ಭಾರತ ಪುರುಷ ತಂಡದ ಫೈನಲ್ ಕನಸು ಭಗ್ನ!

41 ವರ್ಷಗಳ ಬಳಿಕ ಒಲಂಪಿಕ್ ಹಾಕಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ತಂಡ ಬೆಲ್ಜಿಯಂ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ 5-2 ಗೋಲುಗಳ ಅಂತರದಲ್ಲಿ ಸೋಲು ಕಂಡಿತು. ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಕಾದಾಟ ನಡೆಯಿತು. ಕೊನೆಯಲ್ಲಿ, ಸಂಪೂರ್ಣ ಮೇಲುಗೈ ಸಾಧಿಸಿದ ಬೆಲ್ಜಿಯಂ ಮುನ್ನಡೆ ಕಂಡಿತು. ತನ್ನದೇ ತಪ್ಪುಗಳಿಂದ ಸಾಲು ಸಾಲು ಪೆನಾಲ್ಟಿ ತೆತ್ತ ಭಾರತಕ್ಕೆ ತನ್ನ ಫೈನಲ್ ಪಯಣದ ಕನಸು ನನಸಾಗಲಿಲ್ಲ.

ಪಂದ್ಯದಲ್ಲಿ ಭಾರತದ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಪಂದ್ಯದ ಎರಡನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ನಲ್ಲಿ ಬೆಲ್ಜಿಯಂನ ಫೆಲಿಕ್ಸ್ ಡಿನೇಯರ್ ಬೆಲ್ಜಿಯಂ ಪರ ಮೊದಲ ಗೋಲು ಬಾರಿಸಿದರು. ನಂತರ ಭಾರತಕ್ಕೆ ಅದನ್ನು ಸರಿದೂಗಿಸಲು ಸ್ವಲ್ಪ ಸಮಯ ಬೇಕಾಯ್ತು. ಪಂದ್ಯದ ಒಂಬತ್ತನೇ ನಿಮಿಷದಲ್ಲಿ ಹರ್ಮನ್ಪ್ರೀತ್ ಸಿಂಗ್ ಭಾರತಕ್ಕೆ ಮೊದಲ ಗೋಲು ತಂದುಕೊಟ್ಟರು.

ಟೂರ್ನಿಯಲ್ಲಿ ತಮ್ಮ ಐದನೇ ಗೋಲು ಸಿಡಿಸಿದ ಹರ್ಮನ್ಪ್ರೀತ್, ಭಾರತಕ್ಕೆ ಸಮಬಲ ಸಾಧಿಸಲು ನೆರವಾದರು.

ಪಂದ್ಯದ ಮೊದಲಾರ್ಧದಲ್ಲಿ ಹರ್ಮನ್ಪ್ರೀತ್ ಸಿಂಗ್ ಗೋಲು ಬಾರಿಸಿದ ಎರಡು ನಿಮಿಷದ ಅಂತರದಲ್ಲೇ ಮಂದೀಪ್ ಸಿಂಗ್ ಮತ್ತೊಂದು ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ತಂದಿಟ್ಟರು. ಬೆಲ್ಜಿಯಂ ಆಟಗಾರರು ಇದಕ್ಕೆ ಮೇಲ್ಮನವಿ ಸಲ್ಲಿಸಿ, ಮಂದೀಪ್ ತಮ್ಮ ಹಾಕಿ ಸ್ಟಿಕ್ಕಿನ ಬೆನ್ನಿನ ಭಾಗದಲ್ಲಿ ಗೋಲು ಹೊಡೆದಿದ್ದಾರೆ ಎಂದಿದ್ದರು. ಆದರೆ, ರೆಫರಿ ಭಾರತದ ಪರವಾಗಿ ತೀರ್ಪಿತ್ತರು.

