fbpx

ರಾಮ ಮಂದಿರ ದೇಶದ ಆಸ್ಮಿತೆಯ ಅಸ್ಥಿತ್ವವಾಗಲಿದೆ…!

ರಾಮ ಮಂದಿರ ಭೂಮಿ ಪೂಜೆ ವಿಶೇಷ

‘ರಾಮ ಮಂದಿರ’ ಎಂದಾಕ್ಷಣ ರಾಮ ಭಕ್ತರಿಗೆ ಮೈ ಎಲ್ಲಾ ಒಂದು ಕ್ಷಣ ಮುಳ್ಳಾಗುವುದಂತೂ ಸುಳ್ಳಲ್ಲ. ರಾಮ ಅಂದ್ರೆನೇ  ಹಾಗೆ ಅವನು ಸನಾತನ ಧರ್ಮದ ಮಹಾನ್ ಮರ್ಯಾದಾ ಪುರುಷ! ಸಮಸ್ತ ಸನಾತನೀಯರ ಆರಾಧ್ಯ ದೈವ ದಶರಥ ನಂದನ! ಭಾರತದ ಪೌರಾಣಿಕ ಇತಿಹಾಸದ ಯುಗ ಪುರುಷ ಅವನು! ರಾಷ್ಟ್ರದ ಮಹಾ ಗ್ರಂಥ ರಾಮಾಯಣದ ಸೂಪರ್ ಹೀರೋ ಅವನು!

ಅಂತಹ ಶ್ರೀರಾಮಚಂದ್ರನಿಗೆ ಒಂದು ಭವ್ಯ ಮಂದಿರವನ್ನು ಈಗಲಾದರೂ 500‌ ವರ್ಷಗಳ ಬಳಿಕ ಕಟ್ಟಲು ಸುಸಮಯ ಒದಗಿ ಬಂದಿದೆ. 5ನೇ‌ ತಾರಿಕು ಅಂದರೆ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು 5 ಬೆಳ್ಳಿ ಇಟ್ಟಿಗೆಗಳನ್ನು ಇರಸುವುದರ ಮೂಲಕ ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ.‌

ಈ ದೇಶದ ಮಹತ್ತರ ವಿಚಾರವಾಗಿರುವ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನವೆಂಬರ್‌ 25ರಿಂದ ಡಿಸೆಂಬರ್ 25ರ ತನಕ ರಾಷ್ಟ್ರದಾದ್ಯಂತ 10 ಕೋಟಿ ಕುಟುಂಬಗಳಿಂದ ಅದಕ್ಕಾಗಿ ದೇಣಿಗೆ ಹಣ ಸಂಗ್ರಹಿಸಲಿದೆ.

ಒಟ್ಟು ರಾಮಮಂದಿರವು ಸುಮಾರು 300 ಕೋಟಿ ರೂಪಾಯಿಯಷ್ಟು ಹಣದಲ್ಲಿ ಭವ್ಯವಾಗಿ ನಿರ್ಮಾಣವಾಗುತ್ತಿದ್ದು, ಅದರ ಆವರಣದ 20 ಎಕರೆ ಜಾಗದಲ್ಲಿ 1,000 ಕೋಟಿ ರೂಪಾಯಿಯಲ್ಲಿ ಸಂಪೂರ್ಣ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ.‌

ರಾಮ ಮಂದಿರವು ಎತ್ತರದಲ್ಲಿ 161 ಫೀಟ್ ಇರಲಿದ್ದು, 3 ಮಹಡಿಯನ್ನು ಹೊಂದಿರುತ್ತದೆ. ದೇವಸ್ಥಾನಕ್ಕೆ ಒಟ್ಟು ಕೆತ್ತನೆ ಕೆಲಸವಾಗಿರುವ 212 ಕಂಬಗಳನ್ನು ಬಳಸಲಾಗುತ್ತಿದೆ. ಮಂದಿರದ ಒಟ್ಟು ಆಕೃತಿಯು  2.5 ರಿಂದ 3 ಲಕ್ಷ ಕ್ಯೂಬಿಕ್ ಕಲ್ಲುಗಳಿಂದ ಸಿದ್ಧಗೊಳ್ಳಲಿದೆ‌. ಹಲವು ದಶಕಗಳಿಂದ ಕಂಬಗಳ ಕೆತ್ತನೆ ಕಾರ್ಯ ನಡೆದು ಪೂರ್ಣಗೊಂಡಿದೆ. ಮಂದಿರ ನಿರ್ಮಾಣಕ್ಕೆ ಬಳಸಲು ಅವುಗಳ ಶುಚಿತ್ವ ಮಾಡುವುದು ಮಾತ್ರವೇ ಬಾಕಿ ಇದೆ.

