ಮೂರು ಸಿನಿಮಾಗಳ ಹೆಸರನ್ನು ಬಿಡುಗಡೆ ಮಾಡಿದ ಕ್ರೇಜ಼ಿ ಸ್ಟಾರ್!
ಸ್ಯಾಂಡಲ್ ವುಡ್‌ನ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಜನ್ಮದಿನ. ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಕಮರ್ಷಿಯಲ್ ಪ್ರಯೋಗದ ಮೂಲಕ ಹೊಸ ದಿಕ್ಕು ನೀಡಿದ ಕನಸುಗಾರನ ಚಿತ್ರಗಳಿಗೆ ಅವರದೇ ದೊಡ್ಡ ಅಭಿಮಾನಿ ವರ್ಗವಿದೆ. ಪ್ರತಿ ವರ್ಷ ರವಿಮಾಮನ ಹುಟ್ಟುಹಬ್ಬದಂದು ಶುಭ ಕೋರಲು ಅಭಿಮಾನಿಗಳು ಅವರ ಮನೆ ಎದುರು ಜಮಾಯಿಸುತ್ತಿದ್ದರು. ಆದರೆ ಕಳೆದ ವರ್ಷದಿಂದ ಕೊರೊನಾ ಲಾಕ್ ಡೌನ್ ಕಾರಣ ಅತ್ಯಂತ ಸರಳವಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.
ಹಾಗಂತ ಅಭಿಮಾನಿಗಳಿಗೆ ನಿರಾಸೆ ಮೂಡಿಸಿಲ್ಲ. ಹುಟ್ಟುಹಬ್ಬದ ಪ್ರಯುಕ್ತ 3 ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ವಿಭಿನ್ನ ಶೈಲಿಯ ಮೂಲಕವೇ ಖ್ಯಾತಿಗಳಿಸಿರುವ ರವಿಚಂದ್ರನ್ 3 ಸಿನಿಮಾಗಳನ್ನು ವಿಭಿನ್ನವಾಗಿಯೇ ಅನೌನ್ಸ್ ಮಾಡಿದ್ದಾರೆ. ಕಲರ್ ಫುಲ್ ವಿಡಿಯೋ ಮೂಲಕ ಮೂರು ಸಿನಿಮಾಗಳ ಟೈಟಲ್ ಬಹಿರಂಗ ಪಡಿಸಿದ್ದಾರೆ.
ತಮ್ಮದೆ ಯೂಟ್ಯೂಬ್ ಚಾನಲ್‌ನಲ್ಲಿ ರವಿಚಂದ್ರನ್ ವಿಡಿಯೋ ಶೇರ್ ಮಾಡಿದ್ದಾರೆ. ರವಿಚಂದ್ರನ್ ಸಿನಿಮಾ ಅಂದ್ಮೇಲೆ ಅಭಿಮಾನಿಗಳಲ್ಲಿ ವಿಶೇಷ ಕುತೂಹಲ ಇದ್ದೇ ಇರುತ್ತದೆ. ಸದ್ಯ ಘೋಷಣೆ ಮಾಡಿರುವ ಸಿನಿಮಾಗಳ ಮೇಲೂ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.
ಅಂದಹಾಗೆ ಹೊಸ ಚಿತ್ರಗಳಿಗೆ ಗಾಡ್, 60 ಮತ್ತು ಬ್ಯಾಡ್ ಬಾಯ್ ಚಿತ್ರಗಳಿಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಬಗ್ಗೆ ವಿಡಿಯೋದಲ್ಲಿ ಸುಳಿವು ನೀಡಿದ್ದಾರೆ. ಸದ್ಯ ರವಿಚಂದ್ರನ್ ರವಿ ಬೋಪಣ್ಣ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಕನ್ನಡಿಗ ಸಿನಿಮಾ ಕೂಡ ಮಾಡಿ ಮುಗಿಸಿದ್ದಾರೆ.
ಕನ್ನಡಿಗ ನಿರ್ದೇಶಕ ಬಿ.ಎಂ ಗಿರಿರಾಜ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಸದ್ಯ ಸಿನಿಮಾ ಎಲ್ಲಾ ಕೆಲಸವನ್ನು ಮುಗಿಸಿ ರಿಲೀಸ್ ಗೆ ರೆಡಿಯಾಗಿದೆ. ಇಂದು ಹುಟ್ಟುಹಬ್ಬದ ಪ್ರಯುಕ್ತ ಕನ್ನಡಿಗ ಟೀಸರ್ ಬಿಡುಗಡೆಯಾಗುತ್ತಿದೆ. ಇನ್ನು ಬಹುನಿರೀಕ್ಷೆಯ ದೃಶ್ಯಂ-2ನಲ್ಲಿ ರವಿಚಂದ್ರನ್ ನಟಿಸಲಿದ್ದಾರೆ. ಈಗಾಗಲೇ ದೃಶ್ಯಂ-2 ಮಲಯಾಳಂನಲ್ಲಿ ರಿಲೀಸ್ ಆಗಿ ದೊಡ್ಡ ಮಟ್ಟದ ಸಕ್ಸಸ್ ಕಂಡಿದೆ.