ರೈತರ ನೇತಾರ ‘ಚೌಧರಿ ಚರಣ್ ಸಿಂಗ್’ ನೆನಪು ಅಮರ!

ಅನ್ನದಾತ’ನ ಶ್ರೇಯಸ್ಸಿಗೇ ಶ್ರಮಿಸಿದ ಧೀಮಂತ ರೈತ ನಾಯಕ
                  

ರಜತ್ ರಾಜ್ ಡಿ.ಹೆಚ್, ಸಂಪಾದಕರು

ಕಿಸಾನ್ ದಿವಸ್ ಪ್ರತಿ ವರ್ಷ ಡಿಸೆಂಬರ್ 23ರಂದು ಅಂದರೆ ಇಂದು ದೇಶವ್ಯಾಪಿ ಆಚರಿಸಲಾಗುತ್ತದೆ. ಕಾರಣ ಅಂದು ರಾಷ್ಟ್ರದ ಐದನೇ ಪ್ರಧಾನ ಮಂತ್ರಿಗಳಾದ ಚೌಧರಿ ಚರಣ್ ಸಿಂಗ್ ಅವರ ಹುಟ್ಟು ಹಬ್ಬ. ಇಂದು ಕಿಸಾನ್ ದಿವಸ್ ಅಂಗವಾಗಿ ವಿವಿಧ ಅರ್ಥಪೂರ್ಣ ಸ್ಪರ್ಧೆ, ಕಾರ್ಯಕ್ರಮಗಳನ್ನು ವಿವಿಧೆಡೆ ಆಯೋಜಿಸಲಾಗುತ್ತದೆ.
    

ಚೌಧರಿ ಚರಣ್ ಸಿಂಗ್ ಅವರು ನೇತ್ರಾ ಕೌರ್ ಹಾಗು ಚೌಧರಿ ಮೀರ್ ಸಿಂಗ್ ದಂಪತಿಗಳ ಮಗನಾಗಿ 23 ಡಿಸೆಂಬರ್ 1902ರಂದು ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ನೂಪುರ್ ಎಂಬ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹಳ್ಳಿಯ ಪಕ್ಕದ ಜಾನಿ ಕೌದ್೯ ಹಳ್ಳಿಯಲ್ಲಿ ಮುಗಿಸಿ, ಮೀರತ್ ಅಲ್ಲಿ ಮೆಟ್ರಿಕ್ಯುಲೇಷನ್ ಉತ್ತೀರ್ಣಗೊಳಿಸಿದರು‌. 1923ರಲ್ಲಿ ಆಗ್ರಾ ಕಾಲೇಜಿನಿಂದ ವಿಜ್ಞಾನದಲ್ಲಿ ಪದವಿ ವ್ಯಾಸಂಗ ಮಾಡಿದರು. ಗಾಜ಼ಿಯಾಬಾದ್ ಅಲ್ಲಿ ವಕೀಲರಾಗಲು ಎಲ್.ಎಲ್. ಬಿ ಓದಿದರು.
  

ಸ್ವಾಮಿ ದಯಾನಂದ ಸರಸ್ವತಿ ಅವರಿಂದ ಪ್ರಭಾವಿತರಾಗಿದ್ದ ಚೌಧರಿ ಚರಣ್ ಸಿಂಗ್ ಅವರು ಆರ್ಯ ಸಮಾಜದಲ್ಲಿ ಉತ್ಸುಕವಾಗಿ ಭಾಗಿಯಾಗಿದ್ದರು. ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಾಯಿ ಪಟೇಲರನ್ನು ಆದರ್ಶವಾಗಿಸಿಕೊಂಡಿದ್ದ ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್(ಐ.ಎನ್.ಸಿ)  ಅಲ್ಲಿ ಸಕ್ರೀಯ ನಾಯಕರಾಗಿದ್ದರು.
  

