ಮೂರ್ನಾಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 200 ಗಿಡಗಳ ನೆಡುತೋಪು ನಿರ್ಮಾಣ : ಸಸಿನೆಟ್ಟು ಬೆಳೆಸಲು ಮನವಿ

ಕೊಡಗು ಸಾಮಾಜಿಕ ಅರಣ್ಯ ವಿಭಾಗ ಹಾಗೂ ಮಡಿಕೇರಿ ಸಾಮಾಜಿಕ ಅರಣ್ಯ ವಲಯದ ವತಿಯಿಂದ ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಕೃತಿ ಇಕೋ ಕ್ಲಬ್ ನ ಸಹಯೋಗದೊಂದಿಗೆ ಹಸಿರು ಕರ್ನಾಟಕ ಆಂದೋಲನ‌ ಹಾಗೂ ‘ಗ್ರೋ ಗ್ರೀನ್’ ಹಸಿರು ಅಭಿಯಾನ ಅಡಿಯಲ್ಲಿ ವಿವಿಧ ಜಾತಿಯ 200 ಗಿಡಗಳನ್ನು ನೆಡುವ ಮೂಲಕ ನೆಡುತೋಪು ‘ : ಹಸಿರು ಪರಿಸರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ‌ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಆಶ್ರಯದಲ್ಲಿ “ನಮ್ಮ ನಡೆ ಹಸಿರು ನಡೆ ಅಭಿಯಾನ” – ‘ಗ್ರೋ ಗ್ರೀನ್’ ಕ್ಯಾಂಪೈನ್ ಅಭಿಯಾನದಡಿ ಶಾಲಾ ಜಾಗದಲ್ಲಿ ಏರ್ಪಡಿಸಿದ್ದ ” ನೆಡುತೋಪು ವನಸಿರಿ ಹಸಿರು ಅಭಿಯಾನ”ದಲ್ಲಿ ( ಸೆ.16 ರಂದು) ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಜತೆಗೂಡಿ ಗಿಡಗಳನ್ನು ನೆಡುವ ಮೂಲಕ ಹಸಿರು ಅಭಿಯಾನಕ್ಕೆ ಸಾಕ್ಷಿಯಾದರು.
ನೆಡುತೋಪು ಹಸಿರು ಪರಿಸರದಲ್ಲಿ ನಡೆದ ಪರಿಸರ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ. ಎಸ್.ಚಂಗಪ್ಪ ,
ಪರಿಸರ ಸಮತೋಲನ ಕಾಪಾಡಲು ಸುತ್ತಮುತ್ತಲಿನ ಪರಿಸರದಲ್ಲಿ ಹೆಚ್ಚೆಚ್ಚು ಗಿಡ- ಮರಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕಿದೆ ಎಂದರು.
ಶಾಲೆಯ ನೆಡುತೋಪಿನಲ್ಲಿ 200 ರಷ್ಟು ವಿವಿಧ ಜಾತಿಯ ಅರಣ್ಯ ಸಸಿಗಳನ್ನು ನೆಡಲಾಗಿದ್ದು, ಇಲ್ಲಿ ಗಿಡನೆಟ್ಟು ಬೆಳೆಸುವ ನೆಡುತೋಪು ಸಂರಕ್ಷಣೆಗೆ ಎಲ್ಲರ ಸಹಕಾರ ಅಗತ್ಯ ಬೇಕಿದೆ ಎಂದರು.
ಅರಣ್ಯ ಇಲಾಖೆಯ ವತಿಯಿಂದ ನೆಡುತೋಪು ಮತ್ತು ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಅರಣ್ಯ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
“ಅರಣ್ಯ ಮತ್ತು ನೆಡುತೋಪು ಸಂರಕ್ಷಣೆ” ಕುರಿತು ಮಾತನಾಡಿದ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ನ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ.ಪ್ರೇಮಕುಮಾರ್ , ಶಾಲಾವರಣದಲ್ಲಿ ಕೈಗೊಂಡಿರುವ ನೆಡುತೋಪಿನ ವನಸಿರಿ ಅಭಿಯಾನವು ಶಾಲೆಯಲ್ಲಿ ಸ್ವಚ್ಛ ಹಸಿರು ಪರಿಸರ ನಿರ್ಮಿಸಲು ಸಹಕಾರಿಯಾಗಿದೆ ಎಂದರು.
ವಿದ್ಯಾರ್ಥಿಗೊಂದು ಗಿಡ ಮನೆಗೊಂದು ಮರ ಎಂಬ ಘೋಷಣೆಯಡಿ ನಾವು ಸುತ್ತಲಿನ ಪರಿಸರದಲ್ಲಿ ನಾವು ಹೆಚ್ಚೆಚ್ವು ಗಿಡಗಳನ್ನು ನೆಟ್ಟು ಬೆಳೆಸಿ ಸಂರಕ್ಷಣೆ ಮಾಡಲು ಸಂಕಲ್ಪ ತೊಡಬೇಕಿದೆ
ಎಂದರು.

ಕಾಡು ಬೆಳೆಸಿ ನಾಡು ಉಳಿಸಿ ಹಾಗೂ ಸ್ವಚ್ಛ ಶಾಲಾ ಪರಿಸರ ಕಲ್ಪನೆ ಕುರಿತು‌ ಪ್ರೇಮಕುಮಾರ್ ವಿವರಿಸಿದರು.

ಆರ್.ಎಫ್.ಓ. ಮಯೂರ್ ಕಾರವೇಕರ್ ಮಾತನಾಡಿ, ಶಾಲೆಯ ಸುತ್ತ ಹಸಿರು ಪರಿಸರ ನಿರಗಮಿಸಲು ಹೊಂಗೆ, ಅರಳಿ, ಬಸವನಪಾದ, ಹಲಸು, ನೇರಳೆ, ಹೊಂಗೆ, ಹೊನ್ನೆ, ಆಲ, ಅರಳಿ, ಹೊಳೆ ಮತ್ತಿ ಇತ್ಯಾದಿ ಸಸಿಗಳನ್ನು ನೆಡಲಾಗಿದೆ ಎಂದರು.

ತಾ.ಪಂ.ಮಾಜಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ , ಶಾಲಾವರಣದಲ್ಲಿ ನಿರ್ಮಿಸುತ್ತಿರುವ ನೆಡುತೋಪಿನಿಂದ ಶಾಲೆಯಲ್ಲಿ ಹಸಿರು ಕಂಗೊಳಿಸಲಿದೆ ಎಂದರು.
ಮುಖ್ಯ ಶಿಕ್ಷಕಿ ಬಿ.ಕೆ.ಲಲಿತ ಮಾತನಾಡಿ, ನೆಡುತೋಪಿನ ಸಂರಕ್ಷಣೆಗೆ ಎಲ್ಲರ ಸಹಕಾರ ಬೇಕಿದೆ ಎಂದರು. ಗ್ರಾ. ಪಂ. ಅಧ್ಯಕ್ಷೆ ಸುಜಾತಾ ಗಿಡ ನೆಡುವ ಮೂಲಕ ನೆಡುತೋಪು ನಿರ್ಮಾಣಕ್ಕೆ ಚಾಲನೆ ನೀಡಿದರು.

error: Content is protected !!