fbpx

ಮೖತದೇಹಗಳನ್ನು ಪ್ಯಾಕ್ ಮಾಡುವ ರಾಬಟ್೯, ಹುಸೇನ್ ಅವರಿಗೆ ನೆರವು

ಕೊಡಗು ಕೋವಿಡ್ ಆಸ್ಪತ್ರೆಯ ಕಾಯಕಜೀವಿಗಳಿಗೆ ವಿರಾಜಪೇಟೆ ರೋಟರಿಯಿಂದ ಸನ್ಮಾನ

ಕೊಡಗು: ಕೋವಿಡ್ ನಿಂದ ಸಾವನ್ನಪ್ಪಿದವರ ಮೖತದೇಹಗಳನ್ನು ಅಂತ್ಯಸಂಸ್ಕಾರಕ್ಕೆ ಸಿದ್ದಗೊಳಿಸುವ ಕಾಯಕದಲ್ಲಿ 17 ತಿಂಗಳಿನಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯ ರಾಬಟ್೯ ರಾಡ್ರಿಗಸ್, ಸಯ್ಯದ್ ಹುಸೇನ್ ಅವರುಗಳಿಗೆ ವಿರಾಜಪೇಟೆ ರೋಟರಿ ಕ್ಲಬ್ ನಿಂದ ಗ್ರಹೋಪಯೋಗಿ ಪರಿಕರಗಳ ಕೊಡುಗೆ ನೀಡಿ ಸತ್ಕರಿಸಲಾಯಿತು. ..

ರಾಬಟ್೯, ಹುಸೇನ್ ಅವರು ಕಳೆದ 17 ತಿಂಗಳಿನಿಂದ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ 403 ಮಂದಿಯ ಮೖತದೇಹಗಳನ್ನು ಸಂಸ್ಕಾರಕ್ಕೆ ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡುವ ಕಾಯ೯ದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಥ ಅಪರೂಪದ ಕಾಯ೯ದಲ್ಲಿ ನಿರತರಾಗಿರುವ ರಾಬಟ್೯, ಹುಸೇನ್ ಅವರ ನಿರಂತರ ಕಾಯಕವನ್ನು ಗಮನಿಸಿ ವಿರಾಜಪೇಟೆ ರೋಟರಿ ಕ್ಲಬ್ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಜರುಗಿದ ಸರಳ ಕಾಯ೯ಕ್ರಮದಲ್ಲಿ ಇಬ್ಬರೂ ಕಾಯಕಜೀವಿಗಳಿಗೆ ಗ್ರಹೋಪಯೋಗಿ ಪರಿಕರಗಳನ್ನು ನೀಡಿ ಸತ್ಕರಿಸಲಾಯಿತು.