ರೈತರ ಪರವಾಗಿ ಧ್ವನಿ ಎತ್ತುತ್ತಾ ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದು, 1960-70ರ ದಶಕದಲ್ಲಿ ಚುನಾವಣೆಗಳಲ್ಲಿಯೂ ರೈತರಿಗೆ ಸಂಬಂಧಿಸಿದ ವಿಚಾರಧಾರೆಗಳನ್ನು ಮುಖ್ಯ ವಾಹಿನಿಗೆ ತಂದಿದ್ದು ಇದೇ ನಾಯಕ ಚೌಧಿರಿ ಚರಣ್ ಸಿಂಗ್. 1939ರಲ್ಲಿ ಅವರು ಉತ್ತರ ಪ್ರದೇಶದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸದೀಯ ಗುಂಪಿನ ಕಾರ್ಯಕಾರಿಣಿ ಸಮಿತಿ ಎದುರಿಗೆ, ‘ಜಾತ್ಯಾತೀತವಾಗಿ ರೈತರ ಮಕ್ಕಳಿಗೆ ಶೇಕಡ 50% ಕೋಟಾದಲ್ಲಿ ಸರಕಾರಿ ಉದ್ಯೋಗ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದರು. ಉತ್ತರ ಪ್ರದೇಶದ ಕೃಷಿ ಸಚಿವರಾಗಿ 1952ರಲ್ಲಿ ಉತ್ತರಪ್ರದೇಶ್ ಜಮೀನ್ದಾರಿ ಹಾಗು ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು ಜಮೀನ್ದಾರರಿಂದ ರೈತರಿಗೆ ಆಗುತ್ತಿದ್ದ ಷೋಷಣೆಯನ್ನು ನಿಲ್ಲಿಸಲಾಯಿತು. ಭೂಮಿಯ ಒಡೆತನ ಜಮೀನ್ದಾರರಿಂದ ರೈತರಿಗೆ ವರ್ಗಾಯಿಸುವಂತೆ ಮಾಡಿತು. ಈ ಸುಧಾರಣೆಯಿಂದ ಚರಣ್ ಸಿಂಗ್ ಅವರ ವರ್ಚಸ್ಸು ಜಾಸ್ತಿಯಾಯಿತು. ಜವಹರಲಾಲ್ ನೆಹೆರು ಚಿಂತನೆಗಳಿಗೂ ಇವರ ಚಿಂತನೆಗಳಿಗೂ ಬಹಳಷ್ಟು ಅಜ-ಗಜಾಂತರ ವ್ಯತ್ಯಾಸವಿದಿದ್ದರಿಂದ ಚರಣ್ ಸಿಂಗ್ ಅವರ ಹೋರಾಟಗಳಿಗೆ, ರೈತರ ಪರವಾದ ಚಿಂತನೆಗಳಿಗೆ, ಕಾಳಜಿಗೆ ಸರಿಯಾದ ಮನ್ನಣೆ ಹಾಗು ಗೌರವ ಸಿಗುತ್ತಿರಲಿಲ್ಲ. ಇದರಿಂದ ಬೇಸರಗೊಂಡ ಅವರು 1967ರಲ್ಲಿ ಐ.ಎಸ್.ಸಿ ಪಕ್ಷ ಬಿಟ್ಟರು. ಮಿತ್ರ ಪಕ್ಷಗಳೊಂದಿಗೆ ಸೇರಿ ‘ಭಾರತೀಯ ಕಿಸಾನ್ ದಳ’ ಎಂಬ ಪಕ್ಷ ಸ್ಥಾಪಿಸಿ ಆಡಳಿತದ ಚುಕ್ಕಾಣಿ ಹಿಡಿದ ಅವರ ದಾರಿಯೇ ರೋಚಕವಾದದ್ದು. ರೈತರಿಗೆ ಸಮಸ್ಯೆ ಎಂದಾಕ್ಷಣ ಚರಣ್ ಅವರ ಪಕ್ಷ ಅದಕ್ಕೆ ಸ್ಪಂದಿಸಲು ಮುಂದಾಗುತ್ತಿತ್ತು. ಅದು 1969ನೇ ಇಸವಿ ಉತ್ತರ ಪ್ರದೇಶದಲ್ಲಿ ವಿಧಾನ ಸಭಾ ಚುನಾವಣೆಗಳು ಎದುರಾಗಿತ್ತು. ಅದರಲ್ಲಿ ಭರ್ಜರಿಯಾಗಿ ಜನತೆ ಬೆಂಬಲಿಸಿದ್ದ ಚರಣ್ ಸಿಂಗ್ ಅವರ ‘ಭಾರತೀಯ ಕಿಸಾನ್ ದಳ’ ಪಕ್ಷಕ್ಕೆ. ಇದು ಆಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಜನಸಂಘಕ್ಕೆ ಬಾರಿ ಮುಖಭಂಗವನ್ನು ಉಂಟು ಮಾಡಿತ್ತು. ಚರಣ್ ಸಿಂಗ್ ಅವರು 28 ಜುಲೈ 1979ರಲ್ಲಿ ಪ್ರಧಾನಿ ಆದರೂ ಕೂಡ ಕೇವಲ 23 ದಿನಗಳಲ್ಲೇ ಬಹುಮತದ ಕೊರತೆಯಿಂದಾಗಿ ಪ್ರಧಾನಿ ಪಟ್ಟದಿಂದ ಕೆಳಗಿಳಿಯಬೇಕಾಯಿತು.
  

