಗಿ ಸರ್ಕಾರ ಅರಿವು ಮೂಡಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿರುವ ಅನಿವಾರ್ಯತೆ ಬಹಳಷ್ಟಿದೆ. ಸರ್ಕಾರದ ಕಟ್ಟೆಳೆಗಳಿಗೆ ಜನರ ಸಹಕಾರ ಅತ್ಯಮೂಲ್ಯ. ಮತ್ತೊಮ್ಮೆ ಜನಸಾಮಾನ್ಯರ ಬದುಕಿನ ಪ್ರಯಾಣದಲ್ಲಿ ಲಾಕ್ಡೌನ್ ಎಂಬ ಸಾವು- ನೋವುಗಳ ಆಹ್ವಾನ ಬೇಡ. ಕೊರೊನ ಎದುರಿಸೋಣ. ಅರಿತು ಮುನ್ನೆಚ್ಚರಿಕೆಯಿಂದ ಜಾಗೃತರಾಗೋಣ. ‌‌‌ ‌‌‌‌‌


🖋ನಿಶಾ ಹೇಂತಾರ್

error: Content is protected !!