ಮಕ್ಕಳಿಗೆ ಕೊರೋನಾ ಹರಡದಿರಲು ತಜ್ಞರ ಹೊಸ ತಂತ್ರ!

ಹದಿನೆಂಟು ವರ್ಷದೊಳಗಿನವರಿಗೆ ಕೊರೊನಾ ಲಸಿಕೆ ಹಾಕಿಸಲು ಇನ್ನು ಅನುಮತಿ ಸಿಗದ ಹಿನ್ನಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲದಂತೆ ನೋಡಿಕೊಳ್ಳಲು ತಜ್ಞರು ಹೊಸ ಐಡಿಯಾ ಕಂಡುಕೊಂಡಿದ್ದಾರೆ.
ಮಕ್ಕಳಿಗೆ ಸೋಂಕು ಹರಡದಂತೆ ನೋಡಿಕೊಳ್ಳಲು ರಿಂಗ್ ಇಮ್ಯೂನೈಜೆಶನ್ನಿಂದ ಸಾಧ್ಯ ಎಂದು ಕೊರೊನಾ ರಕ್ಷಣಾ ತಾಂತ್ರಿಕ ಸಮಿತಿ ಅಭಿಪ್ರಾಯಪಟ್ಟಿದೆ.
ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದ್ದರೂ ನಮ್ಮ ದೇಶದಲ್ಲಿ ಇನ್ನು ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕಲು ಅನುಮತಿ ಸಿಕ್ಕಿಲ್ಲ. ಆದರೆ, ಅಮೆರಿಕಾದಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಹಾಕಲು ಅನುಮತಿ ಸಿಕ್ಕಿದೆ. ನಮ್ಮ ದೇಶದಲ್ಲಿ ಇನ್ನು ಅನುಮತಿ ಸಿಗದ ಕಾರಣ ರಿಂಗ್ ಇಮ್ಯೂನೈಜೆಷನ್ ಸಹಕಾರಿಯಾಗಲಿದೆ ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯ ಡಾ.ಸಂಜಯ್ ಸಲಹೆ ನೀಡಿದ್ದಾರೆ.
ಏನೀದು ರಿಂಗ್ ಇಮ್ಯೂನಿಜೈಷನ್: ಲಸಿಕೆ ಹಾಕಿಸಿಕೊಳ್ಳದ ಮಕ್ಕಳಿಗೆ ಕೊರೊನ ಸೋಂಕು ಹರಡದಂತೆ ನೋಡಿಕೊಳ್ಳಬೇಕಾದರೆ, ಮಕ್ಕಳು ವಾಸಿಸುವ ಪ್ರದೇಶವನ್ನು ಸೇಫ್ ಜೋನ್ಗಳನ್ನಾಗಿ ಪರಿವರ್ತಿಸುವುದಾಗಿದೆ. ಮಕ್ಕಳಿರುವ ಮನೆಗಳ ಪೋಷಕರಿಗೆ, ಮನೆ ಕೆಲಸದವರಿಗೆ, ಮಕ್ಕಳು ಶಾಲೆಗೆ ತೆರಳುವ ಶಾಲೆಗಳ ಶಿಕ್ಷಕರಿಗೆ ಮತ್ತು ಸಿಬ್ಬಂದಿಗಳಿಗೆ ಹಾಗೂ ಮನೆ ಅಕ್ಕಪಕ್ಕದ ಬೇಕರಿ, ಹೋಟೆಲ್ ಮತ್ತಿತರ ಮಳಿಗೆಗಳ ಸಿಬ್ಬಂದಿಗಳಿಗೆ ಲಸಿಕೆ ಹಾಕಿಸುವ ಮೂಲಕ ಮಕ್ಕಳಿಗೆ ಕೊರೊನಾ ಹರಡದಂತೆ ತಡೆಗಟ್ಟಬಹುದಾಗಿದೆ ಎಂದು ಸಂಜಯ್ ವಿವರಿಸಿದ್ದಾರೆ.
ಹೀಗಾಗಿ ಸರ್ಕಾರ ಹಾಗೂ ಬಿಬಿಎಂಪಿಯವರು ಮಕ್ಕಳು ವಾಸಿಸುತ್ತಿರುವ ಪ್ರದೇಶಗಳಿಗೆ ತೆರಳಿ ಸುತ್ತಮುತ್ತಲಿನ ವಾತವರಣವನ್ನು ಸೇಫ್ ಜೋನ್ಗಳಾಗಿ ಪರಿವರ್ತಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಕೆಲ ದಿನಗಳಿಂದ ಮಕ್ಕಳಲ್ಲಿ ಸೋಂಕು ಹೆಚ್ಚಳವಾಗುತ್ತಿರುವುದು ಕಂಡು ಬಂದಿದೆ. ಇದರ ಜತೆಗೆ ಮಕ್ಕಳು ಜ್ವರ ಮತ್ತಿತರ ಸಾಂಕ್ರಾಮಿಕ ರೋಗಗಳಿಗೂ ತುತ್ತಾಗುತ್ತಿರುವುದರಿಂದ ಸರ್ಕಾರ ನಮ್ಮ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವಂತೆ ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.