ಮಳೆಗಾಲದ ಮರೆಯಲಾಗದ ಆ ದಿನಗಳು

ಬಾಲ್ಯ ಎಂದಾಕ್ಷಣ ಒಂದಷ್ಟು ನೆನಪುಗಳು ಹಾಗೆ ಕಣ್ಣ ಮುಂದೆ ತೇಲಿ ಹೋಗುತ್ತವೆ. ಅವುಗಳಲ್ಲಿ ಕೆಲವೊಂದು ಹರ್ಷ ತಂದರೆ, ಮತ್ತೂ ಕೆಲವುಗಳು ನಮಗೆ ಪಾಠ ಕಲಿಸುವಂತಹವು. ಆದರೆ ನಮ್ಮ ಮನಸಿನಲ್ಲಿ ಬಾಲ್ಯದ ಸಂತೋಷಗಳೇ ಹೆಚ್ಚಾಗಿ ತುಂಬಿರುತವೆ.. ಅಂತಹವುಗಳಲ್ಲಿ ಮಳೆಗಾಲದ ನೆನಪುಗಳೂ ಸಹ ಒಂದು…

ಮಳೆಗಾಲ ಎಂದರೆ ಅದೇನೋ ಒಂದು ರೀತಿಯ ಸಂತಸ, ಕಾರಣಗಳು ಬೇಕಾದಸ್ಟಿವೆ. ಮಳೆಗಾಲದಿ ಎಲ್ಲಿ ಮರ ಬಿದ್ದು ಅಥವಾ ಇನ್ನವುದೋ ರೀತಿಯಲ್ಲಿ ಹಾನಿಯಾಗುವುದೋ ಎಂಬ ಚಿಂತೆ ಮನೆಯ ಹಿರಿಯರಿಗಿದ್ದರೆ, ಸಂದರ್ಭದ ಗಂಭೀರತೆಯ ಅರಿವೇ ಇಲ್ಲದ ಆ ಬಾಲ್ಯದಲ್ಲಿ ನಮಗೆ ಅದೊಂದು ಸಂತಸದ ಕ್ಷಣವಾಗಿರುತಿತ್ತು…

ಆಗಷ್ಟೇ ಅಂದರೆ ಜೂನ್ ತಿಂಗಳಲ್ಲಿ ಶಾಲೆಗೆ ಹೋಗಲು ಆರಂಭಿಸಿರುತ್ತೇವೆ, ಜೂನ್ ಕಳೆದು ಜುಲೈ ತಿಂಗಳು ಬಿಸಿಲು ನೋಡುವುದೇ ಅಪರೂಪ. ಎಲ್ಲಾ ಸಮಯವೂ ಎಡೆಬಿಡದೆ ಸುರಿಯುವ ಮಳೆ, ಹೀಗೆ ಬಿಟ್ಟು ಬಿಡದೆ ಸುರಿಯುವ ಮಳೆ ಒಂದೆಡೆಯಾದರೆ ಬಣ್ಣ ಬಣ್ಣ ದ ಕೊಡಿಗಳನ್ನು ಹಿಡಿದು ಶಾಲೆಗೆ ಹೋಗಲು ಆತುರ ಇನ್ನೊಂದೆಡೆ. ಕೆಲವು ಬಾರಿ ಮಳೆ ಹೆಚ್ಚಾಗಿ ಶಾಲೆಗೆ ರಜೆ ಘೋಷಣೆಯಾದರೆ, ಸುಮ್ಮನೆ ಮನೆಯಲ್ಲಿ ಇರದೇ ತೋಟಕ್ಕೋ, ಗದ್ದೆಗೋ, ಅಣಬೆ ಹುಡುಕಲೋ ಹೀಗೆ ನಾನಾ ಕಾರಣಗಳ ನೆಪ ಹೇಳಿ ಹೊರಗೆ ಸುತ್ತಾಡಿ, ಮಳೆಯಲ್ಲಿ ನೆನೆದು ಅನಾರೋಗ್ಯಕ್ಕೀಡಾಗಿ ಮಲಗಿ, ತಂದೆ ತಾಯಿಯ ಗದರುವಿಕೆ ಕೇಳಿಯೂ ಕೇಳದಂತೆ ಇದಿದ್ದು ಈಗಲೂ ಅಚ್ಚಳಿಯದೆ ಉಳಿದಿದೆ ನೆನಪೆಂಬ ಅದ್ಭುತದಿ!