ಆಗಸ್ಟ್ 5ರಂದು ನಡೆಯಲಿರುವ ಭೂಮಿ ಪೂಜೆಗೆ ಸರ್ವ ಸಿದ್ಧತೆಗಳೂ ಆಗುತ್ತಿವೆ. ಅಯೋಧ್ಯೆ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ನಗರದ ಕಟ್ಟಡಗಳು ದೀಪಾಲಂಕಾರದಿಂದ ಜಗಮಗಿಸುತ್ತಿವೆ. ರಸ್ತೆಗಳು ಶುಭ್ರಗೊಂಡು, ಎಲ್ಲೆಲ್ಲೂ ಕೇಸರಿ ಧ್ವಜಗಳೇ ಸ್ವಚ್ಛಂದವಾಗಿ ಹಾರುತ್ತಾ ಕಂಗೊಳಿಸುತ್ತಿವೆ. ನಗರದ ಗೋಡಗಳಿಗೆಲ್ಲಾ ಹಳದಿ (ಜ್ಞಾನ ಹಾಗು ಅದೃಷ್ಟದ ಸಂಕೇತ) ಬಣ್ಣ ಬಳಿಯಲಾಗಿದೆ.

ಅಯೋಧ್ಯೆ ನಗರದಲ್ಲಿ ಎಲ್ಲಿ ನೋಡಿದರೂ, ಪ್ರಾರ್ಥನೆ, ಭಜನೆಗಳು ನಡೆದು ರಾಮ ನಾಮ ಸ್ಮರಣೆಯೇ ನಡೆಯುತ್ತಿದೆ. ಸ್ಥಳೀಯ ದೇವಸ್ಥಾನಗಳಲ್ಲಿ ಅಖಂಡ ರಾಮಾಯಣದ ಪಠಣೆ ಮಾಡಲಾಗುತ್ತಿದ್ದು, ಪ್ರತಿ ದೇವಾಲಯ, ಮನೆಗಳು ಕೂಡ ದೀಪಾಲಂಕಾರದಿಂದ ಬೆಳಗುತ್ತಿವೆ.

ಕಾರ್ಯಕ್ರಮದ ಆಮಂತ್ರಣ ಪತ್ರವು ಕೆಂಪು ಹಾಗು ಕಪ್ಪು ಬಣ್ಣದಲ್ಲಿದ್ದು, ಹಿನ್ನಲೆ ಬಣ್ಣವಾಗಿ ಹಳದಿಯನ್ನು ಬಳಸಲಾಗಿದೆ. ಅದನ್ನು ಈಗಾಗಲೇ 150ಕ್ಕೂ ಹೆಚ್ಚು ಗಣ್ಯರಿಗೆ ಕಳುಹಿಸಲಾಗಿದೆ. ಅದರಲ್ಲಿ 36 ವಿವಿಧ ಆಚರಣೆಗಳನ್ನು ಪಾಲಿಸುವ ಒಟ್ಟು 133 ಸನ್ಯಾಸಿಗಳನ್ನು ದೇಶದ ಮೂಲೆ ಮೂಲೆಯಿಂದ ಕರೆಯಲಾಗಿದೆ‌.

ಉಳಿದಂತೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿ ಬಿನ್ ಪಾಟೀಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್.ಎಸ್.ಎಸ್ ಅದಿ ನಾಯಕ ಮೋಹನ್ ಭಾಗವತ್ ಹಾಗು ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಭಾಗಿಯಾಗಲಿದ್ದಾರೆ.

