fbpx

ರಾಷ್ಟ್ರೀಯ ಪ್ರಾಣಿ ಹುಲಿಗಳ ಸಂರಕ್ಷಣೆ ಮತ್ತಷ್ಟು ಹೆಚ್ಚಬೇಕಿದೆ.

ಅಂಕಣ: ಪ್ರಾಣಿ ಪಕ್ಷಿ ಪರಪಂಚ

ಚೆಟ್ಟೀರ ನಮಿತಾ ಗಣಪತಿ

ಅನಾದಿ ಕಾಲದಿಂದ ಹುಲಿಗಳ ಬೇಟೆಯನ್ನು ದೊಡ್ಡ ಸಾಹಸ ಹಾಗು ಸಾಧನೆ ಎಂಬಂತೆ ಕಾಣುತ್ತಾ ಬರಲಾಯಿತು. ಅವುಗಳೊಂದಿಗೆ ಸೆಣೆಸಿ, ಅವನ್ನು ಕೊಂದರೆ ಆ ವ್ಯಕ್ತಿಯನ್ನು ಧೀರ, ಶೂರ, ವೀರ ಎಂಬಂತೆ ಬಿಂಬಿಸಲಾಯಿತು. ಆಳುತ್ತಿದ್ದ ರಾಜರುಗಳು ಕೂಡ ಅವುಗಳನ್ನು ಕೊಲ್ಲುವುದೆಂದರೆ ಪ್ರತಿಷ್ಠೆ ಎಂಬಂತೆ‌ ತಿಳಿದರು. ಚರ್ಮ, ಉಗುರುಗಳಿಗಾಗಿ ಅವುಗಳ ನಾಶಕ್ಕೆ ದಯೆ ದಾಕ್ಷಿಣ್ಯ ಇಲ್ಲದೆ ಇಳಿದು ಬಿಟ್ಟ ಮಾನವ. ಅವುಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದರೂ, ಭಾರತದಲ್ಲಿ ಸಂತಾನಾಭಿವೃದ್ಧಿ ಜಾಸ್ತಿ ಆಗಿರುವುದು ಖುಷಿ ಕೊಡುತ್ತದೆ.

ಭಾರತದಲ್ಲಿ ಇತ್ತೀಚೆನ ವರ್ಷಗಳಲ್ಲಿ ಹುಲಿಗಳ ಸಂರಕ್ಷಣೆ ಆಗುತ್ತಿದೆ ಅನಿಸುತ್ತಿದೆ. 2018ರಲ್ಲಿ ನಡೆದ ಸಮೀಕ್ಷೆ ಪ್ರಕಾರ 2014ರಲ್ಲಿ 2,226 ಇದ್ದ ಹುಲಿಗಳು 2018ರ ಹೊತ್ತಿಗೆ 2,967 ಆಗಿ ಏರಿಕೆಯಾಗಿದೆ. ಪ್ರಸ್ತುತ ಅದು 3,000ಕ್ಕೂ ಹೆಚ್ಚಾಗಿರುವ ಸಾಧ್ಯತೆ ಇದೆ. ಆ ಮೂಲಕ ಭಾರತ ಹುಲಿಗಳಿಗೆ ಅತ್ಯಂತ ಸುರಕ್ಷಿತ ದೇಶವಾಗಿದೆ. ಪ್ರಪಂಚದ 70%ನಷ್ಟು ಹುಲಿಗಳ ಸಂಖ್ಯೆ ಭಾರತದಲ್ಲಿ ಇರುವಂತಾಗಿದೆ.

