ಮರದ ಮಾತು
ಆಕಾಶದ ಎತ್ತರಕ್ಕೆ ಬೆಳೆದು
ನೆರಳನ್ನು ಕೊಡುವ
ಆಸೆ ಎನ್ನ ಮನದಲಿ ಇಹುದು
ನೀರಿಲ್ಲದೆ ಹೋದರೆ ಎನ್ನ
ಬದುಕು ಭುವಿಯ ಬಿಟ್ಟು ಹೋಗದು.
ಒಣಗಿದ ಭೂಮಿಗೆ ಬೀಜ
ಬಿತ್ತಿದರೆ ಸಾಲದು
ಜಲವ ಎರೆದರೆ ನಾನು ಮರವಾಗಿ
ನಿನ್ನ ಉಸಿರಲಿ ಕೊನೆತನಕ
ಜೊತೆಯಲ್ಲಿ ಎಂದಿಗೂ ಇರುವೆ
ನಿನ್ನ ಪ್ರೀತಿಗೆ ಮಣಿದು.
ನನ್ನ ರೆಂಬೆ- ಕೊಂಬೆಗೆ
ಜೋಕಾಲಿ ಕಟ್ಟುವ ಕೈಗಳು ಈಗ
ಮರೆಯಾಗಿ ಹೋದವು
ಮನೆಮುಂದೆ ನಾ ಬೆಳೆದು
ನಿಂತರೆ ಎನ್ನ ನಾಶಮಾಡದೆ
ಮನುಜನಿಗೆ ನಿದ್ದೆ ಬರದು.
ಉದ್ಯಾನವನದಲ್ಲಿ ನನಗೆ
ಅದೆಷ್ಟೋ ಅಲಂಕಾರಗಳು
ಸೆಲ್ಫಿ ಮುಗಿದ ಬಳಿಕ
ಅಂತರ್ಜಾಲದಲ್ಲಿ
ಅವರ ಜೊತೆ ನನ್ನ ಅದೆಷ್ಟೋ
ಅವತಾರಗಳು.
ನನ್ನ ಮಗ ಗಾಳಿ
ಎಲ್ಲಾರಿಗೂ ಚಿರ ಪರಿಚಯ
ಆದರೆ ಅವರಿಗೆ ಗೊತ್ತಿಲ್ಲ
ನನ್ನಿಂದ ಅವನ ಹುಟ್ಟು
ಹಾಗೂ ಅವನಿಗೆ ನಾನು ತಾಯಿ ಎಂದು.
ಭೂಮಿಯಲ್ಲಿ ಮಣ್ಣು
ಇದ್ರೆ ಸಾಕು ಎಂದು ಅರಿತವರು
ನನ್ನ ದ್ವೇಷದಿಂದ ನೋಡುವರು
ನನ್ನ ನಾಶಮಾಡಲು ಮಿಷನ್ಗಳ
ತಂದು ಶಬ್ಧ ಮಾಡಿ ಎನ್ನ ಸುಟ್ಟು ಬಿಡುವರು.
ಏನು ಮಾಡದೆ ಇರುವ ನನಗೆ
ಯಾಕೆ ಈ ಶಿಕ್ಷೆ ಎಂದು ಅರಿಯದೇ
ಹೋಗಿದೆ.!
ಮನುಜನ ಮೇಲೆ ಪ್ರೀತಿ ತೋರಿಸಿ
ನನ್ನ ಮೈಯೆಲ್ಲ ಬಿಸಿಲಿನಲ್ಲಿ ಸುಟ್ಟು
ನಿನಗೆ ಆಸರೆ ನೀಡಿದು ಎನ್ನ ತಪ್ಪೇ?
ಎಂಬುದು ನನ್ನ ಪ್ರಶ್ನೆಯಾಗಿದೆ.?
ತಿಳಿದುಕೋ ಎನ್ನ ಮನುಜ
ನೀ ನನ್ನಿಂದ ದೂರ ಸರೆದರು
ನಾ ನಿನ್ನ ಯಾವತ್ತೂ
ಬದುಕಿರುವ ಕೊನೆಯ ತನಕವೂ
ನಿನ್ನ ಉಸಿರಿನ ಜೋತೆಯಲಿ ಇರುವೆ.
ನಾ ನಿನ್ನಲ್ಲಿ ಕೇಳುವುದು
ಒಂದೇ ಮಾತು ಅದುವೇ
ನೀ ನನ್ನ ಉಳಿಸು
ಹಣದ ಆಸೆಗೆ ಬಲಿಯಾಗದೆ
ಒಂದು ತೊಟ್ಟು ನೀರು ಎರೆ ಸಾಕು.
ಕವಿತೆ : ಕುಸುಮಾಕರ ಅಂಬೆಕಲ್ಲು
ಮಡಿಕೇರಿ ತಾಲ್ಲೂಕು
ಕೊಡಗು ಜಿಲ್ಲೆ
ಚೆಂಬು ಗ್ರಾಮ