ರೈತರಿಗೆ ಕೃಷಿ ತರಬೇತಿ ಕಾರ್ಯಾಗಾರ

ಮಡಿಕೇರಿ ಮಾ.23: ಐಸಿಎಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಕೇಂದ್ರ, ಅಪ್ಪಂಗಳದಲ್ಲಿ ಅಡಿಕೆ ಮತ್ತು ಸಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ, ಕೋಜಿಕೋಡು ಪ್ರಾಯೋಜಿತ “ಸಂಬಾರ ಬೆಳೆಗಳ ಸುಧಾರಿತ ಉತ್ಪಾದನಾ ತಂತ್ರಜ್ಞಾನಗಳ (ಕಾಳುಮೆಣಸು, ಏಲಕ್ಕಿ ಮತ್ತು ಶುಂಠಿ)” ಬಗ್ಗೆ ರೈತರಿಗೆ ಕೃಷಿ ತರಬೇತಿ ಕಾರ್ಯಕ್ರಮ ನಡೆಯಿತು.  

ಈ ಕಾರ್ಯಕ್ರಮವನ್ನು ಚೆಟ್ಟಳ್ಳಿ ಸಿಸಿಆರ್‍ಐ ಉಪ ಕೇಂದ್ರದ ಜಂಟಿ ನಿರ್ದೇಶಕರಾದ ಡಾ.ಜೆ.ಎಸ್.ನಾಗರಾಜ್ ಅವರು ಉದ್ಘಾಟಿಸಿ, ಕೊಡಗಿನಲ್ಲಿ ಕಾಫಿ ಮತ್ತು ಕಾಳುಮೆಣಸಿನ ಮಿಶ್ರ ಬೆಳೆಯ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡಿದರು. 

ಪ್ರಗತಿಪರ ರೈತರಾದ ಹಟ್ಟಿಹೊಳೆ ಸೂರ್ಯ, ಕಿರಣ್ ಎಸ್ಟೇಟ್‍ನ ಪ್ರಗತಿಪರ ರೈತರಾದ ಅನಿತಾ ನಂದ ಅವರು  ಕಾಳುಮೆಣಸಿನ ಕೃಷಿಯಲ್ಲಿನ ಚಟುವಟಿಕೆ ಬಗ್ಗೆ ಹಂಚಿಕೊಂಡರು. 

 ಸಂಬಾರ ಮಂಡಳಿ ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕರಾದ ಎಸ್.ಎಸ್.ಬಿಜು ಅವರು ಸಂಬಾರ ಮಂಡಳಿಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಅಪ್ಪಂಗಳ ಐಸಿಎಆರ್-ಐಐಎಸ್‍ಆರ್ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರಾದ ಡಾ.ಎಸ್.ಜೆ.ಅಂಕೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ತರಬೇತಿ ಕಾರ್ಯಾಗಾರದ ಉಪನ್ಯಾಸಗಳ ಇ-ಕೈಪಿಡಿ ಹಾಗೂ ವಿಸ್ತರಣಾ ಕೈಪಿಡಿ ಬಿಡುಗಡೆ ಮಾಡಲಾಯಿತು.  

ತರಬೇತಿ ಕಾರ್ಯಕ್ರಮದಲ್ಲಿ ಕಾಳುಮೆಣಸು, ಏಲಕ್ಕಿ ಮತ್ತು ಶುಂಠಿಯ ಆಧುನಿಕ ಉತ್ಪಾದನೆ ಮತ್ತು ತಂತ್ರಜ್ಞಾನಗಳ ಬಗ್ಗೆ ಒತ್ತು ನೀಡಲಾಯಿತು. ಸಂಬಾರ ಬೆಳೆಗಳ ಇಳುವರಿ ಮತ್ತು ಗುಣಮಟ್ಟ ವೃದ್ಧಿಸಲು ಸುಧಾರಿತ ತಳಿಗಳ ಪಾತ್ರ, ಗುಣಮಟ್ಟದ ಸಸ್ಯಾಭಿವೃಧ್ದಿಯ ವಿಧಾನ, ಸಂಬಾರ ಬೆಳೆಗಳ ಉತ್ಪಾದನೆಯಲ್ಲಿ ಕೃಷಿಕತೆ ಮತ್ತು ಶಾರೀರಿಕ ತಂತ್ರಜ್ಞಾನಗಳು, ಸಂಬಾರ ಬೆಳೆಗಳ ಕೃಷಿಯಲ್ಲಿ ಜೈವಿಕ ಒತ್ತಡಗಳು ಮತ್ತು ಅವುಗಳ ನಿರ್ವಹಣೆ ಬಗ್ಗೆ ಅಪ್ಪಂಗಳದ ಐ.ಸಿ.ಎ.ಆರ್-ಐ.ಐ.ಎಸ್.ಆರ್. ಪ್ರಾದೇಶಿಕ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಿದರು.

ತರಬೇತಿ ಕಾರ್ಯಕ್ರಮದಲ್ಲಿ ಐಸಿಎಆರ್-ಐಐಎಸ್‍ಆರ್ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳ ಪ್ರದರ್ಶನ ಮಳಿಗೆಯನ್ನು ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ 130 ಕ್ಕೂ ಹೆಚ್ಚು ರೈತರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!