ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ; 4.50 ಕೋಟಿ ರೂ.ಉಳಿತಾಯ ಬಜೆಟ್ ಮಂಡನೆ

ಮಡಿಕೇರಿ ಮೇ.05(ಕರ್ನಾಟಕ ವಾರ್ತೆ):-ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ 2022-23 ನೇ ಸಾಲಿನ ವಾರ್ಷಿಕ ಸುಮಾರು 4.50 ಕೋಟಿ ರೂ. ಉಳಿತಾಯ ಬಜೆಟ್ನ್ನು ಅಧ್ಯಕ್ಷರಾದ ಕೆ.ಎಸ್.ರಮೇಶ್ ಹೊಳ್ಳ ಅವರು ಮಂಡಿಸಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಇತರರ ಉಪಸ್ಥಿತಿಯಲ್ಲಿ ವಾರ್ಷಿಕ ಬಜೆಟ್ನ್ನು ಮಂಡಿಸಿದರು.
ಮಡಿಕೇರಿ ನಗರ ಸ್ಥಳೀಯ ಪ್ರದೇಶದ ಮಹಾಯೋಜನೆಯನ್ನು ಮುಂದಿನ ಹತ್ತು ವರ್ಷದ ಅವಧಿಗೆ ಸಿದ್ಧಪಡಿಸುವ ಪ್ರಸ್ತಾವನೆಯನ್ನು ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮಂಡಿಸಿದರು.
ನಗರಸಭೆ, ಲೋಕೋಪಯೋಗಿ, ಸೆಸ್ಕ್, ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೀಗೆ ಎಲ್ಲರ ಸಹಕಾರದೊಂದಿಗೆ ಮಹಾಯೋಜನೆಯನ್ನು ಪರಿಷ್ಕರಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಮಹಾಯೋಜನೆಗೆ ಸಾರ್ವಜನಿಕರಿಂದ ಸ್ವೀಕರಿಸಿದ ಸಲಹೆ ಸೂಚನೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ರಸ್ತೆ ಅಗಲೀಕರಣ ಮತ್ತು ಕಟ್ಟಡ ರೇಖೆಯನ್ನು ಕಡಿಮೆ ಮಾಡುವುದು, ಕಂದಾಯ ಇಲಾಖೆಯಿಂದ ಸುತ್ತೋಲೆ ಹೊರಡಿಸಿರುವಂತೆ ತೋಟದಲ್ಲಿ ಮನೆ ನಿರ್ಮಿಸಲು ಅವಕಾಶ ಮಾಡುವುದು, ಕೃಷಿ ಜಮೀನಿನಲ್ಲಿ ಬರುವ ಪ್ರದೇಶದಲ್ಲಿ 20 ಸೆಂಟ್ಸ್ ಗರಿಷ್ಠ ಮನೆ, ವಸತಿಗೆ ಭೂ ಪರಿವರ್ತನೆಗೆ ಅವಕಾಶ ಮಾಡುವುದು, ರಾಜಕಾಲುವೆ ಒತ್ತುವರಿ ಮಾಡದಂತೆ ಬಫರ್ ಜೋನ್ ನಿಗಧಿಪಡಿಸುವುದು, ಮನೆ ನಿರ್ಮಿಸುವಾಗ ನಾಲ್ಕುಚಕ್ರ ವಾಹನ ನಿಲುಗಡೆಗೆ ಸೆಲ್ಲರ್ ಕಾಯ್ದಿರಿಸುವುದು, 240 ಚದರ ಮೀಟರ್ ಒಳಗೆ ನಿವೇಶನ ಇದ್ದರೂ ಸಹ ನಾಲ್ಕು ಚಕ್ರದ ವಾಹನ ನಿಲುಗಡೆಗೆ ಜಾಗ ಕಾಯ್ದಿರಿಸುವುದು, 240 ಚದರ ಮೀಟರ್ಗಿಂತ ಹೆಚ್ಚು ನಿವೇಶನ ಇದ್ದಲ್ಲಿ ವಾಹನ ನಿಲುಗಡೆ ನೆಲಮಹಡಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವುದು, ನಂತರ ಮನೆ ನಿರ್ಮಿಸುವುದು(ಜಿ+2) ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಿಎ ನಿವೇಶನ ಬಗ್ಗೆ ಚರ್ಚಿಸಲಾಯಿತು. ಸಿಎ ನಿವೇಶನಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಇಲಾಖೆಯಿಂದ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆರ್.ವೆಂಕಟೇಶ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಲಾವಣ್ಯ, ಪೌರಾಯುಕ್ತರಾದ ರಾಮದಾಸ್, ಪೊಲೀಸ್ ಇನ್ಸ್ಪೆಕ್ಟರ್ ವೆಂಕಟೇಶ್, ಕೆಎಸ್ಆರ್ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಗೀತಾ, ವಿಶೇಷ ಆಹ್ವಾನಿತರು ಇತರರು ಇದ್ದರು.