ಪಂದ್ಯದ ದ್ವಿತೀಯಾರ್ಧದಲ್ಲಿ ಬೆಲ್ಜಿಯಂ ಪರ ಅಲೆಕ್ಸಾಂಡರ್ ಹೆನ್ರಿಕ್ಸ್ ಗೋಲು ಬಾರಿಸಿ ಸಮಬಲ ಸಾಧಿಸಲು ನೆರವಾದರು. ನಂತರ ತೀವ್ರ ಜಿದ್ದಾಜಿದ್ದಿನಿಂದ ಪಂದ್ಯ ಸಾಗಿತು. ಉಭಯ ತಂಡಗಳೂ ಯಾವ ಗೋಲನ್ನೂ ಬಿಟ್ಟುಕೊಡಲಿಲ್ಲ. ಪಂದ್ಯದ ತೃತೀಯಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಭಾರತ ಪೆನಾಲ್ಟಿಗಳನ್ನು ಗೋಲುಗಳಾಗಿ ಪರಿವರ್ತಿಸುವ ಅವಕಾಶಗಳನ್ನು ಕಳೆದುಕೊಂಡಿತು. ಆದ್ದರಿಂದ ಗೋಲು ರಹಿತವಾದ ತೃತೀಯಾರ್ಧ ಪಂದ್ಯವನ್ನು ಕುತೂಹಹಲಕರ ನಾಲ್ಕನೇ ಅವಧಿಗೆ ಕೊಂಡೊಯ್ದಿತು.

ನಾಲ್ಕನೇ ಅವಧಿಯಲ್ಲಿ ಬೆಲ್ಜಿಯಂನ ಅಲೆಕ್ಸಾಂಡರ್ ಹೆನ್ರಿಕ್ಸ್ ಮತ್ತೊಂದು ಗೋಲು ಬಾರಿಸಿ ಬೆಲ್ಜಿಯಂಗೆ 3-2ರ ಮುನ್ನಡೆ ತಂದಿತ್ತರು. ಪಂದ್ಯಾವಳಿಯ 11ನೇ ಗೋಲು ಬಾರಿಸಿದ ಹೆನ್ರಿಕ್ಸ್ ಪಂದ್ಯದಲ್ಲಿ ಬೆಲ್ಜಿಯಂಗೆ ಮುನ್ನಡೆ ಒದಗಿಸಿದರು. ಸಾಲು ಸಾಲು ಪೆನಾಲ್ಟಿ ಕಾರ್ನರ್ ಮಾಡಿದ ಭಾರತಕ್ಕೆ ಹಿನ್ನೆಡೆಯಾಯಿತು. ಅಲೆಕ್ಸಾಂಡರ್ ಹೆನ್ರಿಕ್ಸ್ ಮತ್ತೊಂದು ಗೋಲು ಬಾರಿಸಿ 4-2ರ ಮುನ್ನಡೆಗೆ ಕಾರಣರಾದರು. ಕೊನೆಯಲ್ಲಿ ಮತ್ತೊಂದು ಗೋಲು ಬಾರಿಸಿದ ಬೆಲ್ಜಿಯಂ 5-2ರ ಮುನ್ನಡೆ ಕಂಡು ಗೆಲುವಿನ ನಗೆ ಬೀರಿತು.

ಬೆಲ್ಜಿಯಂ ತಂಡವು ಇಂದು ನಡೆಯಲಿರುವ ಮತ್ತೊಂದು ಸೆಮಿಫೈನಲ್ನಲ್ಲಿ ಸೆಣಸಲಿರುವ ಜರ್ಮನಿ ಮತ್ತು ಆಸ್ಟ್ರೇಲಿಯಾದ ನಡುವಿನ ವಿಜೇತರನ್ನು ಫೈನಲ್ನಲ್ಲಿ ಎದುರಿಸಲಿದೆ. ಸೋತ ತಂಡವು, ಭಾರತದೊಂದಿಗೆ ಕಂಚಿಗಾಗಿ ಸ್ಪರ್ಧಿಸಲಿದೆ.

error: Content is protected !!