ಮಾಜಿ ಸೈನಿಕರ ಕುಂದುಕೊರತೆ ಆಲಿಸಿದ ಉಸ್ತುವಾರಿ ಸಚಿವರು

ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ಮಾಜಿ ಸೈನಿಕರ ಕುಂದುಕೊರತೆ ಆಲಿಸಿದರು.

ದೇಶದ ಪ್ರಜೆಗಳು ನೆಮ್ಮದಿಯಿಂದ ಬದುಕುತ್ತಿರುವುದರ ಹಿಂದೆ ಸೈನಿಕರ ಶ್ರಮವಿದೆ. ಸೈನಿಕರ ಸೇವೆಗಳನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಮಾಜಿ ಸೈನಿಕರ ಕುಂದು ಕೊರತೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮಾಜಿ ಸೈನಿಕರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಕೇಂದ್ರದಲ್ಲಿ ಮತ್ತು ತಾಲ್ಲೂಕುಗಳಲ್ಲಿ ಸೈನಿಕ ಭವನ ನಿರ್ಮಾಣಕ್ಕೆ ಜಾಗ ಒದಗಿಸಲಾಗುವುದು. ಮಾಜಿ ಸೈನಿಕರ ಶ್ರೇಯೋಭಿವೃದ್ಧಿಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

ಮಾಜಿ ಸೈನಿಕರಿಗೆ ಸಕಾಲದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿಳಂಬ ಮಾಡಿದರೆ ಕೂಡಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ಮಾಜಿ ಸೈನಿಕರಿಗೆ ತಿಳಿಸಿದರು.

ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ನಿವೃತ್ತ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ ಅವರು ಮಾತನಾಡಿ ಜಿಲ್ಲೆಯ ಮಾಜಿ ಸೈನಿಕರ ಸಂಘದ ಕೇಂದ್ರ ಸ್ಥಾನ ಮಡಿಕೇರಿಯಲ್ಲಿದ್ದು, ಮಾಜಿ ಸೈನಿಕರು ಕುಳಿತುಕೊಳ್ಳಲು ಅವರ ಅಹವಾಲುಗಳನ್ನು ಸ್ವೀಕರಿಸಲು ಯಾವುದೇ ಸ್ಥಳವಿಲ್ಲದಿರುವುದರಿಂದ ಜಿಲ್ಲಾ ಕೇಂದ್ರವಾದ ಮಡಿಕೇರಿ ನಗರದಲ್ಲಿ ಮತ್ತು ತಾಲ್ಲೂಕುಗಳಲ್ಲಿ ಸಮುದಾಯ ಭವನ ನಿರ್ಮಾಣ ಮಾಡಬೇಕಾಗಿ ಸಚಿವರಲ್ಲಿ ಮನವಿ ಮಾಡಿದರು.
ಸರ್ಕಾರಿ ಜಾಗ ಮಂಜೂರಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತು ಉಚ್ಚ ನ್ಯಾಯಾಲಯದಿಂದ ಆದೇಶವಿದ್ದರೂ ಜಿಲ್ಲೆಯಲ್ಲಿ ಮಾಜಿ ಸೈನಿಕರ ಮತ್ತು ವಿಧವೆಯರ ಅರ್ಜಿಗಳು ವಿಲೇವಾರಿ ಆಗದೆ ಬಾಕಿ ಆಗಿರುತ್ತದೆ. ಈ ಬಗ್ಗೆ ಪರಿಶೀಲಿಸಿ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು.

