ಮುಂದೆ ನಿಂತು ಬಡ ಜೋಡಿಗಳ ವಿವಾಹ ಮಾಡಿಸಿದ ಟೀಂ ಮಾದ್ಯಮ ಸ್ಪಂದನ

‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು’ ಅಂತ ಒಂದು ಗಾದೆನೇ ಇದೆ. ಏಕೆಂದರೆ ಮದುವೆ ಮತ್ತು ಮನೆ ಮಾಡೋದು ದೊಡ್ಡ ಸಾಹಸವೇ ಸರಿ. ಅವೆರಡೂ ಜೀವನದಲ್ಲಿ ಮಾಡೋಕೆ ಪಡಬೇಕಾದ ಶ್ರಮ ಅಷ್ಟಿಷ್ಟಲ್ಲ. ಬಡ ವರ್ಗದ ಜನರಿಗೆ ಒಂದು ಮನೆ ಕಟ್ಟೋದು ಅಥವಾ ಮದುವೆ ಎಂದರೆ ಅವರಿಗದು ಕಬ್ಬಿಣದ ಕಡಲೆಯೇ. ಅಂತಹ ಒಂದು ಬಡ ಜೋಡಿಯ ಕಲ್ಯಾಣಕ್ಕೆ ಸಲುವಾಗಿ ಮಾಧ್ಯಮ ಸ್ಪಂದನದ ಸದಸ್ಯರ ಹೃದಯ ಮಿಡಿದು ನವ ವಧು- ವರನಿಗೆ ಮುಂದೆ ನಿಂತು ಮದುವೆ ಮಾಡಿಸಿರುವ ಮಹತ್ಕಾರ್ಯ ನಡೆದಿದೆ.

ಆರ್ಥಿಕ ಸ್ಥಿತಿ-ಗತಿಗಳಿಂದಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ತಾಳಿ- ಕರಿಮಣಿ, ಸೂಟ್ ಕೇಸ್ ಖರೀದಿಸಲು ಸಾಧ್ಯವಾಗದೆ ಪರಿತಪಿಸುತ್ತಿದ್ದ, ವಧುವಿನ ಸಮಸ್ಯೆ ಮಾಧ್ಯಮ ಸ್ಪಂದನ ತಂಡ ಪರಿಹರಿಸಿದೆ.

ಹೌದು, ತಂದೆ- ತಾಯಿ ಇಲ್ಲದ ಮರಗೋಡು ಗ್ರಾಮದ ನೀರ್ಕೊಲ್ಲಿಯ ನಿವಾಸಿ ಮಹಿಳೆಯೊಂದಿಗೆ ಮೇ 20 ರಂದು ವಿಕಲ ಚೇತನರಾದ ಮರಗೋಡಿನ ಪುರುಷೋತ್ತಮ ಅವರೊಂದಿಗೆ ವಿವಾಹವು ನೆರವೇರಿತು.

ಮದುವೆಗೆ ಕೆಲವು ದಿನ ಮುಂಚೆ ತಾಳಿ- ಕರಿಮಣಿ, ಸೂಟ್ ಕೇಸ್ ಖರೀದಿಸಲು ಸಾಧ್ಯವಾಗದಿರುವ ಬಗ್ಗೆ ಮಾಧ್ಯಮ ಸ್ಪಂದನ ತಂಡದ ಐಮಂಡ ಗೋಪಾಲ್ ಸೋಮಯ್ಯ ಗಮನಕ್ಕೆ ತಂದಿದ್ದರು.
ಮಡಿಕೇರಿಯ ಚಿನ್ನ, ಬೆಳ್ಳಿ ವ್ಯಾಪಾರಿಯಾಗಿರುವ ನಗರಸಭೆ ಮಾಜಿ ಸದಸ್ಯ ಬಿ.ಎಂ. ರಾಜೇಶ್ ತಮ್ಮ ಮನೆಯಲ್ಲೇ ತಾಳಿ-ಕರಿಮಣಿ ಸಿದ್ಧ ಪಡಿಸಿದ್ದರು.
ಮದುವೆ ಖರ್ಚು- ವೆಚ್ಚಕ್ಕೆ ಬೇಕಾದ ಹಣವನ್ನು ಗೀತಾ ದುಡಿದು ಸಂಗ್ರಹಿಸಿಟ್ಟಿದ್ದರು. ತಾಳಿ- ಕರಿಮಣಿ ಖರೀದಿಸಲು ಹಣ ನೀಡುವುದಾಗಿ ಹೇಳಿದ್ದರು.

ಆದರೆ, ಮಾಧ್ಯಮ ಸ್ಪಂದನ ತಂಡದ ಬಿ.ಆರ್. ಸವಿತಾ ರೈ, ಥಾಮಸ್ ಅಲೆಗ್ಸಾಂಡರ್, ಬಿ.ಎಸ್. ಲೋಕೇಶ್ ಸಾಗರ್, ಎಸ್.ಎ. ಮುರಳೀಧರ್, ಎಸ್.ಎಂ. ಮುಬಾರಕ್, ಡಿ.ಪಿ. ರಾಜೇಶ್, ವಿಶ್ವ ಕುಂಬೂರು, ಕೆ.ಎಂ. ವಿನೋದ್, ಬೊಂಬಡಿ ರವಿಕುಮಾರ್ ಸ್ವಂತ ಹಣವನ್ನು ತಾಳಿ- ಕರಿಮಣಿ ಖರೀದಿಗೆ ನೀಡಿದರು. ಆಚಿರ ಸರೋಜ ಮತ್ತು ಕುಟುಂಬ 1,500 ರೂಪಾಯಿ ನೀಡಿ ನೆರವಾಗಿದ್ದರು.

ಮಾಧ್ಯಮ ಸ್ಪಂದನ ತಂಡದ ಮಲ್ಲಿಕಾರ್ಜುನ್ ಅವರ ಮುತುವರ್ಜಿಯಿಂದ ವ್ಯಾಂಡಮ್ ದಾಮೋದರ್ ಉಚಿತವಾಗಿ ಸೂಟ್ ಕೇಸ್ ಒದಗಿಸಿದರು. ಇದರೊಂದಿಗೆ 1 ಸಾವಿರ ಕೂಡ ತಾಳಿ- ಕರಿಮಣಿ ಖರೀದಿಸಲು ನೀಡಿದರು.ಮಲ್ಲಿಕಾರ್ಜುನ ಗಮನ ಸೆಳೆದ ಹಿನ್ನೆಲೆಯಲ್ಲಿ ಮರಗೋಡು ಗ್ರಾಮ ಪಂಚಾಯಿತಿ ವಧು- ವರನಿಗೆ ತಲಾ ಐದು ಸಾವಿರ ರೂಪಾಯಿ ನೀಡಿದೆ.

ಹೀಗೆ ಒಂದು ಬಡ ಜೋಡಿಗಳಿಗೆ ಮದುವೆಯ ಜವಾಬ್ದಾರಿಗಳನ್ನೆಲ್ಲಾ ಹೊತ್ತು ಲಗ್ನ ಮಾಡಿಸಿ, ಮಾನವೀಯತೆ ಮೆರೆದಿದ್ದಾರೆ. ಹಾಗೆಯೇ ಒಂದು ಮದುವೆ ಎಂಬ ಪುಣ್ಯ ಕಾರ್ಯವನ್ನು ಮಾಡಿಸಿ ಈ ಮಾದ್ಯಮ ಸ್ಪಂದನ ತಂಡ ಜನಮೆಚ್ಚುಗೆಗೂ ಪಾತ್ರವಾಗಿದೆ.

error: Content is protected !!