ಇನ್ನೂ ಮಳೆಗಾಲ ಇಷ್ಟವಾಗುವುದು ತಿಂಡಿ ತಿನ್ನಲು ಸದಾವಕಾಶ ಎಂದು. ಹೌದು ಮಳೆಗಾಲ ಸಂದರ್ಭದ ಆ ಚಳಿಗೆ, ಅಮ್ಮನ್ನನ್ನು ಪೀಡಿಸಿ, ತಿಂಡಿ ಮಾಡಿಸಿಕೊಂಡು ಬಿಸಿ ಬಿಸಿ ಕಾಫೀ ಕುಡಿಯುತ್ತಿದ್ದರೆ, ಸ್ವರ್ಗಕ್ಕೆ ಮೂರೇ ಗೇಣು!!!
ಕೆಲವು ಬಾರಿ ಕೆಲಸದ ಒತ್ತಡದಿಂದಾಗಿ ಅಮ್ಮ ತಿಂಡಿ ಮಾಡುವುದಿಲ್ಲ ಎಂದಾಗ ಸಹೋದರ, ಸಹೋದರಿಯಾರೊಡನೆ ಸೇರಿ ಹಲಸಿನ ಬೀಜ ಸುಟ್ಟು ತಿಂದದ್ದು ಸಹ ಮರೆಯಲಾಗುವುದೇ!

ಇವೆಲ್ಲಾ ಮನೆಯ ನೆನಪಾದರೆ, ಇನ್ನೂ ಶಾಲೆಯ ವಿಷಯ ಕೇಳುವುದೇ ಬೇಡ. ಸ್ನೇಹಿತರೊಂದಿಗೆ ಬಣ್ಣ ಬಣ್ಣದ ಕೊಡಿಗಳನ್ನು ಹಿಡಿದು, ಅದೂ ಇದೂ ಮಾತನಾಡುತ್ತ ಶಾಲೆಗೆ ಹೋಗುವುದೇ ಸಂಭ್ರಮ. ಹೀಗೆ ರಸ್ತೆ ಮದ್ಯದಲ್ಲಿ ಹೋಗುವಾಗ, ವಾಹನಗಳು ಬಂದಿದ್ದು ಗೊತ್ತಾಗದೆ, ಹಾರ್ನ್ ಶಬ್ದಕ್ಕೆ ಒಮ್ಮೆಲೇ ಬೆಚ್ಚಿ ಬದಿಗೆ ಸರಿದು, ವಾಹನ ಚಾಲಕರಿಂದ ಬೈಸಿಕೊಂಡಿದ್ದಕ್ಕೆ ಲೆಕ್ಕವೇ ಇಲ್ಲ. ತರಗತಿಗಳಲ್ಲಿ ಚಳಿಯಲ್ಲೇ ಪಾಠ ಕೇಳಿ, ಎಂದಿಗಿಂತ 10/15 ನಿಮಿಷ ಬೇಗ ಬಿಡಿ ಎಂದು ಶಿಕ್ಷಕರನ್ನು ಪುಲಾಯಿಸಿ, ಬಿಟ್ಟ ತಕ್ಷಣ ಏನೋ ಗೆದ್ದಂತೆ ಸಂಭ್ರಮಿಸಿದ ಆ ದಿನಗಳು ಈಗ ಕೇವಲ ನೆನಪಷ್ಟೇ….
ಈಗಲೂ ಮಳೆಗಾಲ ಆರಂಭವಾಗುವಾಗ ನಮ್ಮ ಬಾಲ್ಯವೇ ಕಣ್ಮುಂದೆ ಬಂದು ಮರೆಯಾಗುತದೆ… ಅದೆಷ್ಟು ಸೊಗಸಾಗಿತ್ತು ಆ ದಿನಗಳು… ಹೊ ದೇವರೇ ಮರಳಿಸು ಆ ಬಾಲ್ಯ… ಅವಕಾಶ ನೀಡು ಮತ್ತಷ್ಟು ಸಂತೋಷದ ದಿನಗಳನ್ನು ಅನುಭವಿಸಲು…….
✍️ ಪ್ರತೀಕ್ ಪರಿವಾರ ಮರಗೋಡು