ಚರಣ್ ಸಿಂಗ್ ಅವರ ಸಾಮಾಜಿಕ ಸಮಾನತೆ, ಅಭಿವೃದ್ಧಿಯ ದೃಷ್ಟಕೋನ ಎಲ್ಲರೂ ಒಪ್ಪಿಕೊಳ್ಳುವಂತೆ ಇತ್ತು. ಅವರು ಜಾರಿಗೆ ತಂದ ‘Debt Redemption Bill 1939’, ‘The Consolidation of Holdings Act of 1953’, ‘Uttarpradesh Zamindari and Land Reforms Act 1952’ ಕಾಯ್ದೆಗಳನ್ನು ಜಾರಿಗೆ ತಂದಿದ್ದು ಅವರ ರೈತರ ಮೇಲಿನ ಮುತುವರ್ಜಿಯ ಕುರಿತಾದ ಸಾಕ್ಷಿಗಳಂತಿವೆ.

1977ರಲ್ಲಿ ನೇಗಿಲು ಹೊತ್ತ ರೈತನ ‘ಭಾರತೀಯ ಕಿಸಾನ್ ದಳ’ದ ಚಿಹ್ನೆಯಡಿಯಲ್ಲೇ ಜನತಾ ಪಕ್ಷದಡಿ ಕೇಂದ್ರದ ನಾಯಕರಾಗಿ ಕಾಣಿಸಿಕೊಂಡರು‌. ಜನತಾ ಪಕ್ಷ ನಂತರ ಅಧಿಕಾರಕ್ಕೆ ಬಂದ ಮೇಲೆ ಅವಿರತವಾಗಿ ರೈತರ ಹಿತಾಸಕ್ತಿ ಕಾಪಾಡಲು  ಶ್ರಮಿಸಿದರು. ಚರಣ್ ಸಿಂಗ್ ಅವರು ತಮ್ಮ ರಾಜ್ಯದಲ್ಲಿ ರೈತರಿಗಾಗಿ ತೆರಿಗೆ ಕಡಿತ, ಸಬ್ಸಿಡಿಗಳ ಹೆಚ್ಚಳ, ನೀರು ಹಾಗು ವಿದ್ಯುತ್ ಸಮರ್ಪಕ ಪೂರೈಕೆ ಅಂತಹ ರೈತ ಪರ ಯೋಜನೆಗಳನ್ನೇ ಪ್ರಧಾನಿ ಆಗಿಯೂ ಜಾರಿ ಮಾಡಬೇಕು ಎಂದು ಯೋಚಿಸುತ್ತಿರುವಾಗಲೇ ರಾಜಿನಾಮೆ ನೀಡಿದ ಅವರು ದೇಶದ ಅತಿ ಕಡಿಮೆ ಅವಧಿ ಆಳಿದ ಪ್ರಧಾನಿ ಎಂಬ ಹೆಸರು ಪಡೆದರು.

