fbpx

ಮುಸ್ಲಿಂ ಕುಟುಂಬವನ್ನು ರಕ್ಷಿಸಿದ ಆದಿಶಕ್ತಿ!

ಬರಹ: ಹೇಮಂತ್ ಸಂಪಾಜೆ

ಸರಿ ಸುಮಾರು 2 ವರ್ಷಗಳ ಹಿಂದಿನ ಕಥೆಯಿದು, ಈ ಸ್ಫೂರ್ತಿ ಕಥೆಯನ್ನು ತುಂಬಾ ಸಲ ಬರಿಬೇಕು ಅಂತ ಆಗಾಗ್ಗೆ ಯೋಚಿಸುತ್ತಿದ್ದೆ, ಆದರೆ ಸಾಧ್ಯವಾಗಿರಲಿಲ್ಲ, ಇದೀಗ ಕಾಲ ಕೂಡಿಬಂದಿದೆ.


2019ರಲ್ಲಿ ನಾನು ಹೊಸ ದ್ವಿಚಕ್ರ ವಾಹನ ತೆಗೆದುಕೊಂಡ ಸಮಯ, ಹೊಸ ಬೈಕಲ್ಲಿ ಬೆಳ್ಳಂಬೆಳಿಗ್ಗೆ ಒಂದು ರೌಂಡ್ ಹೊರಡಲು ಸಿದ್ಧನಾದೆ, ಜತೆಗೆ ನನ್ನ ಭಾವ ಸತೀಶ್ ಕುಡಲ ಕೂಡ ಕೂಡಿಕೊಂಡರು, ಸಂಪಾಜೆಯ ನನ್ನ ಮನೆಯಿಂದ ಮಡಿಕೇರಿ ದಾರಿಯತ್ತ ನಾವಿಬ್ಬರು ಚಳಿಯನ್ನೂ ಲೆಕ್ಕಿಸದೆ ಹೊರಟೆವು.


ಬೈಕ್ ಘಾಟಿ ಪ್ರವೇಶಿಸುತ್ತಿದಂತೆ ನಮಗೆ ಅಚ್ಚರಿಗಳ ಸರಮಾಲೆಯೇ ಎದುರಾದವು. ಹಸಿರ ಬೆಟ್ಟ ಗುಡ್ಡಗಳು ಜರಿದು ನೆಲಸಮವಾಗಿದ್ದವು, ಮನೆ, ಕೃಷಿ, ಬದುಕು ಎಲ್ಲವೂ ಸರ್ವ ನಾಶವಾಗಿತ್ತು. ನಮ್ಮೆದುರಿಗಿದ್ದ ಕೊಡಗು ದುರಂತದ ದೃಶ್ಯವನ್ನು ತಕ್ಷಣಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.


ಮಡಿಕೇರಿ ಸಮೀಪದ ಮದೆನಾಡು ಎಂಬಲ್ಲಿ ಬೈಕ್ ಸೈಡಿಗಿರಿಸಿ ಸುತ್ತಲಿನ ದೃಶ್ಯಗಳತ್ತ ಒಮ್ಮೆ ಕಣ್ಣು ಹಾಯಿಸಿದವು. ಹಿಂದೆ ಹತ್ತಾರು ಮನೆಗಳಿದ್ದ ಜಾಗದಲ್ಲಿ‌ ಈಗ ಮನೆಗಳೇ ಇಲ್ಲ. ಗದ್ದೆ, ಕಾಫಿ, ಶುಂಠಿ ತೋಟಗಳಿದ್ದ ಜಾಗದಲ್ಲಿ ಈಗ ದೊಡ್ಡ ಮಣ್ಣಿನ ರಾಶಿ ಬಿದ್ದಿದೆ. ಇದರ ನಡುವೆ ಹೊಸದಾಗಿ ಸಣ್ಣ ನದಿ ಹರಿಯುತ್ತಿದೆ, ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಎದುರಿಗಿದ್ದ ಬೆಟ್ಟವೊಂದು ಜರಿದು ಸುಮಾರು 50 ಎಕರೆಗೂ ಹೆಚ್ಚು ಜಾಗ ಸಮತಟ್ಟಾಗಿತ್ತು, ಮನುಷ್ಯನ ಜೀವನ ಪ್ರಕೃತಿ ಎದುರು ಏನು ಇಲ್ಲ ಎನ್ನುವ ಕಥೆಯನ್ನು ಸಾರಿ ಹೇಳುತ್ತಿತ್ತು.

