ಮತ್ತೆ ಹೊರಗಿನವರಿಗೆ ಕೊಡಗು ಜಿಲ್ಲಾ ಉಸ್ತುವಾರಿ!

ದಶಕಗಳಿಂದ ಶಾಸಕರಾಗಿ ಗೆದ್ದು ಬಂದರೂ ಸಿಗದ ಪ್ರಾಶಸ್ಥ್ಯ…
ವರದಿಃ ಗಿರಿಧರ್ ಕೊಂಪುಳೀರ
ದೇವರ ಹೆಸರಿನಲ್ಲಿ ಕೊಡಗು ಹಾಲಿ ಜಿಲ್ಲಾ ಉಸ್ತುವಾರಿ ವಿ ಸೋಮಣ್ಣ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಇವರು ಮುಂದೆಯೂ ಉಸ್ತುವಾರಿಯಾಗಿ ಮುಂದುವರೆಯುತ್ತಾರೋ ಇಲ್ಲ ಮತ್ತೊಬ್ಬರು ಆ ಜಾಗಕ್ಕೆ ಬಂದು ಕೂರುತ್ತಾರೋ.. ಹೌದು ನಿರೀಕ್ಷೆಯಂತೆ ಕೊಡಗಿನ ಇಬ್ಬರು ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಅಂತಿಮ ಘಟ್ಟದ ವರೆಗೂಶಕೆ ಜಿ ಬೋಪಯ್ಯರವರ ಹೆಸರು ಬಲವಾಗಿ ಕೇಳಿ ಬಂದಿತ್ತು. ಅದೇನಾಯ್ತೋ ಗೊತ್ತಿಲ್ಲ ರಾತೋರಾತ್ರಿ ಸಿ.ಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ಪಟ್ಟಿ ಹಿಡಿದು ಉತ್ತರ ಕರ್ನಾಟಕ ಭಾಗದ ಸಂಸದ ಪ್ರಹಲಾದ ಜೋಶಿ ಜೊತೆಗೂಡಿ ವರಿಷ್ಠರನ್ನು ಭೇಟಿ ಮಾಡಿ, ಸೂರ್ಯೋದಯದ ಮುನ್ನ ಮತ್ತೆ ಬೆಂಗಳೂರಿಗೆ ಬಂದು ವಿಮಾನವಿಳಿದು ನಿತ್ಯಕರ್ಮಕ್ಕಾದರಾದ್ರೂ ಹೋದರೋ ಇಲ್ಲವೋ ತ್ವರಿತವಾಗಿ 29 ತಮ್ಮ ಸಚಿವರ ಪಟ್ಟಿ ಬಿಡುಗಡೆ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಯಾವುದೇ ಉತ್ತರ ನೀಡದೆ ಪಟ್ಟಿ ರಾಜ್ಯಪಾಲರಿಗೆ ರವಾನಿಸಿ ಹೊಸ ಮುಖಗಳಿಗೆ ಮಧ್ಯಾಹ್ನದ ಹೊತ್ತಿಗೆ ರಾಜ್ಯ ಭವನದಲ್ಲಿ ಪ್ರಮಾಣ ವಚನವನ್ನೂ ಬೋಧಿಸಲು ಸಿದ್ಧ ಮಾಡಿಕೊಳ್ಳಲಾಯಿತು. ಅದರಲ್ಲೂ ಶಶಿಕಲಾ ಜೊಲ್ಲೆರವರ ಹೆಸರು ಪ್ರಕಟವಾಗುತ್ತಿದ್ದಂತೆ ಎದ್ನೋ ಬಿದ್ನೋ ರೀತಿಯಲ್ಲಿ ಝೀರೋ ಟ್ರಾಫಿಕ್ನಲ್ಲಿ ಕಡೆಗೂ ಬಂದು ಪ್ರಮಾಣ ವಚನ ಸ್ವಿಕರಿಸಿದರು.ಇತ್ತ ಸಚಿವ ಸ್ಥಾನಕ್ಕೆ ಸದ್ದಿಲ್ಲದೆ ಕಾಯುತ್ತಿದ್ದ ಶಾಸಕರು ಸುಮ್ಮನಿದ್ದರೆ,ಕೆಲವು ಶಾಸಕರ ಬೆಂಬಲಿಗರು ಪ್ರತಿಭಟನೆ,ಹೋರಾಟ ನಡೆಸಿದರು. ಅವರಲ್ಲಿ ಒಬ್ಬರಾದ ಶಾಸಕ ರಾಮ್ ದಾಸ್ ಒಂದು ಸಣ್ಣ ಟಾಂಗ್ ಅನ್ನು ನೀಡಿದರು.
ಕೊಡಗಿನ ಶಾಸಕರೆಲ್ಲಿ: ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿದ್ದರೂ, ಕೊಡಗಿನ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ, ವಿರಾಜಪೇಟೆ ಕ್ಷೇತ್ರದ ಕೆ.ಜಿ ಬೋಪಯ್ಯರವರು ಅತ್ತ ಬೆಂಗಳೂರಿಗೆ ಹೋಗಿಲ್ಲ . ಯಾವುದೇ ಕರೆ ಬಂದಿಲ್ಲ ಎನ್ನುವ ಕಾರಣಕ್ಕೆ ಕ್ಷೇತ್ರದಲ್ಲಿ ಉಳಿದುಕೊಂಡಿದ್ದಾರೆ ಎನ್ನುವ ಮಾಹಿತಿ ಇತ್ತಾದರೂ ಜಿಲ್ಲೆಯ ಇಬ್ಬರು ಶಾಸಕರು ಬೆಂಗಳೂರಿನಲ್ಲೇ ಇದ್ದಾರೆ ಎನ್ನುವ ಸುದ್ದಿ ಹರಡಲಾರಂಭಿಸಿತ್ತು, ಅಷ್ಟರಲ್ಲೇ ಪ್ರಮಾಣ ವಚನವೂ ನಡೆದೇ ಹೋಗಿತ್ತು.
ಕೆ.ಜಿ ಬೋಪಯ್ಯರಿಗೆ ಕಾನೂನು ಸಚಿವ ಸ್ಥಾನ, ಇಲ್ಲವೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕ್ರೀಡೆ ಧಕ್ಕಲಿದೆ,ರಂಜನ್ ರಿಗೆ ಒಂದು ಒಳ್ಳೆಯ ಸ್ಥಾನ ಸಿಗಲಿದೆ ಎನ್ನುವ ವಿಶ್ವಾಸವಿತ್ತು. ಕೊಡಗಿಗೆ ಸಚಿವ ಸ್ಥಾನಬೇಕು ಅಂತ ವಿರೋಧ ಪಕ್ಷದ ನಾಯಕಿ ವೀಣಾ ಅಚ್ಚಯ್ಯ ಸಹ ಆಗ್ರಹಿಸಿದ್ದರು. ಆದರೇನು ಬಂತು ಇಬ್ಬರಿಗೂ ಸ್ವಂತ ಜಿಲ್ಲೆಯ ಉಸ್ತುವಾರಿ ಹೊರುವ ಅಧಿಕಾರವೂ ಲಭಿಸಿಲ್ಲ.