ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲಾಗುವುದು: ಕೆ.ಚಂದ್ರಶೇಖರ್ ರಾವ್

ಹೈದರಾಬಾದ್‌: ಎನ್‌ಡಿಎ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಸಹಾಯವನ್ನು ಹೆಚ್ಚಿಸುವಲ್ಲಿ ವಿಫಲಗೊಂಡರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಓಡಿಸಲಾಗುವುದು ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ್‌ ರಾವ್‌ ಎಚ್ಚರಿಕೆ ನೀಡಿದ್ದಾರೆ.

ಜನಗಾಮ್‌ ಜಿಲ್ಲೆಯ ಯಶವಂತಪುರದಲ್ಲಿ ಶುಕ್ರವಾರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆಸಿಆರ್‌, ಅಗತ್ಯ ಬಿದ್ದಲ್ಲಿ ದೆಹಲಿ ಕೋಟೆಯನ್ನು ಭೇದಿಸಲು ರಾಷ್ಟ್ರ ರಾಜಕಾರಣದಲ್ಲಿ ಪಾತ್ರ ವಹಿಸುವುದಾಗಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಕೆಸಿಆರ್‌, ‘ನಮಗೆ ರಾಷ್ಟ್ರೀಯ ಯೋಜನೆಯನ್ನು ಕೊಟ್ಟಿಲ್ಲ, ವೈದ್ಯಕೀಯ ಕಾಲೇಜನ್ನು ಕೊಟ್ಟಿಲ್ಲ. ನೀವು ನಮಗೆ ಸಹಾಯ ಮಾಡದಿದ್ದರೆ ಏನೂ ತೊಂದರೆ ಇಲ್ಲ. ಅಧಿಕಾರದಿಂದಲೇ ನಿಮ್ಮನ್ನು ಓಡಿಸುತ್ತೇವೆ ಮತ್ತು ನಮಗೆ ಸಹಾಯ ಮಾಡುವ ಸರ್ಕಾರವನ್ನು ತರುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎನ್‌ಡಿಎ ಸರ್ಕಾರ ಪ್ರಸ್ತಾಪಿಸಿರುವ ನೂತನ ವಿದ್ಯುತ್‌ ಸುಧಾರಣಾ ಕಾಯ್ದೆಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರುವುದಿಲ್ಲ ಎಂದು ಸ್ಪಷ್ಟಪಡಿಸಿದ ಕೆಸಿಆರ್‌, ‘ಅಗತ್ಯ ಬಿದ್ದರೆ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲು ಸಿದ್ಧ. ನೀವು (ಜನರು) ಆಶೀರ್ವದಿಸಿದರೆ ದೆಹಲಿ ಕೋಟೆಯನ್ನು ಕೋಟೆಯನ್ನು ಭೇದಿಸಲು ಸಿದ್ಧನಿದ್ದೇನೆ. ನರೇಂದ್ರ ಮೋದಿ ಅವರೇ ಎಚ್ಚರಿಕೆ ಇರಲಿ. ನಿಮ್ಮ ಬೆದರಿಕೆಗಳಿಗೆ ಯಾರೂ ಹೆದರುವುದಿಲ್ಲ’ ಎಂದಿದ್ದಾರೆ.

ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇನೆ ಎಂದು ಘೋಷಿಸಿದ ಪ್ರಧಾನಿ ಮೋದಿ ಅವರು ಪೆಟ್ರೋಲ್‌ ಮತ್ತು ರಸಗೊಬ್ಬರ ದರವನ್ನು ಏರಿಸುವ ಮೂಲಕ ರೈತರ ಖರ್ಚುವೆಚ್ಚಗಳನ್ನು ದುಪ್ಪಟ್ಟು ಮಾಡಿದ್ದಾರೆ ಎಂದು ಕೆಸಿಆರ್‌ ಕಿಡಿಕಾರಿದ್ದಾರೆ.

error: Content is protected !!