ಮದೆನಾಡು ಸುತ್ತಲು ಸ್ಮಶಾನ ಮೌನ ಆವರಿಸಿತ್ತು. ಇದನ್ನೆಲ್ಲ ನೋಡಿ ನನಗರಿಯದೆ ಕಣ್ಣುಗಳು ತೇವಗೊಂಡವು. ಈ ವೇಳೆ ದೂರದಲ್ಲಿ ರಸ್ತೆಯ ಬದಿ ಒಬ್ಬರು ಸ್ಕಲ್ ಕ್ಯಾಪ್ ಧರಿಸಿದ್ದ ಮುಸ್ಲಿಂ ಅಜ್ಜ ಒಬ್ಬರೇ ನಿಂತಿದ್ದರು. ಅವರತ್ತ ನಾವಿಬ್ಬರು ನಡೆದವು.
‘ಸರ್ ..ಇಲ್ಲಿ ಇಷ್ಟೊಂದು ಹಾನಿಯಾಗಿದೆ, ಇಲ್ಲಿದ್ದ ಕುಟುಂಬಗಳೆಲ್ಲ ಈಗ ಎಲ್ಲಿ? ಎಂದು ಕೇಳಿದೆ, ಹಿಂದೆ ತಿರುಗಿ ನಮ್ಮತ್ತ ನೋಡಿದ ಅಜ್ಜ ‘ಸ್ವಾಮಿ..ನಮ್ಮ ಕಥೆಯನ್ನು ಹೇಗಂತ ಹೇಳಲಿ, ಕಣ್ಣೆದುರೇ ಮನೆ, ಜಾಗ ಎಲ್ಲವೂ ನೆಲ ಸಮವಾಗುತ್ತಿದ್ದರೂ ನಾವು ಅಸಹಾಯಕರಾದೆವು, ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಪ್ರಾಣ ಉಳಿದರೆ ಸಾಕು ಅಂತ ಮನೆಯಿಂದ ಓಡಿ ಹೊರಬಂದೆವು. ಅಲ್ಲಿ ನೋಡಿ ಆ ದೊಡ್ಡ ಬೆಟ್ಟ ಜರಿದು, ಸುತ್ತಲಿನ ಮನೆ, ಜಾಗ ತೋಟವನ್ನೆಲ್ಲ ಕೊಚ್ಚಿಕೊಂಡು ಬಂದಿತು, ಇಲ್ಲಿ ನೋಡಿ ಇಷ್ಟೆಲ್ಲ ಮನೆಗಳಲ್ಲಿ ಉಳಿದಿರುವುದು ನನ್ನ ಮನೆ, ಜಾಗ ಮಾತ್ರ’ ಎಂದರು.
ಅಷ್ಟು ದೊಡ್ಡ ಬೆಟ್ಟ ಜರಿದು ಬಂದರೂ ಇವರ ಮನೆ, ಜಾಗದ‌ ಸಮೀಪ ಬಂದಾಗ ಜರಿದು ಬಂದ ಮಣ್ಣು ತಕ್ಷಣ ಎಡಕ್ಕೆ ತಿರುಗಿ ಕೊಂಡು ಪಥ ಬದಲಿಸಿದ್ದು ಅಚ್ಚರಿಗೆ ಕಾರಣವಾಯಿತು. ಅಷ್ಟು ದೊಡ್ಡ ಬೆಟ್ಟ ಕುಸಿದು ನೀರಿನ ಜತೆ ಬಿರು ಬೀಸಾಗಿ ಹರಿದಾಗ ಇವರ ಮನೆ, ಜಾಗ ಮಾತ್ರ ಉಳಿಯಲು ಹೇಗೆ ಸಾಧ್ಯ? ಎನ್ನುವ ಸಹಜ ಕುತೂಹಲ ನನಗೆ ಎದುರಾಯಿತು.


