‘ಯಡಿಯೂರಪ್ಪ ಕೈ-ಕಾಲು ಹಿಡಿದು ಬಿಜೆಪಿಗೆ ಬಂದಿದ್ದೀರಿ ಮರೆಯಬೇಡಿ’ಯತ್ನಾಳ್ ಗೆ ತಿರುಗೇಟು ನೀಡಿದ ರೇಣುಕಾಚಾರ್ಯ

ಬೆಂಗಳೂರು : ಮುಖ್ಯಮಂತ್ರಿಗಳ ಆಪ್ತವಲಯದವರಲ್ಲಿ ಒಬ್ಬರಾಗಿರುವ ರೇಣುಕಾಚಾರ್ಯ ಶಾಸಕ ಯತ್ನಾಳ್ ಅವರ “ಮುಖ್ಯಮಂತ್ರಿ ಬದಲಾವಣೆ” ಹೇಳಿಕೆ ಕುರಿತು ವ್ಯಗ್ರರಾಗಿ ಅವರ ವಿರುದ್ಧ ಮುಗಿಬಿದ್ದಿದ್ದಾರೆ. ತಮ್ಮದೇ ಪಕ್ಷದ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಅವರು ” ಯತ್ನಾಳ್ ಅವರೇ ಮುಖ್ಯಮಂತ್ರಿ ಯಡಿಯೂರಪ್ಪನವರ ಕೈ-ಕಾಲು ಹಿಡಿದು ಪಕ್ಷಕ್ಕೆ ಬಂದು, ಅವರಿಂದಲೇ ಶಾಸಕರೂ ಆಗಿ ಈಗ ಅವರ ವಿರುದ್ಧವೇ ಮಾತಾಡುವಷ್ಟು ದಾಷ್ಟ್ಯವೇ ನಿಮಗೆ” ಎಂದಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳೂ ಆಗಿರುವ ರೇಣುಕಾಚಾರ್ಯ ಯತ್ನಾಳ್ ಅವರಿಗೆ ಯಡಿಯೂರಪ್ಪನವರ ಕೈ ಕಾಲು ಹಿಡಿದು ಬಿಜೆಪಿಗೆ ಬಂದ್ದಿದ್ದೀರಿ. ಇವತ್ತು ಅವರ ವಿರುದ್ಧ ಮಾತನಾಡುತ್ತಿದ್ದಿರಾ ? ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕೆಂಬ ಕಾಳಜಿ ನಮಗೂ ಇದೆ. ಒಟ್ಟಾಗಿ ಹೋಗಿ ಅನುದಾನ ಕೇಳೋಣ. ಅದನ್ನು ಬಿಟ್ಟು ಪಕ್ಷ ವಿರೋಧಿ ಹೇಳಿಕೆ ನೀಡಬೇಡಿ ಎಚ್ಚರಿಕೆ ನೀಡಿದರು.
ಯಡಿಯೂರಪ್ಪ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಮಹಾನ್ ನಾಯಕ. ಅವರ ನಾಯಕತ್ವವನ್ನು ಕೇಂದ್ರದ ವರಿಷ್ಠರು ಒಪ್ಪಿದ್ದಾರೆ ಎಂದಿರುವ ರೇಣುಕಾಚಾರ್ಯ, ಯತ್ನಾಳ್ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಯಡಿಯೂರಪ್ಪನವರ ಕುರಿತು ಅಸಮಾಧಾನಗೊಂಡಿದ್ದಾರೆ, ಅವರನ್ನು ಶೀಘ್ರವೇ ಬದಲಾಯಿಸುತ್ತಾರೆ ಎಂದು ಹೇಳಿದ್ದಕ್ಕೆ “ಪ್ರಧಾನಿ ಮೋದಿ ನಿಮಗೆ ಕರೆ ಮಾಡಿ ಯಡಿಯೂರಪ್ಪ ಅವರನ್ನು ಇಳಿಸುತ್ತೇವೆ ಅಂತಾ ಹೇಳಿದ್ರಾ ? ಒಂದು ಕಡೆ ಪಕ್ಷಕ್ಕೆ ಮುಜುಗರ ಆಗುವ ಹಾಗೆ ಮಾತಾಡ್ತೀರಿ, ಇನ್ನೊಂದು ಕಡೆ ಪ್ರಧಾನಿ ಹೆಸರು ಹೇಳ್ತೀರಿ, ಕಳೆದ ವರ್ಷ ಪ್ರವಾಹ ಆದಾಗ ನೀವೇ ನೇರವಾಗಿ ಪ್ರಧಾನಿ ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡಿಸಬೇಕಿತ್ತು. ಅದರ ಬದಲು ಬಹಿರಂಗವಾಗಿ ಪ್ರಧಾನಿ ವಿರುದ್ಧ ಹೇಳಿಕೆ ಕೊಡಲಿಲ್ವಾ. ಈಗ ನಮಗೆ ಯಡಿಯೂರಪ್ಪ ನಾಯಕ ಅಲ್ಲ, ಮೋದಿ, ಷಾ ಅಂತಾ ಹೇಳ್ತೀರಿ, ಬಿಜೆಪಿಗೆ ಎಲ್ಲರೂ ನಾಯಕರೇ, ಹಾಗಾದರೆ ಹಿಂದೆ ಯಡಿಯೂರಪ್ಪ ಅವರನ್ನು ಕೈಕಾಲು ಕಟ್ಟಿ ತಾವು ಬಿಜೆಪಿಗೆ ಬರಲಿಲ್ವಾ ? ಆಗ ಯಡಿಯೂರಪ್ಪ ನಿಮ್ಮ ನಾಯಕ ಆಗಿರಲಿಲ್ವಾ. ಯಾಕೆ ಈ ರೀತಿ ಹೇಳಿಕೆ ಕೊಡ್ತಿದ್ದೀರಿ? ಹಗಲುಗನಸು ಕಾಣ್ತಾ ದುರಹಂಕಾರದ ಮಾತಾಡ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಉತ್ತರ ಕರ್ನಾಟಕ ಶಾಸಕರು ಎಲ್ಲರೂ ನಿಮ್ಮ ಬೆಂಬಲಕ್ಕೆ ಇದ್ದಾರಾ ? ಯಡಿಯೂರಪ್ಪ ವಿರುದ್ಧ ಹೇಳಿಕೆ ಕೊಡಿ ಅಂತಾ ಹೇಳಿದ್ದಾರಾ ? ಅಭಿವೃದ್ಧಿ ಪ್ರಶ್ನೆ ಬಂದಾಗ ನಾವೆಲ್ಲಾ ಉತ್ತರ ಕರ್ನಾಟಕ ಪರ ಕೈ ಎತ್ತುತ್ತೇವೆ. ಹೋಗ್ರೀ, ಪ್ರಧಾನಿ ಭೇಟಿ ಮಾಡ್ರೀ, ಅನುದಾನ ತನ್ರೀ ಎಂದು ಯತ್ನಾಳ್ ಅವರಿಗೆ ಸವಾಲು ಹಾಕಿದ್ದಾರೆ ರೇಣುಕಾಚಾರ್ಯ.