ಈ ಸಂದಭ೯ ಮಾತನಾಡಿದ ರೋಟರಿ ವಲಯ 6 ರ ಉಪರಾಜ್ಯಪಾಲ ಅನಿಲ್ ಎಚ್.ಟಿ. ಕೋವಿಡ್ ಸಂಕಷ್ಟ ಕಾಲದಲ್ಲಿ ವೈದ್ಯಕೀಯ ಸಿಬ್ಬಂದಿಗಳು ಜನಸೇವೆಯ ಮೂಲಕ ದೇವರೂ ಮೆಚ್ಚುವಂಥ ಕಾಯ೯ ನಿವ೯ಹಿಸಿದ್ದಾರೆ. ಅದರಲ್ಲಿಯೂ ಮೖತದೇಹಗಳನ್ನು ಅಂತ್ಯ ಸಂಸ್ಕಾರಕ್ಕೆ ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡುವ ಅಪರೂಪದ ಕಾಯಕದಲ್ಲಿ ರಾಬಟ್೯ ಮತ್ತು ಹುಸೇನ್ ಹಗಲೂ ರಾತ್ರಿಯೆನ್ನದೇ ವಿರಾಮವೂ ಇಲ್ಲದೇ ತೊಡಗಿಸಿಕೊಂಡಿದ್ದರು. ಬಹಳ ಅಪರೂಪದ ಸೇವಾ ಕಾಯ೯ದ ಮೂಲಕ ಇವರೀವ೯ರು ಜಾತಿ,ಧಮ೯ ಮೀರಿ ತಮ್ಮ ಕತ೯ವ್ಯ ನಿವ೯ಹಿಸಿದ್ದಾರೆ ಎಂದು ಶ್ಲಾಘಿಸಿದರು. ಇಂಥವರು ಅಪರೂಪ ಮತ್ತು ನಾಗರಿಕ ಸಮಾಜದ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅನಿಲ್ ವಿರಾಜಪೇಟೆ ರೋಟರಿ ಕ್ಲಬ್ ಇವರನ್ನು ಗುರುತಿಸಿ ಸೂಕ್ತ ನೆರವು ನೀಡಿರುವುದು ಸಾಮಾಜಿಕ ಸೇವಾ ಸಂಸ್ಥೆಯ ಕಾಳಜಿಗೆ ನಿದಶ೯ನ ಎಂದೂ ಶ್ಲಾಘಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ಕಾಯ೯ಪ್ಪ ಮಾತನಾಡಿ, ರಾಬಟ್೯ ಮತ್ತು ಹುಸೇನ್ ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳು ಕೋವಿಡ್ ದಿನಗಳ ಸಂದಭ೯ ಅವಿರತ ಸೇವೆಯ ಮೂಲಕ ವೈದ್ಯಕೀಯ ಕಾಲೇಜಿಗೆ ಮಹತ್ವದ ಸೇವೆ ನೀಡಿದ್ದಾರೆ. ಕೋವಿಡ್ ನಿಂದ ಸಾವನ್ನಪ್ಪಿದವರ ಮೖತದೇಹಗಳನ್ನು ಅಂತ್ಯಸಂಸ್ಕಾರಕ್ಕೆ ಸಿದ್ದಗೊಳಿಸಿ ,ಸೂಕ್ತ ರೀತಿಯ ಸಾಂಪ್ರದಾಯಿಕ ಗೌರವದೊಂದಿಗೆ ಅಂತ್ಯಕ್ರಿಯೆಗೆ ಮೖತದೇಹಗಳನ್ನು ರವಾನಿಸುವಲ್ಲಿ ರಾಬಟ್೯, ಹುಸೇನ್ ಪಾತ್ರ ಪ್ರಮುಖವಾಗಿದೆ ಎಂದು ಹೆಮ್ಮೆಯಿಂದ ಸ್ಮರಿಸಿದರು.

ವಿರಾಜಪೇಟೆ ರೋಟರಿ ಕ್ಲಬ್ ಅಧ್ಯಕ್ಷ ಡಾ. ಮಾದಂಡ ಲವೀನ್ ಚಂಗಪ್ಪ ಮಾತನಾಡಿ, ರಾಬಟ್೯ ಮತ್ತು ಹುಸೇನ್ ಅವರ ಅಪರೂಪದ ಕಾಯ೯ವೈಖರಿಯನ್ನು ಜಿಲ್ಲೆಯ ಜನತೆ ಸದಾ ಕಾಲ ನೆನಪಿಸಿಕೊಳ್ಳುತ್ತಾರೆ. ಮೂಕಳಮಾಡ ಕೆ. ಮೊಣ್ಣಪ್ಪ ಮತ್ತು ಎನ್.ಪಿ.ಗಾಯತ್ರಿ ದಂಪತಿ ವಿರಾಜಪೇಟೆ ರೋಟರಿ ಮೂಲಕ ನೀಡಿದ ಆಥಿ೯ಕ ನೆರವಿನಲ್ಲಿ ರಾಬಟ್೯ ಹಾಗೂ ಹುಸೇನ್ ಅವರಿಗೆ ನೆರವು ನೀಡಿದ್ದೇವೆ ಎಂದು ಹೇಳಿದರು.

ವಿರಾಜಪೇಟೆ ರೋಟರಿ ಕ್ಲಬ್ ಕಾಯ೯ದಶಿ೯ ಭರತ್ ರಾಮ್ ರೈ, ವಲಯ ಸೇನಾನಿ ಆದಿತ್ಯ, ಡಾ.ಪ್ರಿಯದಶಿ೯ನಿ ಚಂಗಪ್ಪ, ಜಿಲ್ಲಾಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಮಂಜುನಾಥ್ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಕರುಂಬಯ್ಯ ಈ ಸಂದಭ೯ ಹಾಜರಿದ್ದರು.

error: Content is protected !!