‘ತಾತ ನಿಮ್ಮ ಮನೆ, ಜಾಗಕ್ಕೆ ಮಾತ್ರ ಏನು ಆಗಲಿಲ್ಲ ಅದೃಷ್ಟ’ ಎಂದೆ. ‘ಎಲ್ಲ ಆ ತಾಯಿ ಆದಿಶಕ್ತಿಯ ದಯೆ’ ಎಂದರು, ಅವರ ಮಾತುಗಳಿಗೆ ಏನು ಉತ್ತರಿಸಲಾಗದೆ ಅಚ್ಚರಿ ಚಕಿತನಾಗಿ ಅವರನ್ನೇ ಸುಮ್ಮನೆ ನೋಡುತ್ತಾ ನಿಂತೆ. ಮಾತು ಮುಂದುವರಿಸಿದ ಅವರು, ‘ನನ್ನ ಹೆಸರು ಇಬ್ರಾಹಿಂ, ಜೀವನಕ್ಕಾಗಿ ಮನೆಯ ಎದುರು ಸಣ್ಣ ಹೋಟೆಲ್ ನಡೆಸುತ್ತಿದ್ದೆ.

ಮೊನ್ನೆಯ ದುರಂತದಿಂದ ನನ್ನನ್ನು ಕಾಪಾಡಿದ್ದು ನನ್ನ ಜಾಗದಲ್ಲಿ ನೆಲೆಯಾಗಿರುವ ಆದಿಶಕ್ತಿ, ದುರಂತದ ದಿನ ರಾತ್ರಿ ಜೋರಾದ ಮಳೆ ಸುರಿಯುತ್ತಿತ್ತು, ಈ ವೇಳೆ ದೊಡ್ಡದಾದ ಶಬ್ಧವೊಂದು ಕೇಳಿತು, ಹೊರಗೆ ಬಂದು ನೋಡಿದಾಗ ಮನೆಗಳೆಲ್ಲ ಮಣ್ಣಿನಡಿಗೆ ಆಗುತ್ತಿದ್ದವು, ಬೆಟ್ಟ ಜರಿದು ನಮ್ಮತ್ತ ಬರುತ್ತಿತ್ತು. ಆ ಮಳೆಗೆ ನಾವೆಲ್ಲ ಹೇಗೋ ಓಡಿ ಹೋಗಿ ಪ್ರಾಣ ರಕ್ಷಿಸಿಕೊಂಡೆವು, ಹಾಗೆ ರಭಸದಿಂದ ಕೊಚ್ಚಿ ಬಂದ ಬೆಟ್ಟದ ಮಣ್ಣು ನನ್ನ ಹೋಟೆಲ್ ಹಾಗೂ ನನ್ನ ಮನೆ ನಡುವೆ ಇದ್ದ ಸಣ್ಣ ಕಾಲು ದಾರಿ ನಡುವೆ ಕೊಚ್ಚಿಕೊಂಡು ಹೋಯಿತು, ಮನೆ ಜಾಗಕ್ಕೆ ಯಾವುದೇ ತೊಂದರೆ ಆಗಲಿಲ್ಲ, ತಲಾತಲಾಂತರದಿಂದ ಈ ನನ್ನ ಜಾಗದಲ್ಲಿ ಆದಿಶಕ್ತಿ ನೆಲೆಯಾಗಿದ್ದಾಳೆ, ನಾನು ಮುಸ್ಲಿಂ ಧರ್ಮೀಯ, ದೇವಿ ಜಾಗದಲ್ಲಿ ನಾನು ಈಗ ಆಸರೆಗಾಗಿ ಇದ್ದೇನೆ, ಆಕೆ ಇರುವುದು ತಿಳಿದ ದಿನದಿಂದ ಅವಳನ್ನು ಆರಾಧಿಸುತ್ತಾ ಬಂದಿದ್ದೇನೆ’ ಎಂದರು.


