ಭಾರತದ ವಿರುದ್ಧ ದಾವೂದ್ ಹೊಸ ಖತರ್ನಾಕ್ ಮಾಸ್ಟರ್ ಪ್ಲಾನ್!

ನವದೆಹಲಿ: ಹಲವು ವರ್ಷಗಳಿಂದ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂ ಈಗ ಮತ್ತೆ ಭಾರತದ ವಿರುದ್ಧ ದೊಡ್ಡ ಮಟ್ಟದಲ್ಲಿ ಷಡ್ಯಂತ್ರ ರೂಪಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ದಾವೂದ್ ವಿಶೇಷ ಘಟಕ ಸ್ಥಾಪಿಸಿದ್ದು, ಅವುಗಳ ಮೂಲಕ ಭಾರತದ ವಿವಿಧೆಡೆ ಉಗ್ರ ದಾಳಿ ನಡೆಸಲು ಸಂಚು ರೂಪಿಸಿರುವ ಮಾಹಿತಿ ಲಭಿಸಿದೆ.
ಇನ್ನೊಂದೆಡೆ, ಎಲ್ಒಸಿಯಲ್ಲಿ ಕಾಶ್ಮೀರದೊಳಕ್ಕೆ ನುಸುಳುವುದಕ್ಕೆ ಅಫ್ಘನ್ ಉಗ್ರರು ಲಾಂಚ್ಪ್ಯಾಡ್ ತಲುಪಿದ್ದಾರೆ ಎಂಬ ಮಾಹಿತಿಯನ್ನು ಭಾರತೀಯ ಸೇನೆ ಬಹಿರಂಗಪಡಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದಾಖಲಿಸಿದ ಎಫ್ಐಆರ್ ಮಾಹಿತಿ ಪ್ರಕಾರ, ಭಾರತವನ್ನು ಗುರಿಯಾಗಿಸಿ ದಾವೂದ್ ಇಬ್ರಾಹಿಂ ವಿಶೇಷ ಘಟಕವನ್ನು ಸ್ಥಾಪಿಸಿದ್ದಾನೆ. ಪ್ರಮುಖ ರಾಜಕೀಯ ನೇತಾರರು ಮತ್ತು ಪ್ರಸಿದ್ಧ ವ್ಯಾಪಾರೋದ್ಯಮಿಗಳ ಹಿಟ್ಲಿಸ್ಟ್ ತಯಾರಿಸಿರುವ ಆತ ಅವರ ಮೇಲೆ ದಾಳಿಗೆ ಈ ತಂಡ ಬಳಸಿಕೊಳ್ಳಲು ಉದ್ದೇಶಿಸಿದ್ದಾನೆ. ಯೋಜನಾಬದ್ಧವಾಗಿ ದೇಶದ ವಿವಿಧೆಡೆ ಉಗ್ರ ದಾಳಿ ನಡೆಸುವುದಕ್ಕೆ ಸಂಚು ರೂಪಿಸಿದ್ದಾನೆ. ವಿವಿಧೆಡೆ ಹಿಂಸಾಚಾರ ನಡೆಸುವುದಕ್ಕೂ ಸಿದ್ಧತೆ ನಡೆದಿದೆ. ದಾವೂದ್ ಗ್ಯಾಂಗ್ ವಿಶೇಷವಾಗಿ ದೆಹಲಿ ಮತ್ತು ಮುಂಬೈ ಮೇಲೆ ಗಮನ ಕೇಂದ್ರೀಕರಿಸಿದೆ. ಇಲ್ಲಿನ ಉದ್ಯಮಿಗಳೇ ಹೆಚ್ಚು ಜನ ಹಿಟ್ಲಿಸ್ಟ್ನಲ್ಲಿದ್ದಾರೆ ಎನ್ನಲಾಗಿದೆ.
