fbpx

ಮೋಹನ್ ಸೋನ ಅವರ ಸಾಕ್ಷ್ಯ ಚಿತ್ರ ಪ್ರದರ್ಶನದ ಮೂಲಕ ವಿನೂತನ ಕಾರ್ಯಕ್ರಮ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ವತಿಯಿಂದ ಭಾರತೀಯ ಪರಿಷತ್ ಅಲ್ಲಿ ನಡೆದ ಚಿತ್ರ ಕಲಾವಿದ, ರಂಗ ನಿರ್ದೇಶಕರಾಗಿದ್ದ ಶ್ರೀ ದಿ. ಮೋಹನ್ ಸೋನ ಅವರ ಕುರಿತಾದ ಸಾಕ್ಷ್ಯ ಚಿತ್ರ ಪ್ರದರ್ಶನ ಬೆಳಿಗ್ಗೆ 1೦:30ಗೆ ಕಾರ್ಯಕ್ರಮ ನಡೆಯಿತು.

ಚಿತ್ರ ಕಲಾವಿದ ಹಾಗು ರಂಗ ನಿರ್ದೇಶಕ

ದಿ. ಶ್ರೀ ಮೋಹನ್ ಸೋನ

ಸಾಕ್ಷ್ಯ ಚಿತ್ರ ಪ್ರದರ್ಶನದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅತಿಥಿಗಳಾದ ಮೈಸೂರು ರಂಗಾಯಣದ ನಿರ್ದೇಶಕರುಗಳಾದ ಅಡ್ಡಂಡ ಕಾರ್ಯಪ್ಪ ಅವರು, ‘ಮೋಹನ್ ಸೋನ ಅವರು ಕಲೆ, ರಂಗಭೂಮಿಗೆ ನೀಡಿದ ಕೊಡುಗೆಯನ್ನು ನೀಡಿರುವ ಕುರಿತು ನೆನೆದು ಭಾವುಕರಾದರು. ಒಬ್ಬ ಕಲಾವಿದ ಹೇಗೆ ಬದುಕಿದ ಎನ್ನುವುದಕ್ಕಿಂತ ಅವನ ಕನಸನ್ನು ಹೇಗೆ ಕಟ್ಟಿ ಕೊಟ್ಟ ಎಂಬುದು ಬಹಳ ಮುಖ್ಯವೆನಿಸುತ್ತದೆ. ಅರೆಭಾಷೆ ಗೌಡರ ಸಮುದಾಯ ಅದರ ಭಾಷೆಯೊಂದಿಗೆ ಗಟ್ಟಿಯಾಗಿ ಬೆಸೆದುಕೊಂಡಿರುವುದೇ ಒಂದು ಸೊಬಗು ಎಂದರು.

ಒಂದು ಸಮುದಾಯಕ್ಕೆ ಅದರ ಭಾಷೆ ಹಾಗು ಸಂಸ್ಕೃತಿ ಎಷ್ಟು ಪ್ರಮುಖ ಎಂಬುದನ್ನು ಒಂದು ಸುಂದರ ಕಥೆ ಮೂಲಕ ವಿವರಿಸಿದರು. ಕೊಡಗಿನಲ್ಲಿ ಕೊಡವ ಹಾಗು ಅರೆಭಾಷೆ ಸಹೋದರ ಭಾಷೆಗಳಂತೆ. ಅವೆರಡೂ ಜೊತೆ ಜೊತೆಯಾಗಿ ಗಟ್ಟಿಯಾಗಿ ಬೆಳೆಯಬೇಕು. ಆ ಮೂಲಕ ಕೊಡಗಿನ ಸಂಸ್ಕೃತಿ, ಆಚಾರ ವಿಚಾರಗಳ ಚರಿಷ್ಮ ಹೆಚ್ಚಬೇಕು’ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.

ಶಕ್ತಿ ದಿನ ಪತ್ರಿಕೆಯ ಸಲಹಾ ಸಂಪಾದಕರು ಹಾಗು ಜನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ ಅನಂತಶಯನ ಅವರು ಮಾತನಾಡಿ, ‘ಮೋಹನ ಸೋನ ಅವರಿಗೆ ಕಲೆ ರಂಗಭೂಮಿ ಮೇಲಿದ್ದ ಹುಚ್ಚು, ಆಸಕ್ತಿ ಮತ್ತು ಅವರು ಆ ರಂಗಗಳಿಗೆ ನೀಡಿರುವ ಕೊಡುಗೆಯನ್ನು ಸಾಕ್ಷ್ಯ ಚಿತ್ರವನ್ನು ನೋಡಿ ತಿಳಿದ ಮೇಲೆ ಅದು ನಮ್ಮನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ದಂತೆ ಇದೆ. ಅದನ್ನು ಮಾತುಗಳಲ್ಲಿ ವಿವರಿಸಿ ಸೋತರೆ ಆ ಧ್ಯಾನಸ್ಥ ಸ್ಥಿತಿಯನ್ನೇ ಕಲಕಿದಂತೆ ಆಗುತ್ತದೆ.’ ಎಂದು ತಮ್ಮ ಮಾತುಗಳನ್ನು ಆಡಿದರು.

ಕೊನೆಗೆ ಸಭಾಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಹಾಗು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಕಜೆಗದ್ದೆ ಅವರು ಮಾತನಾಡಿ, ‘ಮೋಹನ್ ಸೋನ ಅಂತಹ ಕಲಾವಿದರನ್ನು ಸಾಕ್ಷ್ಯ ಚಿತ್ರ ಮಾಡಲೆಂದು ಭೇಟಿಯಾಗಿದ್ದೆ ಸಂತೋಷ ನೀಡಿತ್ತು. ಆದರೆ ಸಾಕ್ಷ್ಯ ಚಿತ್ರದ ಬಿಡುಗಡೆ ಕಾರ್ಯಕ್ರಮಕ್ಕೆ ಇಂದು ಅವರು ಇರಬೇಕಿತ್ತು. ಅವರಂತಹ ಅಪರೂಪದ ಕಲಾವಿದರು ಮತ್ತಷ್ಟು ಜನ ಜಿಲ್ಲೆಯಲ್ಲಿ ಇದ್ದಾರೆ. ಅವರಿಗೆ ಸನ್ಮಾನ, ಪುರಸ್ಕಾರಗಳನ್ನು ಹಾಗು ಗೌರವಗಳನ್ನು ಅವರುಗಳು ಬದುಕಿರುವಾಗಲೇ ನೀಡುವಂತಾಗಬೇಕು. ಮೋಹನ್ ಸೋನ ಅವರು ಕಲೆ, ರಂಗಭೂಮಿಗೆ ನೀಡಿದ ಅಮೂಲ್ಯ ಸೇವೆಯನ್ನು ಇವತ್ತು ಸಾಕ್ಷ್ಯ ಚಿತ್ರದ ಮೂಲಕ ದಾಖಲಿಸುವ ಕೆಲಸ ನಮ್ಮಿಂದ ಸಾಧ್ಯವಾಗಿದೆ‌ ಎಂದು ಹೇಳಲು ಹರ್ಷವಾಗುತ್ತದೆ’ ಎಂದರು.

ಕಾರ್ಯಕ್ರಮಕ್ಕೆ ಮಡಿಕೇರಿ ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ, ಸಾಕ್ಷ್ಯ ಚಿತ್ರದ ನಿರ್ದೇಶಕರಾದ ಜೀವನ್ ರಾಂ ಸುಳ್ಯ ವೇದಿಕೆಯಲ್ಲಿ ಅತಿಥಿಗಳಾಗಿ ಆಸೀನರಾಗಿದ್ದರು.

ಅಕಾಡಮಿಯ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಳಿಯಪ್ಪ, ಸ್ಮಿತಾ ಅಮೃತರಾಜ್, ಚೊಕ್ಕಾಡಿ ಪ್ರೇಮ ರಾಘವಯ್ಯ, ದಂಬೆಕೋಡಿ ಎಸ್. ಆನಂದ್, ಕುಸುಮಾಧರ ಎ.ಟಿ, ಪುರುಷೋತ್ತಮ ಕೆ.ವಿ ಭಾಗಿಯಾಗಿದ್ದರು.

ಸಾಹಿತ್ಯಾಸಕ್ತರು, ಪತ್ರಕರ್ತರು ಹಾಜರಿದ್ದರು. ಸ್ವಾಗತವನ್ನು ರಿಜಿಸ್ಟ್ರಾರ್ ಅವರು ಕೋರಿದರೆ, ನಿರೂಪಣೆಯನ್ನು ಅಕಾಡಮಿ ಸದಸ್ಯ ಹಾಗು ಯುವ ನೇತಾರರಾದ ಧನಂಜಯ್ ಅಗೊಳಿಕಜೆ ಮಾಡಿದರು. ಅಕಾಡಮಿ ಸದಸ್ಯರಾದ ಡಾ.ದಯಾನಂದ ಕೆ.ಸಿ ಅವರು ಎಲ್ಲರನ್ನೂ ವಂದಿಸಿದರು.

error: Content is protected !!