ಅಪ್ರತಿಮ ರೈತರ ಪರ ನಾಯಕರಾಗಿದ್ದ ಚೌಧರಿ ಚರಣ್ ಸಿಂಗ್ ಹೆಚ್ಚು ಸಮಯ ನಮ್ಮ ದೇಶದ ಪ್ರಧಾನಿಗಳಾಗಿರಲು ಸಾಧ್ಯವಾಗಲಿಲ್ಲ ಎಂಬುದೇ ಬೇಸರದ ಸಂಗತಿ‌. ಚರಣ್ ಸಿಂಗ್ ಅವರಂತಹ ರೈತಾಪಿ ವರ್ಗದ ಕಾಳಜಿ ಮಾಡುವಂತಹ ನಾಯಕರು ಈ ದೇಶದಲ್ಲಿ ಇಂದೂ ಬೆಳೆದರೆ ನಿಜಕ್ಕೂ ಅನ್ನದಾತನ ಬದುಕು ಕೂಡ ಸುಭೀಕ್ಷೆಯಾಗುತ್ತಿತ್ತೇನೋ…!

ಭಾರತದಲ್ಲಿ ಇಂದು ಕೃಷಿ ಕ್ಷೇತ್ರ ಹೇಗಿದೆ…?!

ಭಾರತದಲ್ಲಿ ದೊಡ್ಡ ಕ್ಷೇತ್ರ ಕೃಷಿಯಾಗಿದೆ. ಭಾರತದ ಆರ್ಥಿಕತೆಗೆ  ಎರಡು ಟ್ರಿಲಿಯನ್ ಡಾಲರ್ ಅಷ್ಟು ಕೊಡುಗೆಯನ್ನು ಕೃಷಿ ಕ್ಷೇತ್ರವು ಭಾರತದಲ್ಲಿ ಗಣನೀಯವಾದ ರಂಗವೇ ಆಗಿದೆ. ವರ್ಷಕ್ಕೆ 300 ಮಿಲಿಯನ್ ಟನ್ ಅಷ್ಟು ಬೆಳೆಯನ್ನು ದೇಶದ ರೈತರು ಬೆಳೆಯುತ್ತಾರೆ. ಈ ವರ್ಷ 2020-21ರ ಸಾಲಿನಲ್ಲಿ ಕೃಷಿ ಉತ್ಪತ್ತಿಯಲ್ಲಿ 3% ಏರಿಕೆಯಾಗಿದ್ದು, 0.5% ನಷ್ಟು ಭಾರತದ ಆರ್ಥಿಕತೆಯು ಇದರಿಂದಾಗಿ ಹೆಚ್ಚಿದೆ. 16% ದೇಶದ ಜಿ.ಡಿ.ಪಿಯಲ್ಲಿ ಕೃಷಿ ಕ್ಷೇತ್ರದ ಪಾಲಿದ್ದು, ದೇಶದ 55%ನಷ್ಟು ಶ್ರಮಿಕ ವರ್ಗವು ವ್ಯವಸಾಯದಲ್ಲಿ ತೊಡಗಿಸಿಕೊಂಡು ದುಡಿದು ಹೊಟ್ಟೆಗೆ ಹಿಟ್ಟನ್ನು ಸಂಪಾದಿಸುತ್ತಿದ್ದಾರೆ. ಕೃಷಿಗಾಗಿ ಈಗಿನ ಎನ್.ಡಿ.ಎ ಸರಕಾರವು ಹಲವಾರು ಸುಧಾರಣಾ ನೀತಿಗಳನ್ನು ಜಾರಿಗೆ ತರುತ್ತಿದ್ದು, ಇತ್ತೀಚೆಗೆ ಅದು ರೈತರ ಹಿತದ ಸಲುವಾಗಿ ತಂದ ಮೂರು ಕಾಯ್ದೆಗಳು ವಿವಾದ ಸೃಷ್ಟಿಸಿದೆ. ಅವೆಂದರೆ, ‘Produce Trade and Commerce Bill’, ‘Farmers Agreement on Price Assurance And Farm Service Bill’, ಹಾಗು ‘Essential Commodities Bill’ ಜಾರಿಗೆ ತಂದಿದೆ.

