ರಾಜ್ಯಸಭೆಯಲ್ಲಿ ಬಿಜೆಪಿ ಶತಕ ಸಾಧನೆ!

ನವದೆಹಲಿ: ರಾಜ್ಯಸಭೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷದ ಸಂಖ್ಯೆ 100ರ ಗಡಿ ದಾಟಿದೆ. 1988ರ ನಂತರ ಈ ಸಾಧನೆ ಮಾಡಿದ ಮೊದಲ ಪಕ್ಷ ಎಂಬ ಹೆಗ್ಗಳಿಕೆಗೆ ಕೇಸರಿಪಡೆ ಪಾತ್ರವಾಗಿದೆ. ರಾಜ್ಯಸಭೆಗೆ ಗುರುವಾರ ನಡೆದ ಚುನಾವಣೆಗಳ ಬಳಿಕ ಬಿಜೆಪಿ ಸದಸ್ಯರ ಸಂಖ್ಯೆ 101 ತಲುಪಿರುವುದು ಪಕ್ಷ ದೇಶಾದ್ಯಂತ ವಿಸ್ತಾರಗೊಂಡಿರುವುದಕ್ಕೆ ಸಾಕ್ಷಿಯೂ ಹೌದು.

ಮುಂಬರುವ ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೂ ಈ ಅಂಕಿ ಸಂಖ್ಯೆಗಳು ಪಕ್ಷಕ್ಕೆ ದೊಡ್ಡ ಮಟ್ಟಿನಲ್ಲಿ ನೆರವಾಗಲಿದೆ. ಮೇಲಾಗಿ, ಪ್ರಮುಖ ವಿಧೇಯಕಗಳಿಗೆ ರಾಜ್ಯಸಭೆಯ ಅನುಮೋದನೆ ಪಡೆದುಕೊಳ್ಳಲು ಬಿಜೆಪಿ ಮಿತ್ರಪಕ್ಷಗಳು ಹಾಗೂ ಇತರೆ ವಿರೋಧ ಪಕ್ಷಗಳನ್ನು ಸಾಕಷ್ಟು ಮನವೊಲಿಸಬೇಕಾಗುತ್ತಿತ್ತು. ಆದರೆ, ಸದಸ್ಯತ್ವ ಬಲದಿಂದ ವಿಧೇಯಕಗಳ ಅನುಮೋದನೆ ಹಾದಿಯೂ ಸುಗಮವಾಗುವ ಲಕ್ಷಣಗಳು ಗೋಚರಿಸಿವೆ.

ಗುರುವಾರ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟದ ಮಿತ್ರಪಕ್ಷವಾಗಿರುವ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಒಂದು ರಾಜ್ಯಸಭಾ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಈಶಾನ್ಯದ ಅಸ್ಸಾಂ, ತ್ರಿಪುರಾ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಬಿಜೆಪಿ ನಾಲ್ಕು ರಾಜ್ಯಸಭಾ ಸೀಟುಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಉಪರಾಷ್ಟ್ರಪತಿ ಚುನಾವಣೆ ಮೇಲೆ ಪರಿಣಾಮ: ರಾಜ್ಯಸಭೆಯಲ್ಲಿ ಬಿಜೆಪಿ ಸಂಖ್ಯೆ 100ರ ಗಡಿ ದಾಟುವುದರೊಂದಿಗೆ ಆಗಸ್ಟ್​ನಲ್ಲಿ ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯ ರೇಸ್​ನಿಂದ ಪ್ರತಿಪಕ್ಷಗಳನ್ನು ಹೊರಗಿಟ್ಟಂತಾಗಿದೆ. ಅದಲ್ಲದೆ, ರಾಜ್ಯಸಭೆಯಲ್ಲಿ ಈಶಾನ್ಯ ಭಾಗದಿಂದ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುವ ಯಾವುದೇ ಸದಸ್ಯ ಇಲ್ಲ. ರಾಜ್ಯಸಭೆಯಲ್ಲಿ ಹೀಗಾಗುತ್ತಿರುವುದು ಇದೇ ಮೊದಲು!

ಕಾಂಗ್ರೆಸ್ 5 ಸ್ಥಾನ ಕುಸಿತ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ನಂತರ ಆಮ್ ಆದ್ಮಿ ಪಾರ್ಟಿ ರಾಜ್ಯದ ಎಲ್ಲಾ ಐದು ರಾಜ್ಯಸಭಾ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ ಗೆದ್ದಿದೆ. ಇದರಿಂದ ಮೇಲ್ಮನೆಯಲ್ಲಿ ಎಎಪಿಯ ಸಂಖ್ಯೆ ಎಂಟಕ್ಕೇರಿದೆ. ಕಾಂಗ್ರೆಸ್ ಸದಸ್ಯತ್ವ ಬಲ ಐದು ಸ್ಥಾನಗಳಷ್ಟು ಕಡಿಮೆಯಾಗಿದೆ.

error: Content is protected !!