ಮಾಜಿ ಸೈನಿಕರ ಮನೆ ಕಂದಾಯದಲ್ಲಿ ಶೇ.50 ರಷ್ಟು ರಿಯಾಯ್ತಿಯನ್ನು ನೀಡುವಂತೆ ಆದೇಶವಿದ್ದರೂ, ಇಲ್ಲಿಯವರೆಗೆ ಜಿಲ್ಲೆಯ ಗ್ರಾಮ ಪಂಚಾಯತಿಗಳಿಂದ ಮಾಜಿ ಸೈನಿಕರಿಗೆ ರಿಯಾಯ್ತಿ ಸಿಗುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದರು.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸೈನಿಕ ಅದಾಲತ್/ ಸಂಪರ್ಕ ಸಭೆ ನಡೆಸಬೇಕು. ಇದರಿಂದ ಸೈನಿಕರ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ವೇದಿಕೆ ಕಲ್ಪಿಸಿದಂತಾಗುತ್ತದೆ ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾಜಿ ಸೈನಿಕರು ಸೇರಿದಂತೆ ಹಿರಿಯರನ್ನು ಕಚೇರಿಗಳಲ್ಲಿ ಅಧಿಕಾರಿಗಳು ಗೌರವದಿಂದ ಕಾಣಬೇಕು ಹಾಗೂ ನಿಯಮಾನುಸಾರ ಸಕಾಲದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು. ಮತ್ತು ಸೈನಿಕರ ಸಂಪರ್ಕ ಸಭೆಯನ್ನು ಏರ್ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಪಿ.ಸೋಮಣ್ಣ ಅವರು ಮಾತನಾಡಿ ಸೈನಿಕ ಕಲ್ಯಾಣ ಇಲಾಖೆಯಲ್ಲಿ ಖಾಯಂ ಜಂಟಿ ನಿರ್ದೇಶಕರು ಇಲ್ಲದಿರುವುದರಿಂದ ಸೈನಿಕರ ಕುಂದು ಕೊರತೆಗಳನ್ನು ಆಲಿಸಲು ಅಧಿಕಾರಿಗಳು ಇಲ್ಲದಂತಾಗಿದೆ. ಆದ್ದರಿಂದ ಖಾಯಂ ಜಂಟಿ ನಿರ್ದೇಶಕರನ್ನು ನೇಮಕ ಮಾಡಬೇಕು ಎಂದು ಸಚಿವರ ಗಮನಕ್ಕೆ ತಂದರು.
ಮಾಜಿ ಸೈನಿಕರ ಕುಟುಂಬ ಪಿಂಚಣಿ ಹೊಂದಿರುವ ಕುಟುಂಬಗಳಿಗೆ ಯಾವುದೇ ಆದಾಯ ಇಲ್ಲದಿರುವುದರಿಂದ ಸರ್ಕಾರ ನೀಡುವ ಬಿಪಿಎಲ್ ಕಾರ್ಡ್‍ನ ಸೌಲಭ್ಯವನ್ನು ಈ ಕುಟುಂಬಗಳಿಗೂ ನೀಡುವಂತಾಗಬೇಕು ಎಂದು ಅವರು ಹೇಳಿದರು.
ಮಾಜಿ ಸೈನಿಕರು ಈಗಾಗಲೇ ಅನುಭವಿಸುತ್ತಿರುವ ಪೈಸಾರಿ ಜಮೀನನ್ನು ಅವರಿಗೆ ಮಂಜೂರು ಮಾಡುವುದು, ಜಮೀನು ಮಂಜೂರು ಆಗದ ಮಾಜಿ ಸೈನಿಕರಿಗೆ ತಾಲ್ಲೂಕುವಾರು ಸೈನಿಕ ಕಾಲೋನಿ ಮಾಡಿ ನಿವೇಶನ ನೀಡುವುದು, ಹಾಗೂ ತಾಲ್ಲೂಕುವಾರು ಸೈನಿಕ ಸಮುದಾಯ ಭವನ ನಿರ್ಮಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಲೋಲಾಕ್ಷ, ಇತರರು ಹಲವು ಮಾಹಿತಿ ನೀಡಿದರು.
ಶಾಸಕರಾದ ಎಂ.ಪಿ.ಸುಜಾ ಕುಶಾಲಪ್ಪ, ಕರ್ನಾಟಕ ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಉಪ ವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್, ಮಾಜಿ ಸೈನಿಕರು, ಅಧಿಕಾರಿಗಳು ಇತರರು ಇದ್ದರು.

error: Content is protected !!