ಕೇಂದ್ರ ಸರಕಾರದ ಪ್ರಕಾರ ಈ ಕಾನೂನುಗಳು ಕೃಷಿ ಕ್ಷೇತ್ರವನ್ನು ಸುಧಾರಿಸಿ, ರೈತರ ಆದಾಯವನ್ನು ದ್ವಿಗುಣಗೊಳಿಸುತ್ತದೆ. ಮಂಡಿಗಳಿಂದ ಬೇರ್ಪಟ್ಟು, ರೈತರು ಹಾಗು ವ್ಯಾಪಾರಸ್ಥರು ತಮ್ಮದೇ ಸ್ವಂತ ಮಾರುಕಟ್ಟೆಯಲ್ಲಿ ತಮ್ಮ ಬೆಳೆಗಳನ್ನು ಮಾರಬಹುದಾಗಿದೆ. ಎಪಿಎಂಸಿಗಳ ಹಿಡಿತದಿಂದ ರೈತರನ್ನು ಮುಕ್ತವಾಗಿಸಿ, ಮಧ್ಯವರ್ತಿಗಳ ದಬ್ಬಾಳಿಕೆಯನ್ನು ತಪ್ಪಿಸಲು ಪ್ರಯತ್ನಿಸುತ್ತದೆ. ಇದು ಖಾಸಗಿ ವಲಯಕ್ಕೆ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಿದ್ದು, ಇದು ಕೃಷಿ ಕ್ಷೇತ್ರದಲ್ಲಿ  ನವೀಕರಣ, ಮೂಲಭೂತ ಅಗತ್ಯತೆ ಹಾಗು ಉಪಕರಣಗಳ ಉನ್ನತೀಕರಣವನ್ನು ಮಾಡಿಕೊಳ್ಳಲು ಅವಕಾಶಗಳನ್ನು ಕಲ್ಪಿಸುತ್ತವೆ. ಗುತ್ತಿಗೆ ಕೃಷಿಯು ದರ ನಿಗದಿಯ ಭರವಸೆ ನೀಡಿ, ಕಂಪೆನಿಗಳು ರೈತರಿಗೆ ಕಡಿಮೆ ದರದಲ್ಲಿ ಬಿತ್ತನೆ ಬೀಜಗಳು, ಗೊಬ್ಬರ ಹಾಗು ಇತರೆ ಅಗತ್ಯತೆಗಳನ್ನು ಒದಗಿಸುವಂತೆ ಮಾಡುತ್ತದೆ. ಫಸಲಿನ ಧಾನ್ಯಗಳ ಪೂರೈಕೆಯು ಬೇಡಿಕೆಗಿಂತ ಹೆಚ್ಚಾಗುವಾಗ, ಬೆಲೆ ಕುಸಿತದ ಸಂಕಟವನ್ನು ರೈತರಿಗೆ ತಪ್ಪಿಸಲು ಅಗತ್ಯ ಶೇಖರಣಾ ವ್ಯವಸ್ಥೆಯನ್ನು ಒದಗಿಸುತ್ತದೆ‌. ‘ಒಂದು ದೇಶ, ಒಂದು ಮಾರುಕಟ್ಟೆ’ ಎಂಬ ವ್ಯವಸ್ಥೆಯನ್ನು ಸಾಕಾರಗೊಳಿಸುತ್ತದೆ. ದಲಾಳಿಗಳಿಂದ ಮುಕ್ತವಾಗಿ ರೈತ ತಾನು ಬೆವರು ಸುರಿಸಿ ದುಡಿದ ಬೆಳೆಯನ್ನು ಮಾರಲು ಶಕ್ತನಾಗುತ್ತಾನೆ.

