ರೋಟರಿ ಸಂಸ್ಥೆ ಹಾಗೂ ಕೊಡಗು ಮಹಿಳೆಯರ ಕಾಫಿ ಜಾಗೃತಿ ತಂಡದಿಂದ ಕಾಫಿ ದಿನದ ಆಚರಣೆ

ಗೋಣಿಕೊಪ್ಪಲು,ಅ.1: ಅಂತರಾಷ್ಟ್ರೀಯ ಕಾಫಿ ದಿನದ ಅಂಗವಾಗಿ ಗೋಣಿಕೊಪ್ಪಲು ರೋಟರಿ ಸಂಸ್ಥೆ ಹಾಗೂ ಕೊಡಗು ಮಹಿಳೆಯರ ಕಾಫಿ ಜಾಗೃತಿ ತಂಡ ದಕ್ಷಿಣ ಕೊಡಗಿನ ಗಡಿಭಾಗ ಆನೆಚೌಕೂರು ಗೇಟ್ ಮುಂಭಾಗ ಸಾರ್ವಜನಿಕರಿಗೆ ಉಚಿತ ಸ್ವಾದಿಷ್ಟ ಕಾಫಿಯನ್ನು ನೀಡುವ ಮೂಲಕ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಇಂದು ಅಪರಾಹ್ನ 4 ಗಂಟೆಯಿಂದ 6 ಗಂಟೆಯವರೆಗೆ ಗಡಿ ಭಾಗದಲ್ಲಿ ಸಾರ್ವಜನಿಕ ವಾಹನಗಳನ್ನು ನಿಲ್ಲಿಸಿ, ಮಹಿಳೆಯರು ಕಾಫಿ,ಕೇಕ್,ಬಿಸ್ಕೆಟ್ ಇತ್ಯಾದಿ ತಿಂಡಿಗಳನ್ನು ನೀಡಿ ಕೊಡಗಿನ ಆತಿಥ್ಯ ನೀಡುವದರೊಂದಿಗೆ ಕಾಫಿಯನ್ನು ಅಧಿಕವಾಗಿ ಕುಡಿಯುವಂತೆ ಪ್ರಯಾಣಿಕರು,ಪ್ರವಾಸಿಗರಲ್ಲಿ ಜಾಗ್ರತಿ ಮೂಡಿಸಿದರು.

ರಾಜ್ಯ ರಸ್ತೆ ಸಾರಿಗೆ ಬಸ್ ಚಾಲಕ, ನಿರ್ವಾಹಕರೂ ಒಳಗೊಂಡಂತೆ ದ್ವಿಚಕ್ರ, ಚತುಷ್ಚಕ್ರ, ಗೂಡ್ಸ್ ವಾಹನ, ಲಾರಿಗಳನ್ನು ನಿಲ್ಲಿಸಿ, ಕಾಫಿಯನ್ನು ಕುಡಿಯಲು ಪ್ರೇರೇಪಿಸಿದರು.
ಕೆಲವು ಪ್ರಯಾಣಿಕರು ವಾಹನದಿಂದ ಇಳಿದು ಬಂದು ಕಾಫಿ ಹಾಗೂ ತಿಂಡಿಯನ್ನು ಸ್ವೀಕರಿಸಿ ಸಂಭ್ರಮಿಸಿದರು.

ಮೋಡ ಕವಿದ ವಾತಾವರಣ ,ತುಂತುರು ಮಳೆಹನಿಯ ನಡುವೆ ಕಾಫಿ ಸವಿದು ಪ್ರಯಾಣಿಕರು ತಮ್ಮ ಪ್ರಯಾಣವನ್ನು ಉಲ್ಲಾಸಭರಿತವಾಗಿ ಮುಂದುವರಿಸಿದ್ದು ಕಂಡುಬಂತು.ಸುಮಾರು‌ 400 ಕ್ಕೂ ಅಧಿಕ ಸಾರ್ವಜನಿಕರಿಗೆ ಕಾಫಿ ವಿತರಿಸಲಾಯಿತು.

ಅಂತರಾಷ್ಟ್ರೀಯ ಕಾಫಿ ದಿನವನ್ನು ಇಂದು ಗದಗ್ ನಿಂದ ಕೊಡಗಿಗೆ ವಾಪಾಸಾಗುತ್ತಿದ್ದ ಮಾಜಿ ಪರಿಷತ್ ಸದಸ್ಯ ಅರುಣ್ ಮಾಚಯ್ಯ ಮತ್ತು ಚಾಂದಿನಿ ಅವರು ಜ್ಯೋತಿ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು.

ರೋಟರಿ ಸಂಸ್ಥೆ ಅಧ್ಯಕ್ಷೆ ನೀತಾ ಕಾವೇರಮ್ಮ ಹಾಗೂ ರೋಟರಿ ವಲಯ ಮುಖ್ಯಸ್ಥೆ ರೀಟಾ ದೇಚಮ್ಮ,ಕೊಡಗು ಮಹಿಳೆಯರ ಕಾಫಿ ಜಾಗ್ರತಿ ತಂಡದ ನೇತ್ರತ್ವದಲ್ಲಿ ಕಾರ್ಯಕ್ರಮ ಜರುಗಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುಭಾಷಿಣಿ,ನಿಕಟಪೂರ್ವ ಅಧ್ಯಕ್ಷೆ ಬೀಟಾ ಮೂಕಳೇರ,ಇಮ್ಮಿ ಉತ್ತಪ್ಪ, ಉಷಾ ರಾಜೀವ್,ರಾಧಾ ಅಚ್ಚಯ್ಯ,ಯಮುನಾ ಮಂದಣ್ಣ,ಗಂಗಾ ರೋಹಿಣಿ, ವಿಲೀನ,ಕವಿತಾ ಸುಧೀರ್, ಎ.ಸಿ.ಅಕ್ಕಮ್ಮ, ಶೋಭಾ ಮುಂತಾದ ಮಹಿಳೆಯರು ಉತ್ಸಾಹದಿಂದ ಕಾಫಿ ವಿತರಿಸಿ ಸಂಭ್ರಮಿಸಿದರು.

error: Content is protected !!