ಭೂಮಿ ಪೂಜೆಯು ಮಂತ್ರಗಳ ಪಠಣೆ, ಶಿಲೆ ಹಾಗು  ಭೂಮಿ ಪೂಜೆ ಸಲ್ಲಿಸುವುದರ ಮೂಲಕ ನಡೆಯಲಿದೆ. ಒಟ್ಟು 22.60 ಕೆ.ಜಿ ಅಷ್ಟು ಬೆಳ್ಳಿಯಿಂದ ಮಾಡಲ್ಪಟ್ಟ ಇಟ್ಟಿಗೆಗಳನ್ನು ಭೂಮಿ ಪೂಜೆಗೆ ಬಳಸಲಾಗುತ್ತಿದೆ. ಸಮಾರಂಭಕ್ಕೆ ಬರುವ ಅತಿಥಿಗಳು 6 ಫೀಟ್ ಅಂತರವನ್ನು ಕೊರೋನಾ ಸೊಂಕಿನ ಹಿನ್ನಲೆಯಲ್ಲಿ ಕಡ್ಡಾಯವಾಗಿ ಕಾಯ್ದುಕೊಳ್ಳಲೇ ಬೇಕಿದೆ‌.

ಲಡ್ಡು ತಯಾರಿಕೆ:

ರಾಮ ಮಂದಿರದ ಭೂಮಿ ಪೂಜೆ ಸಮಾರಂಭದ ಪ್ರಯುಕ್ತ ಆಗಸ್ಟ್ 5ಕ್ಕೆ ಮಣರಾಮ್ ದಾಸ್ ಛಾವಣಿಯಲ್ಲಿ ಲಡ್ಡು ತಯಾರಿಕೆ ಕಾರ್ಯ ಆಗುತ್ತಿದೆ. ಎ.ಎನ್.ಐ ಮೂಲಗಳ ಪ್ರಕಾರ ಒಟ್ಟು 1,11,000 ಲಡ್ಡುಗಳನ್ನು ತಯಾರಿಸಲಾಗುತ್ತಿದೆ. ಕಡಲೆ ಹಿಟ್ಟು, ದೇಸಿ ತುಪ್ಪ ಹಾಗು ಸಕ್ಕರೆ ಸ್ಪಟಿಕಗಳಿಂದ ರುಚಿಕರ  ಬೇಸನ್ ಲಾಡುಗಳು ಭಕ್ತಾದಿಗಳಿಗೆ ಮಾಡಲಾಗುತ್ತಿದೆ.

ತಂಗುವ ವ್ಯವಸ್ಥೆ:

ಕಾರ್ಯಕ್ರಮಕ್ಕೆ ಬರುವ 200 ಭಕ್ತಾದಿಗಳಿಗೆ ತಂಗುವ ವ್ಯವಸ್ಥೆ ಮಾಡಲಾಗಿದೆ. ಆ ಆವರಣದ ಗೋಡೆಗಳಿಗೆ ರಾಮಾಯಣದ ದೃಶ್ಯಗಳನ್ನು ಚಿತ್ರಕಲೆಯಲ್ಲಿ ಬಿಡಿಸಲಾಗಿದೆ.

ಪೌರಾಣಿಕ ದೃಶ್ಯಗಳ ಪ್ರದರ್ಶನ:

ಭೂಮಿ ಪೂಜೆಯ ಆಗಸ್ಟ್ 5ರಂದು ರಾತ್ರಿ 8 ಗಂಟೆಯಿಂದ 10ರವರೆಗೆ ರಾತ್ರಿ ಟೈಮ್ಸ್ ಸ್ಕ್ವೇರ್ ಅಲ್ಲಿ ದೊಡ್ಡ ಪರದೆ ಮೇಲೆ ‘ಜೈ ಶ್ರೀ ರಾಮ್’ ಎಂಬ ಪೌರಾಣಿಕ ಪ್ರದರ್ಶನವನ್ನು ಹಿಂದಿ ಹಾಗು ಇಂಗ್ಲಿಷ್ ಭಾಷೆ ಎರಡರಲ್ಲೂ ಪ್ರಸಾರ ಮಾಡಲಾಗುತ್ತದೆ.