‘ತಪ್ಪು ತಿಳಿದುಕೊಳ್ಳಬೇಡಿ, ನೀವು ಮುಸ್ಲಿಂ ಹೀಗಿದ್ದರೂ ಹಿಂದೂ ದೇವರನ್ನು ಆರಾಧಿಸುತ್ತಿದ್ದೀರಿ? ಎಂದು ನಾನು ಕೇಳಿದೆ, ‘ನೋಡಿ ನನಗೆ ಜಾತಿ ಧರ್ಮ ಇಲ್ಲ, ಎಲ್ಲ ದೇವರನ್ನು ನಂಬುತ್ತೇನೆ, ನನ್ನ ಧರ್ಮದ ಜತೆಗೆ ಇತರೆ ಧರ್ಮಿಯರ ಭಾವನೆಗಳನ್ನು ಗೌರವಿಸುತ್ತೇನೆ, ನನ್ನ ಮನೆಯಲ್ಲಿ ಎಲ್ಲ ದೇವರ ಫೋಟೊಗಳಿವೆ, ಕಷ್ಟ ಅಂತ ಬರುವವರಿಗೆ ಆದಿಶಕ್ತಿಯ ಪ್ರಾರ್ಥನೆ ಮಾಡಿ ಧೈರ್ಯ ತುಂಬುತ್ತೇನೆ, ಇಷ್ಟೆಲ್ಲ ಮಾಡಿದ ಪುಣ್ಯದ ಫಲದಿಂದ ಮನೆ, ಜಾಗ ಇಂದು ಪವಾಡದ ರೀತಿಯಲ್ಲಿ ಉಳಿದುಕೊಂಡಿದೆ. ನಾನು ಹೇಳುತ್ತೇನೆ. ಇದು ನನ್ನ ಜಾಗವಲ್ಲ, ಆಕೆಯ ಜಾಗ, ಅದನ್ನು ಆದಿಶಕ್ತಿಯೇ ರಕ್ಷಿಸಿಕೊಂಡಿದ್ದಾಳೆ, ಸದ್ಯ ಸರ್ಕಾರದವರು ನಾವು ಅಲ್ಲಿ ವಾಸಿಸುವುದು ಅಪಾಯ ಎನ್ನುವ ದೃಷ್ಟಿಯಿಂದ ನಮಗೆ ಪ್ರತ್ಯೇಕ ಜಾಗದಲ್ಲಿ ವಾಸಿಸಲು ಮನೆ ಕಟ್ಟಿಕೊಟ್ಟಿದ್ದಾರೆ, ಆದರೆ ಹಳೆ ಜಾಗದ ಹತ್ತಿರ ಹೋಗಿ ನಿತ್ಯ ದೇವಿಯ ಪೂಜೆ ಮಾಡುತ್ತೇನೆ’ ಎಂದರು.


ಅಜ್ಜ ತೋರಿಸಿದ ಆದಿಶಕ್ತಿ ನಲೆಯಾಗಿರುವ ಜಾಗವನ್ನು ನಾವಿಬ್ಬರು ನೋಡುತ್ತಾ ನಿಂತೆವು. ಅಜ್ಜನೊಂದಿಗಿನ 30 ನಿಮಿಷದ ಮಾತುಕತೆ ಕೇವಲ ಕನಸು ಎಂಬಂತೆ ಮುಗಿದು ಹೋಯಿತು, ಅವರಿಗೆ ಕೈಮುಗಿದು ನಮ್ಮ ಮನೆಯತ್ತ ಮರಳಿ ಪ್ರಯಾಣ ಮಾಡಿದೆವು. ದಾರಿಯುದ್ದಕ್ಕೂ ಅಜ್ಜನ ಮಾತುಗಳು ನನ್ನನ್ನು ತೀವ್ರವಾಗಿ ಕಾಡಿದವು, ‘ನಿನ್ನ ಧರ್ಮವನ್ನು ಪ್ರೀತಿಸು ಇತರರ ಧರ್ಮವನ್ನೂ ಗೌರವಿಸು’ ಎಂಬ ಅಜ್ಜನ ಮಾತುಗಳು ಸಕಾಲಿಕ ಅನಿಸಿತು, ಎಲ್ಲರಲ್ಲೂ ಇಂತಹ ಗುಣಗಳಿದ್ದರೆ ಬಹುಶಃ ಸಮಾಜದಲ್ಲಿ ಕೋಮು ಸಂಘರ್ಷ ಎನ್ನುವುದೇ ಇರುವುದಿಲ್ಲ, ಅಜ್ಜ ಯಾವುದೇ ವಿವಿಯಿಂದ ಪದವಿ ಪಡೆದಿಲ್ಲ, ಹೀಗಿದ್ದರೂ ಆ ಬಡಪಾಯಿ ಸಮಾಜದಲ್ಲಿ ತನ್ನ ಧರ್ಮದ ದೇವರನ್ನು ನಂಬುತ್ತಾ, ಜತೆಗೆ ಹಿಂದೂ ದೇವತೆ ಆದಿಶಕ್ತಿಯನ್ನು ಪೂಜಿಸಿ ಸಮಾನತೆಯ ಸಂದೇಶ ತರಲು ಪ್ರಯತ್ನಿಸುತ್ತಿರುವುದು ನಮಗೆಲ್ಲರಿಗೂ ಆದರ್ಶವಾಗಲಿ.

ಬರಹ: ಹೇಮಂತ್ ಸಂಪಾಜೆ

error: Content is protected !!