ರಾಜ್ಯದಲ್ಲಿ ಬೈಕ್, ಟಿವಿ, ಫ್ರಿಡ್ಜ್ ಹೊಂದಿದವರ BPL ಕಾರ್ಡ್ ರದ್ದುಪಡಿಸುವುದಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ರಾಜ್ಯದಲ್ಲಿ ಬೈಕ್, ಟಿವಿ, ಫ್ರಿಡ್ಜ್ ಹೊಂದಿದವರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗುವುದು ಎಂಬ ವದಂತಿಗಳ ಬಗ್ಗೆ ಆಹಾರ ಇಲಾಖೆಯಿಂದ ಸ್ಪಷ್ಟನೆ ನೀಡಲಾಗಿದ್ದು, ಬೈಕ್, ಟಿವಿ, ಫ್ರಿಜ್ ಇದ್ದವರ ಬಿಪಿಎಲ್ ಕಾರ್ಡ್ ರದ್ದು ಪಡಿಸುವುದಿಲ್ಲ ಎಂದು ಹೇಳಲಾಗಿದೆ.

ಕೆಲವು ಮಾಧ್ಯಮಗಳಲ್ಲಿ ಟಿವಿ, ಫ್ರಿಜ್, ಬೈಕ್ ಇರುವ ಬಿಪಿಎಲ್ ಕುಟುಂಬದವರ ಕಾರ್ಡ್ ಗಳನ್ನು ರದ್ದುಪಡಿಸಲಾಗುವುದು ಎಂದು ಹೇಳಲಾಗಿತ್ತು. ಈ ಬಗ್ಗೆ ಸ್ಪಷ್ಟೀಕರಣ ನೀಡಿ, ಆಹಾರ ಇಲಾಖೆ, ಬೈಕ್, ಟಿವಿ, ಫ್ರಿಜ್ ಹೊಂದಿದ ಕುಟುಂಬಗಳು ಆದ್ಯತಾ ಪಡಿತರ ಚೀಟಿಯನ್ನು ಪಡೆದುಕೊಳ್ಳಲು ಸರ್ಕಾರದಿಂದ ನಿಗದಿ ಮಾಡಲಾದ ಮಾನದಂಡಗಳಲ್ಲಿ ಅವಕಾಶವಿದೆ ಎಂದು ತಿಳಿಸಿದೆ.
ಬೈಕ್, ಟಿವಿ ಫ್ರಿಜ್ ಇರುವ ಕಾರಣಕ್ಕೆ ರಾಜ್ಯದಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿಗಳನ್ನು ರದ್ದು ಪಡಿಸಲಾಗಿದೆ ಎನ್ನುವ ಮಾಹಿತಿ ಆಧಾರ ರಹಿತವಾಗಿದೆ. ಅಂತಹ ಯಾವುದೇ ಆದೇಶವನ್ನು ಸರ್ಕಾರ ನೀಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸರ್ಕಾರ ನಿಗದಿಪಡಿಸಿದ ಮಾನದಂಡಗಳಿಗೆ ವಿರುದ್ಧವಾಗಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಪಡೆದುಕೊಂಡಿದ್ದರೆ ಅಂತಹ ಅನರ್ಹ ಕುಟುಂಬಗಳ ಪರಿಶೀಲನೆ ನಡೆಸಿ ಕಾರ್ಡ್ ಹಿಂತಿರುಗಿಸುವಂತೆ ಸೂಚಿಸಲಾಗಿದೆ. ಅನರ್ಹರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದರೆ, ಎಪಿಎಲ್ ಗೆ ಬದಲಾವಣೆ ಮಾಡಲಾಗುತ್ತದೆ.
ತೆರಿಗೆ ಪಾವತಿದಾರರು ಕಾರ್ಡ್ ಹೊಂದುವಂತಿಲ್ಲ. ಒಂದು ವೇಳೆ ಅರ್ಹರ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದಲ್ಲಿ ಆಹಾರ ಇಲಾಖೆ ಅಧಿಕಾರಿ, ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿ ಸಂಪರ್ಕಿಸಬಹುದಾಗಿದೆ.

error: Content is protected !!