ಯುದ್ಧದಿಂದಾಗಿ ತಾಕಲಿದೆ ಮದ್ಯ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ!

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದ ಭಾರತದಲ್ಲಿ ಬಿಯರ್ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. ಯುದ್ಧದಿಂದ ಆಲ್ಕೋಹಾಲ್ ಪಾನೀಯಗಳ ಪ್ರಮುಖ ಘಟಕಾಂಶವಾದ “ಬಾರ್ಲಿಯ”(Barley) ದರ ಮತ್ತು ಪೂರೈಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಬಿಯರ್ ಬೆಲೆಯಲ್ಲಿ ಏರಿಕೆಯಾಗಬಹುದು ಎಂದು ಊಹಿಸಲಾಗಿದೆ.
ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ನಡೆಯನ್ನು ಖಂಡಿಸಿ, ಯುಎಸ್ ಮತ್ತು ಕೆನಡಾದ ಹಲವು ರಾಜ್ಯಗಳಲ್ಲಿ ರಷ್ಯಾ ನಿರ್ಮಿತ ಮತ್ತು ರಷ್ಯಾದ ಬ್ರಾಂಡ್‌ನ ಸ್ಪಿರಿಟ್‌ಗಳನ್ನು ಬಹಿಷ್ಕರಿಸುತ್ತಿವೆ. ಇದರಿಂದ ರಷ್ಯಾದ ವೋಡ್ಕಾ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.
ಆಲ್ಕೋಹಾಲ್ ಪಾನೀಯಗಳ ಕೀ ಅಂಶವಾದ ಬಾರ್ಲಿಯನ್ನು ರಷ್ಯಾದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಅಷ್ಟಕ್ಕೂ ರಷ್ಯಾ ದೇಶವು ಇಡೀ ವಿಶ್ವದಲ್ಲೆ ಬಾರ್ಲಿ ಬೆಳೆಯುವ ಎರಡನೇ ಅತಿದೊಡ್ಡ ರಾಷ್ಟ್ರ. ಇನ್ನು ಮುಖ್ಯ ಅಂಶ ಎಂದರೆ, ಉಕ್ರೇನ್ ಅತಿಹೆಚ್ಚು ಬಾರ್ಲಿ ಉತ್ಪಾದಿಸುವ ನಾಲ್ಕನೇ ರಾಷ್ಟ್ರ. ಹೀಗಿರುವಾಗ ಎರಡು ದೇಶಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡರೆ, ಜಾಗತಿಕವಾಗಿ ಬಾರ್ಲಿ ಬೆಲೆಯಲ್ಲಿ ಹೆಚ್ಚಳವಾಗುತ್ತದೆ.
ಭಾರತವು ಸಹ ಬಾರ್ಲಿಯನ್ನು ಉತ್ಪಾದಿಸುತ್ತದೆ. ದೇಶದ ಹಲವಾರು ಮದ್ಯ ತಯಾರಕರು, ದೇಶೀಯ ಉತ್ಪಾದನೆಯನ್ನು ಮಾತ್ರ ಅವಲಂಬಿಸಿವೆ. ಆದರೂ, ಬಾರ್ಲಿಯ ಜಾಗತಿಕ ಬೆಲೆಗಳಿಂದ ದೇಶೀಯ ದರಗಳ ಮೇಲೂ ಪರಿಣಾಮ ಬೀರಬಹುದು.
ಬಿಯರ್ ದುಬಾರಿಯಾಗಬಹುದು.!
ಜಾಗತಿಕ ಬಾರ್ಲಿ ಸರಬರಾಜುಗಳ ಮೇಲೆ ಪರಿಣಾಮ ಬೀರಿದರೆ ಮತ್ತು ದೇಶೀಯ ದರಗಳು ಅಂತರಾಷ್ಟ್ರೀಯ ಬೆಲೆಗಳೊಂದಿಗೆ ಸಮಾನಾಂತರವಾಗಿ ಚಲಿಸಿದರೆ, ಸಂಗ್ರಹಣಾ ವೆಚ್ಚಗಳು ಹೆಚ್ಚಾಗುತ್ತವೆ. ಇದರರ್ಥ ನಿಮ್ಮ ನೆಚ್ಚಿನ ಬಿಯರ್‌ಗಾಗಿ ನೀವು ಹೆಚ್ಚು ಪಾವತಿಸಲೇ ಬೇಕಾಗಬಹುದು.
ಭಾರತದ ಅತಿದೊಡ್ಡ, ಬಿಯರ್ ಬ್ರಾಂಡ್ ಬಿರಾ 91ರ ಮುಖ್ಯ ಕಾರ್ಯನಿರ್ವಾಹಕ ಅಂಕುರ್ ಜೈನ್, ಪ್ರಸ್ತುತ ರಷ್ಯಾ-ಉಕ್ರೇನ್ ಬಿಕ್ಕಟ್ಟು ಜಾಗತಿಕ ಬಾರ್ಲಿ ಬೆಲೆಗಳ ಮೇಲೆ ಪರಿಣಾಮ ಬೀರಲಿದೆ. ಆದರೆ ಇದು ಅಲ್ಪಾವಧಿಯ ಬದಲಾವರೆ ಎಂದು ಹೇಳಿದ್ದಾರೆ. ಆದರೆ ಬೆಲೆ ಹೆಚ್ಚಳ ಕಂಪನಿಗಳು ಮತ್ತು ರಾಜ್ಯ ಸರ್ಕಾರಗಳ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತವೆ ಎಂದು ಜೈನ್ ಹೇಳಿದ್ದಾರೆ.