ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗೆ ಕೊಡಗಿನಿಂದ ಭಾರತೀಯ ವಿದ್ಯಾಭವನದ ಚಿನ್ಮಯ, ಸರಿನ ಶಿಜ ಆಯ್ಕೆ

ಮಡಿಕೇರಿ, ಮಾ.5: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ (ಕ.ರಾ.ವಿ.ಪ.), ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ,ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ದೂರದರ್ಶನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಚಂದನ ವಾಹಿನಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಯಲಿರುವ ‘ಥಟ್ ಅಂತ ಹೇಳಿ?!’ ಸರ್ ಸಿ.ವಿ.ರಾಮನ್ ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗೆ ಕೊಡಗು ಜಿಲ್ಲೆಯಿಂದ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳನ್ನು ಒಳಗೊಂಡ ತಂಡ ಆಯ್ಕೆಗೊಂಡಿದೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕೊಡಗು ಜಿಲ್ಲಾ ಪಂಚಾಯ್ತಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ,ಸಮಗ್ರ ಶಿಕ್ಷಣ ಕರ್ನಾಟಕ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಹಾಗೂ ಮಡಿಕೇರಿ ನಗರದ ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಯ ಸಹಯೋಗದಲ್ಲಿ ಮಾರ್ಚ್ 4 ರಂದು ( ಗುರುವಾರ ) ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ: 2021 ರ ಅಂಗವಾಗಿ ಏರ್ಪಡಿಸಿದ್ದ ಕೊಡಗು ಜಿಲ್ಲಾಮಟ್ಟದ ಸರ್ ಸಿ.ವಿ.ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಾದ ಚಿನ್ಮಯ ಪಿ ಮತ್ತು ಸರಿನ ಶಿಜ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ. ಈ ತಂಡದ ಮಾರ್ಗದರ್ಶಿ ಶಿಕ್ಷಕಿ ಪಿ.ಎಸ್.ಪೊನ್ನಮ್ಮ ಆಗಿದ್ದಾರೆ.
ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಬಿ.ಸಿ.ಅಭಿಜ್ಞಾನ್ ಮತ್ತು ಕೆ.ಪಿ.ಕಾರ್ತಿಕ್ ತಂಡ ದ್ವಿತೀಯ ಸ್ಥಾನ ( ಮಾರ್ಗದರ್ಶಿ ಶಿಕ್ಷಕಿ ವೀಣಾ ), ನಗರದ ಸಂತ ಜೋಸೆಫರ ಕಾನ್ವೆಂಟ್ ಸಂಯುಕ್ತ ಪ್ರೌಢಶಾಲೆಯ ಅನನ್ಯ ಎಂ.ಎಚ್. ಮತ್ತು ರೊಲೆನ್ಸಿಯಾ ಬಿಯಾಸ್ ರಾಯ್ ತಂಡವು ( ಮಾರ್ಗದರ್ಶಿ ಶಿಕ್ಷಕಿ ಮಂಗಳಗೀತಾ) ಕ್ರಮವಾಗಿ ತೃತೀಯ ಸ್ಥಾನ ಪಡೆದುಕೊಂಡಿತು.

ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ತಂಡಗಳಿಗೆ ಕ್ರಮವಾಗಿ ರೂ.3 ಸಾವಿರ ಹಾಗೂ ರೂ.2 ಸಾವಿರ ನಗದು ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ.ಟಿ.ಎನ್.ಗಾಯತ್ರಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ವಿದ್ಯಾರ್ಥಿ ಚಿನ್ಮಯ ಪಿ., ನಗರದ ಕೆನರಾ ಬ್ಯಾಂಕ್ ನ ಪ್ರಾದೇಶಿಕ ಕಛೇರಿಯ ವಿಭಾಗೀಯ ಮೆನೇಜರ್ ಜಿ.ಸಿ.ಪ್ರಕಾಶ್ ಮತ್ತು ಸ್ಮಿತಾ ದಂಪತಿಯ ಪುತ್ರ ಹಾಗೂ ವಿದ್ಯಾರ್ಥಿನಿ ಸರಿನ ಶಿಜ, ನಗರದ ವರ್ತಕ ಖಾಜಮನ್ನ ಮತ್ತು ಜೈನಬ್ ದಂಪತಿಯ ಪುತ್ರಿ.

ರಸಪ್ರಶ್ನೆ ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮೊದಲ ಮೂರು ತಂಡಗಳಿಗ 5 ಸುತ್ತಿನಲ್ಲಿ ರಸಪ್ರಶ್ನೆ ಸ್ಪರ್ಧೆಯೊಂದಿಗೆ ವಿಜ್ಞಾನ ಪ್ರಯೋಗದ ಚಟುವಟಿಕೆಯನ್ನು ನಡೆಸಲಾಯಿತು.

———-+—+——-+——–+

error: Content is protected !!