ಹಾಗಾದರೆ ವಿರೋಧ ಏತಕ್ಕೆ…?!

ಎಪಿಎಂಸಿಗಳು ಕಾರ್ಯನಿರ್ವಹಿಸುವುದರಿಂದ ಸಣ್ಣ ಹಿಡುವಳಿದಾರ ರೈತರಿಗೆ ಅದು ಸಹಕಾರಿ ಆಗುತ್ತಿತ್ತು. ಆದರೆ ಕಾಯ್ದೆಗಳ ಜಾರಿಯಿಂದ ಎಪಿಎಂಸಿಗಳು ದುರ್ಬಲವಾಗುತ್ತವೆ. ‘ಒಂದು ದೇಶ, ಒಂದು ಮಾರುಕಟ್ಟೆ’ ವ್ಯವಸ್ಥೆಯಿಂದ ಕೃಷಿ ಉತ್ಪನ್ನಗಳ ಸಾಗಾಟದ ವೆಚ್ಚ ದುಬಾರಿಯಾಗಿ ರೈತರಿಗೆ ಹೊರೆಯಾಗಲಿದೆ. ದಲ್ಲಾಳಿಗಳ ಕಪಿಮುಷ್ಟಿಯಿಂದ ರೈತರು ಬಚಾವ್ ಆದರೂ ಅದೇ ಜಾಗದಲ್ಲಿ ಬಂಡವಾಳ ಶಾಹಿಗಳು ರೈತರ ಶೋಷಣೆ ನಡೆಸುವ ಸಾಧ್ಯತೆ ಇದೆ. ಸರಕಾರ ಮಧ್ಯ ಪ್ರವೇಶ ಮಾಡದೆ ರೈತರನ್ನು ಸ್ವತಂತ್ರವಾಗಿ ಬಿಟ್ಟು ಬಿಟ್ಟರೆ ರೈತಾಪಿ ವರ್ಗ ಬಂಡವಾಳ ಶಾಹಿಗಳ ಕರಾಳ ಜಾಲಕ್ಕೆ ಸಿಕ್ಕಿ ಮೋಸ ಹೋಗುವ ಭಯ ರೈತರ ಮನದಲ್ಲಿ ಮೊಳಕೆ ಒಡೆದಿದೆ.

ಒಟ್ಟಿನಲ್ಲಿ ಮೂರು ಕೃಷಿ ಕಾನೂನುಗಳ ಧನಾತ್ಮಕ ವಿಚಾರಗಳನ್ನು ಮಾತ್ರವೇ ಕೇಂದ್ರ ಸರಕಾರ ಬಿಂಬಿಸುತ್ತಿದ್ದು, ಋಣಾತ್ಮಕ ವಿಚಾರಗಳ ಬಗ್ಗೆಯೂ ಯೋಚಿಸಿ ಅವುಗಳ ಪರಿಹಾರಕ್ಕೆ ದಾರಿ ಮಾಡಬೇಕಿದೆ. ರಾಜ್ಯ ಸರಕಾರಗಳ, ರೈತ ಸಮುದಾಯದ ಸಲಹೆಗಳನ್ನು ಸಂಗ್ರಹಿಸಿ, ಮತ್ತೆ ಕಾಯ್ದೆಗಳ ಪರಾಮರ್ಶೆಯನ್ನು ಮಾಡಬೇಕಿದೆ. ಆ ಮೂಲಕ ರೈತರಲ್ಲಿ ಉಂಟಾದ ಆತಂಕ, ಅನುಮಾನ, ಭಯಗಳನ್ನು ರಾಜಕೀಯ ರಹಿತವಾಗಿ ಶಮನಗೊಳಿಸಬೇಕಿದೆ.

error: Content is protected !!