ಮೊಬೈಲ್ ನೆಟ್ವರ್ಕ್ ಸಮಸ್ಯೆ ಸೂಕ್ತ ಕ್ರಮಕ್ಕೆ ಹಮ್ಮಿಯಾಲ ಗ್ರಾಮಸ್ಥರ ಆಗ್ರಹ

ಮಡಿಕೇರಿ ತಾಲೂಕಿನ ಹಮ್ಮಿಯಾಲ ಗ್ರಾಮದಲ್ಲಿ ಹಲವಾರು ದಿನಗಳಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಇದ್ದು ಒಳಬರುವ ಹೊರಹೊಗುವ ಯಾವುದೇ ಕರೆ ಸಿಗುತ್ತಿಲ್ಲ .ಲಾಕ್ ಡೌನ್ ಸಮಯದಲ್ಲಿ ಮನೆಯಿಂದ ಹೊರ ಬರಲಾರದೆ ಯಾರಾದರೂ ಕೊರೋನಾ ಬಾಧಿತರಾಗಿ ಹೋಮ್ ಕ್ವಾರಂಟೈನ್ ನಲ್ಲಿರಬೇಕಾದಲ್ಲಿ ಅಗತ್ಯ ವಸ್ತುಗಳಿಗಾಗಿ ಸಂಬಂಧಿಕರಿಗೆ ಇಲ್ಲವೆ ಮಾಹಿತಿಗಾಗಿ ಜಿಲ್ಲಾಸ್ಪತ್ರೆಗೆ ಕರೆ ಮಾಡಬೇಕಾದರೆ ತುಂಬಾ ತೊಂದರೆಯಾಗುತ್ತಿದ್ದು.ಗ್ರಾಮಸ್ಥರು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮಕ್ಕಳಿಗೆ, ಸಂಬಂಧಿಕರಿಗೆ ಕರೆ ಮಾಡಲು, ಎರಡು ಮೂರು ಕಿ.ಮಿಟರ್ ದೂರದ ಬೆಟ್ಟ ಗುಡ್ಡಕ್ಕೆ ತೆರಳಿ ಕರೆ ಮಾಡಲು ಹರಸಾಹಸ ಪಡುತ್ತಿದ್ದಾರೆ.
ಈ ಪರಿಸ್ಥಿತಿಯಲ್ಲಿ ವಯಸ್ಕರು, ವೃದ್ಧರ ಸ್ಥಿತಿಯಂತೂ ಹೇಳುವುದೇ ಬೇಡ. ನಿನ್ನೆ ಅಂಗವೈಕಲ ಮಹಿಳೆಯೊಬ್ಬರು ಮಕ್ಕಳಿಗೆ ಕರೆ ಮಾಡಲು ಮೊಣ ಕಾಲಿನಲ್ಲಿ ಹೊಲಗದ್ದೆ ದಾಟಿ ಬರುತ್ತಿರುವ ದೃಶ್ಯ ಕಂಡು ಸ್ಥಳೀಯ ನಿವಾಸಿಗಳ ಮನಕುಲುಕುತ್ತಿತ್ತು.
ಸದ್ಯದಲ್ಲೇ ಮಳೆಗಾಲ ಆರಂಭವಾಗಲಿದ್ದು ಮೊದಲೇ ಬೆಟ್ಟಗುಡ್ಡಗಳಿಂದ ಕೂಡಿ ಈಗಾಗಲೇ ಪ್ರಕೃತಿ ವಿಕೋಪಕ್ಕೆ ಈಡಾದ ಪ್ರದೇಶ. ಮುಂದೆ ಅನಾಹುತ ಏನಾದರೂ ಆದರೆ ಸಂಪಕ್ರ ಮಾಡುವುದಾದರೂ ಹೇಗೆ..? ಅಲ್ಲದೆ ವಿಪರೀತ ವಿದ್ಯುತ್ ಸಮಸ್ಯೆ ಬೇರೆ ಆದುದರಿಂದ ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಯನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳ ಮೇಲೆ ಒತ್ತಡ ಹೇರುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