ಹುಲಿಗಳ ನಾಶದ ಹಿಂದೆ ಹಲವು ಕಾರಣಗಳೂ ಇದ್ದವು

°ಮಾನವ ಹಾಗು ಹುಲಿಗಳ ನಡುವಣ ಬದುಕಿನ ಸಂಘರ್ಷವು ಹುಲಿಗಳು ಅಳಿವಿನಂಚಿಗೆ ಬಂದು ನಿಲ್ಲುವಂತೆ ಮಾಡಿದೆ. ಭಾರತದಲ್ಲಿ 1875 ಹಾಗು 1925 ಇಸವಿಗಳಲ್ಲಿ ಸುಮಾರು 8,000 ಹುಲಿಗಳನ್ನು ಕೊಲ್ಲಲಾಗಿತ್ತು. ಆಡಳಿತಗಾರ ರಾಜರು ಅವುಗಳನ್ನು ವಿವಿಧ ಬಗೆಯಲ್ಲಿ ಕೊಲ್ಲಲು ನಿಂತು‌ ಬಿಟ್ಟಿದ್ದರು. ಮನುಷ್ಯನ ಮೇಲೆ ಹುಲಿ ದಾಳಿಗಳು ಕೂಡ ಆಗುತ್ತಿರುವುದರಿಂದ ಮನುಷ್ಯ ಅವುಗಳ ನಾಶಕ್ಕೆ ನಿಂತಿದ್ದ.


°ಹವಾಮಾನ ವೈಪರೀತ್ಯ ಕೂಡ ಪ್ರಮುಖ ಕಾರಣವಾಯಿತು. ಹೆಚ್ಚುತ್ತಿರುವ ತಾಪಮಾನ, ಏರುತ್ತಿರುವ ಸಮುದ್ರದ ಮಟ್ಟವು ಹುಲಿಗಳ ಉಳಿವಿನ ಪ್ರಶ್ನೆ ಎತ್ತುವಷ್ಟರ ಮಟ್ಟಿಗೆ ಪರಿಣಾಮ ಬೀರಿದೆ.

°ವ್ಯಾಪಕವಾದ ಅರಣ್ಯ ನಾಶ ಕೂಡ ಹುಲಿಗಳ ಮಾತ್ರವಲ್ಲದೆ, ಇತರೆ ಪ್ರಾಣಿಗಳಿಗೂ ಕೂಡ ಅಪಾಯ ಉಂಟು ಮಾಡಿದೆ. ಜೀವ ರಾಶಿಗಳ ಆಹಾರ ಸರಪಳಿಯನ್ನು ಅರಣ್ಯ ನಾಶದ ಅಂಶ ಪ್ರಭಾವ ಬೀರಿ ವನ್ಯ ಜೀವಿಗಳ ಉಳಿವಿನ ಪ್ರಶ್ನೆ ಎತ್ತಿದೆ.

ಅಷ್ಟಾಗಿಯೂ ಹುಲಿಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತಿರುವುದು ಸಂತೋಷದ ವಿಚಾರ. ಮನುಷ್ಯ ತಾನೂ ಬಾಳುವುದರ ಜೊತೆಗೆ ವನ್ಯ ಜೀವಿಗಳಿಗೂ ಸ್ವಚ್ಛಂದವಾಗಿ ಬದುಕಲು ಅನುವು ಮಾಡಿಕೊಡಬೇಕು. ಅವುಗಳ ರಕ್ಷಣೆಗೂ ಹೆಚ್ಚು ಕಿಮ್ಮತ್ತು ಕೊಡವಂತಾಗಬೇಕು.

ಜಗತ್ತಿನಲ್ಲಿ ಕೇವಲ 7,500ರಿಂದ 10,000 ಅಷ್ಟೇ ಸಂಖ್ಯೆ ಇರುವ ಹುಲಿಗಳ ಹೆಚ್ಚಳಿಕೆ ಆಗಲೇ ಬೇಕಿದೆ. ಮನುಷ್ಯ ಬುದ್ಧ ಜೀವಿಯಾಗಿ ಅದಕ್ಕೆ ಮನ್ನಣೆ ನೀಡಬೇಕು

ಚೆಟ್ಟೀರ ನಮಿತಾ ಗಣಪತಿ, ಅಂಕಣಕಾರರು
error: Content is protected !!