ದೀಪೋತ್ಸವ’ಕ್ಕೆ  ಕರೆ:

ಭೂಮಿ ಪೂಜೆಗೆಂದು ಸುಮಾರು ಒಂದು ಲಕ್ಷ ಮಣ್ಣಿನಿಂದ ಮಾಡಿದ ದೀಪಗಳನ್ನು ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ತರಿಸಿದ್ದು, ಅದು ಈಗಾಗಲೇ ಮಿನುಗಲು ಆರಂಭಿಸಿದೆ. ತಾರಿಕು 3, 4 ಮತ್ತು 5ರಂದು ಅಯೋಧ್ಯೆಯ ತುಂಬೆಲ್ಲಾ ‘ದೀಪೋತ್ಸವ’ ಮಾಡಿ ಎಂದು ಮುಖ್ಯಮಂತ್ರಿಗಳು ಕರೆ ಕೊಟ್ಟಿರುವುದರಿಂದ ಅಯೋಧ್ಯೆ ಮಿಂಚುತ್ತಿರುವುದನ್ನು ನೋಡಲು ಎರಡು ಕಣ್ಣುಗಳು ಸಾಲುತ್ತಿಲ್ಲ.

ಶ್ರೀ ರಾಮಚಂದ್ರನಿಗೆ ವಿಶೇಷ ಧರಿಸಿನ ವಿನ್ಯಾಸ:

ಕಳೆದ ಮೂರು ದಶಕಗಳಿಂದ ಶಂಕರ್ ಲಾಲ್ ಹಾಗು ಭಗವತ್ ಲಾಲ್ ಸಹೋದರರು ಅಯೋಧ್ಯೆಯ ರಾಮಮಂದಿರದ ಶ್ರೀ ರಾಮಚಂದ್ರನ ವಿಗ್ರಹಕ್ಕೆ ‘ಪಹಾಧಿ’ಯನ್ನು ಹೊಲಿಯುತ್ತಿದ್ದಾರೆ. ಬಧಿ ಕುಟಿಯಾ ಎಂಬ ಮೂಲದವರಾದ ಇವರುಗಳು ದಿವಂಗತ ಬಾಬು ಲಾಲ್ ಅವರ ಪುತ್ರರು. ಇವರಿಬ್ಬರೂ ಕೇವಲ ದೇವಸ್ಥಾನದ ದೇವರ ಮೂರ್ತಿಗಳಿಗೆ ಮಾತ್ರ ಬಟ್ಟೆ ಹೊಲಿಯುವುದು ಭಾರೀ ವಿಶೇಷ.

ಭೂಮಿ ಪೂಜೆಯ ದಿನಕ್ಕೆ ಶ್ರೀ ರಾಮನ ವಿಗ್ರಹಕ್ಕೆ ಹಸಿರು ಹಾಗು ಕೇಸರಿ ಬಣ್ಣದ ಧರಿಸುಗಳನ್ನು ಈಗಾಗಲೇ ಹೊಲಿದು ತಯಾರಿಸಿದ್ದಾರೆ. ಈ ಧರಿಸುಗಳು ಬಹಳ ಮೃದುವಾಗಿದ್ದು, ವೆಲ್ವೆಟ್ ಬಟ್ಟೆಯಿಂದ ಮಾಡಲಾಗಿದೆ. ಈ ವಿಶೇಷ ಧರಿಸಿನಲ್ಲಿ ನವ ರತ್ನಗಳನ್ನು ಅಳವಡಿಸಲಾಗಿದೆ. ಅಂತೆಯೇ ಲಕ್ಷ್ಮಣ, ಭರತ, ಶತ್ರುಜ್ಞ, ಹನುಮಾನ್, ಶಾಲಿಗ್ರಾಮ ವಿಗ್ರಹಗಳಿಗೂ ಧರಿಸನ್ನು ತಯಾರು ಮಾಡಲಾಗಿದೆ.

ಒಟ್ಟಾರೆ, ರಾಮಮಂದಿರದ ಭೂಮಿ ಪೂಜೆಗೆ ಸರ್ವ ಸಿದ್ಧತೆಗಳೂ ಆಗಿದೆ. ಐತಿಹಾಸಿಕ ಗಳಿಗೆಗೆ ಇನ್ನೇನು ಕ್ಷಣಗಣನೆಯೂ ಆರಂಭವಾಗಿದೆ. ಭವ್ಯ ರಾಮಮಂದಿರದ ನಿರ್ಮಾಣ 2023ರ ಹೊತ್ತಿಗೆಲ್ಲಾ ಪೂರ್ಣಗೊಳ್ಳುವುದು ಎಂದು ಅಂದಾಜಿಸಲಾಗಿದೆ.

ರಜತ್ ರಾಜ್ ಡಿ.ಹೆಚ್, ಪ್ರಧಾನ ಸಂಪಾದಕರು
error: Content is protected !!