ಇಡಿ ಕಸ್ಟಡಿಯಲ್ಲಿ ಕಸ್ಕರ್: ದಾವೂದ್ ಇಬ್ರಾಹಿಂ ಮತ್ತು ಸಹಚರರ ಒಳಗೊಂಡ ಅಕ್ರಮ ಲೇವಾದೇವಿ ಪ್ರಕರಣ ಕುರಿತು ಜಾರಿ ನಿರ್ದೇಶನಾಲಯವು ಇತ್ತೀಚೆಗೆ ಕೇಸ್ ದಾಖಲಿಸಿತ್ತು. ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ನನ್ನು ವಿಚಾರಣೆಗಾಗಿ ಶುಕ್ರವಾರ ಇಡಿ ತನ್ನ ಕಸ್ಟಡಿಗೆ ತೆಗೆದುಕೊಂಡಿದ್ದು, ಫೆ.24ರ ತನಕ ಆತ ಇಡಿ ಕಸ್ಟಡಿಯಲ್ಲಿ ಇರಲಿದ್ದಾನೆ. ದಾವೂದ್ ಇಬ್ರಾಹಿಂ ಮತ್ತು ಸಹಚರರ ವಿರುದ್ಧ ಯುಎಪಿಎ ಪ್ರಕಾರ ಮುಂಬೈ ಪೊಲೀಸರು ಜ. 7ರಂದು ಕೇಸ್ ದಾಖಲಿಸಿ ಎಫ್ಐಆರ್ ಹಾಕಿದ್ದರು. ಬಳಿಕ ಎನ್ಐಎಗೆ ವರ್ಗಾಯಿಸಿದ್ದರು. ರಿಯಲ್ಎಸ್ಟೇಟ್ ಬಿಲ್ಡರ್ ಆಗಿರುವ ಪಾತಕಿ ಒಬ್ಬನಿಂದ ಇಕ್ಬಾಲ್ ಕಸ್ಕರ್ 2015ರಲ್ಲಿ ಒತ್ತೆಹಣಕ್ಕೆ ಬೇಡಿಕೆ ಇರಿಸಿದ್ದ. ಈ ಸಂಬಂಧ ನೀಡಿದ್ದ ದೂರಿನ ಪ್ರಕಾರ, 2017ರ ಸೆಪ್ಟೆಂಬರ್ನಲ್ಲಿ ಇಕ್ಬಾಲ್ ಕಸ್ಕರ್, ಮುಮ್ತಾಜ್ ಅಜಾಸ್ ಶೇಖ್, ಇಸ್ರಾರ್ ಜಮೀಲ್ ಸೈಯದ್ ಮತ್ತು ಇತರರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಬಳಿಕ ಕಸ್ಕರ್ನನ್ನು ಪೊಲೀಸರು ಬಂಧಿಸಿದ್ದರು.
ಐಪಿಎಸ್ ಅಧಿಕಾರಿಯೂ ಉಗ್ರ ಹಿತೈಷಿ!: ಲಷ್ಕರ್ ಎ ತೊಯ್ಬಾದ ಹುರಿಯತ್ ಟೆರರ್ ಫಂಡಿಂಗ್ ಕೇಸ್ನಲ್ಲಿ, ಗ್ಯಾಲಂಟರಿ ಪ್ರಶಸ್ತಿ ಪುರಸ್ಕೃತರಾಗಿದ್ದ ಹಿಮಾಚಲ ಪ್ರದೇಶದ ಐಪಿಎಸ್ ಅಧಿಕಾರಿ ಅರವಿಂದ ದಿಗ್ವಿಜಯ ನೇಗಿಯನ್ನು ಎನ್ಐಎ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಲಷ್ಕರ್ ಪರ ಕೆಲಸ ಮಾಡಿದ ಬಗ್ಗೆ ಎನ್ಐಎ 2021ರ ನವೆಂಬರ್ನಲ್ಲಿ ಕೇಸು ದಾಖಲಿಸಿತ್ತು. ಒಂದು ವರ್ಷ ಅವಧಿಗೆ ನೇಗಿಯ ಚಲನವಲನಗಳು ಎನ್ಐಎ ನಿಗಾದಲ್ಲಿತ್ತು.
ಕಾಶ್ಮೀರ ಗಡಿಯಲ್ಲಿ ಅಫ್ಘನ್ ಉಗ್ರರು ಕದನಪೀಡಿತ ಅಫ್ಘಾನಿಸ್ತಾನವನ್ನು ಅಮೆರಿಕ ಸೇನೆ ಬಿಟ್ಟು ಹೋದ ಬಳಿಕ 2021ರ ಆಗಸ್ಟ್ನಲ್ಲಿ ಕಾಬುಲ್ ಪತನ ಆಗಿತ್ತು. ಅದಾಗಿ ಅಮೆರಿಕ ಸೇನೆ ಅಫ್ಘಾನಿಸ್ತಾನದಲ್ಲೇ ತ್ಯಜಿಸಿದ್ದ ಶಸ್ತ್ರಾಸ್ತ್ರಗಳನ್ನು ಹಿಡಿದ ಉಗ್ರರು ಭಾರತದ ಕಡೆಗೆ ದೃಷ್ಟಿ ಹಾಯಿಸಿದ್ದಾರೆ. ಅಫ್ಘನ್ನಲ್ಲೀಗ ಉಗ್ರರಿಗೆ ಕೆಲಸವಿಲ್ಲದಂತಾಗಿರುವ ಕಾರಣ ಅವರೆಲ್ಲ ಈಗ ಭಾರತದೊಳಕ್ಕೆ ನುಸುಳುವುದಕ್ಕೆ ಎಲ್ಒಸಿಯಲ್ಲಿ ಸೇರಿಕೊಂಡಿದ್ದಾರೆ. ಅಫ್ಘನ್ನ ಪರಿಸ್ಥಿತಿಯು ನಮ್ಮ ದೇಶದ ಸುರಕ್ಷತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ ಉಗ್ರರ ನೇರ ಗುರಿಯಾಗಿದ್ದು, ಹಲವಾರು ಉಗ್ರ ಸಂಘಟನೆಗಳು ಕೈಜೋಡಿಸಿವೆ ಎಂದು ಮೇಜರ್ ಜನರಲ್ ಅಜಯ್ ಚಾಂದ್ಪುರಿಯಾ ಹೇಳಿದ್ದಾರೆ. ಅವರು ಉತ್ತರ ಕಾಶ್ಮೀರದ ಬಾರಾಮೂಲಾದಲ್ಲಿರುವ 19ನೆ ಪದಾತಿದಳ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ ಹೊಣೆಗಾರಿಕೆ ನಿಭಾಯಿಸುತ್ತಿದ್ದಾರೆ. ಇದೇ ವಿಭಾಗದ 15ನೇ ಚಿನಾರ್ ಕೋರ್ ತಂಡ ಉಗ್ರ ತಡೆ ವ್ಯವಸ್ಥೆ ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ನಿಗಾವಹಿಸುವ ಕೆಲಸ ಮಾಡುತ್ತಿದೆ.
ಉಗ್ರರ ಕೈಯಲ್ಲಿ ಅಮೆರಿಕ ಶಸ್ತ್ರ: ಎಲ್ಒಸಿಯಲ್ಲಿರುವ ಲಾಂಚ್ಪ್ಯಾಡ್ಗಳಲ್ಲಿ 100ರಿಂದ 130 ಉಗ್ರರು ಇರುವುದು ಖಚಿತ ವಾಗಿದೆ. ಅತಿಕ್ರಮವಾಗಿ ಭಾರತದ ಗಡಿಯೊಳಗೆ ನುಸುಳುವ ಪ್ರಯತ್ನ ವನ್ನು ಉಗ್ರರು ಮಾಡುತ್ತಲೇ ಇದ್ದು, ಹಲವು ಪ್ರಯತ್ನಗಳನ್ನು ನಿಷ್ಕ್ರಿಯ ಗೊಳಿಸಲಾಗಿದೆ. ಹತರಾದ ಉಗ್ರರ ಬಳಿ ಅಮೆರಿಕದ ಅತ್ಯಾಧುನಿಕ ಶಸ್ತ್ರಾಸ್ತ್ರ ಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೇಜರ್ ಜನರಲ್ ಅಜಯ್ ತಿಳಿಸಿದ್ದಾರೆ.
ಸೇನಾ ಶಿಬಿರದಲ್ಲಿ ಪಾಕಿಸ್ತಾನ ಗೂಢಚರ: ರಾಜಸ್ಥಾನದ ನಾಸಿರಾಬಾದ್ ಸೇನಾ ಕ್ಯಾಂಪ್ನೊಳಗೆ ಪ್ರವೇಶ ಪಡೆದಿದ್ದ ಪಾಕಿಸ್ತಾನದ ಗೂಢಚರ ಮೊಹಮ್ಮದ್ ಯೂನಸ್ನನ್ನು ಗುಪ್ತಚರ ವಿಭಾಗ ಶುಕ್ರವಾರ ಬಂಧಿಸಿದೆ. ಯೂನಸ್ ಅಜ್ಮೇರ್ನ ಕಿಶನ್ಗಢ ನಿವಾಸಿ ಆಗಿದ್ದು, ಸ್ಥಳೀಯ ಬಸ್ನಿಲ್ದಾಣದ ರ್ಪಾಂಗ್ ಲಾಟ್ನಲ್ಲಿ ಚೀಟಿ ಕೊಡುವ ಕೆಲಸ ಮಾಡುತ್ತಿದ್ದ. ಭಾರತೀಯ ಸೇನೆಯ ಚಲನವಲನಗಳನ್ನು ಗಮನಿಸಿ ಪಾಕಿಸ್ತಾನದ ಐಎಸ್ಐಗೆ ವಾಟ್ಸ್ಆಯಪ್ ಮೂಲಕ ರವಾನಿಸುತ್ತಿದ್ದ. ಈತನಿಗೆ ಅಲ್ಲಿಂದ ಹಣ ಬರುತ್ತಿತ್ತು. ಇದನ್ನು ಖಚಿತಪಡಿಸಿಕೊಂಡ ಬಳಿಕ ಬಂಧಿಸಲಾಗಿದೆ ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ.