fbpx

ಭಾರತದೊಳಗೊಂದು ಅಜ್ಞಾತ ದ್ವೀಪ!

ಭೂಮಿಯು ವಿಶಾಲವಾಗಿದೆ. ಇಲ್ಲಿ ಅನೇಕ ನಿಗೂಢ ವಿಷಯಗಳಿವೆ. ಮನುಷ್ಯ ಇಂದು ಅದೇನೇ ಹೊಸ ಹೊಸ ಆವಿಷ್ಕಾರಗಳನ್ನು, ಸಂಶೋಧನೆಗಳನ್ನು ಮಾಡಿದರೂ ಅವನಿಗೆ ಗೋಚರವಾಗದ ಅನೇಕ
ವಿಚಾರಗಳಿವೆ. ಅವುಗಳಲ್ಲಿ ಒಂದರ ಬಗ್ಗೆ ಇಂದು ಇಲ್ಲಿ ಹೇಳಲಿದ್ದೇನೆ.


ಅದು ಅಂಡಮಾನ್ ದ್ವೀಪ ಗುಂಪಿನಲ್ಲಿರುವ ಒಂದು ಪುಟ್ಟ ದ್ವೀಪ. ಅದರ ಜನಸಂಖ್ಯೆ “39” ಎಂದು 2011ರ ಭಾರತದ ಜನಗಣತಿ ಹೇಳಿದರೂ ಅದರ ಪಕ್ಕದಲ್ಲೇ ತುಂಬ ಏರುಪೇರುಗಳಿರಬಹುದು ಎಂಬ ಸೂಚನೆ ಸಹ ಕಾಣುತ್ತದೆ. ಅಲ್ಲಿಯ ಜನರು ಈಗಲೂ ಕೂಡ ಬಿಲ್ಲು ಬಾಣ ಹಿಡಿದು ಅಪರಿಚಿತ ಅತಿಥಿಗಳ ಸ್ವಾಗತಕ್ಕೆ ಕಾಯುತ್ತಲೇ ಇರುತ್ತಾರೆ. ಇದು ಯಾವುದೇ ಸಿನಿಮಾ ಕಥೆಯಲ್ಲ. ಈ ರೀತಿಯ ಪ್ರದೇಶವೊಂದಿದೆ ಅದುವೇ “ಉತ್ತರ ಸೆಂಟಿನಲ್ ದ್ವೀಪ” . ಅಲ್ಲಿರುವ ಜನರೇ ಈ ಸೆಂಟಿನಲ್ ಜನಾಂಗದವರು. ‘ಈ ಸೆಂಟಿನಲ್ ದ್ವೀಪ ಯಾಕೆ ಈಗ ನೆನಪಾಯಿತು?’ ಎಂಬ ಪ್ರಶ್ನೆಗೆ ಉತ್ತರ ಕೋವಿಡ್ – 19 ಮತ್ತು ಅದನ್ನು ನಿಯಂತ್ರಿಸಲು ಎಲ್ಲರೂ ಹೇಳುತ್ತಿರುವ ಸಾಮಾಜಿಕ ಅಂತರದ ಪಾಠ. ಈ ಸೆಂಟಿನಲ್ ಜನಾಂಗದ ಬದುಕಿನ ಬಗ್ಗೆ ಅರಿತಾಗ ಸಾಮಾಜಿಕ ಅಂತರ ಸಾಧಿಸುವುದು ಕಷ್ಟದ ಕೆಲಸವೇನಲ್ಲ ಎಂಬುದು ತಿಳಿಯುತ್ತದೆ. ಅದಕ್ಕೆ ನಮ್ಮ ಮನಸ್ಥಿತಿ ಬದಲಾಗಬೇಕಿದೆ ಎಂಬ ಸತ್ಯದ ಅರಿವು ಕೂಡ ಆಗುತ್ತದೆ. ಈ ಅರಿವಿನ ಜೊತೆಗೆ ನಾನು ಹೇಳಿದ ಉತ್ತರ ಸೆಂಟಿನೆಲ್ ದ್ವೀಪದ ಕೆಲವು ರೋಚಕ ವಿಷಯಗಳು ಇಲ್ಲಿದೆ:
ಆಧುನಿಕ ಪ್ರಪಂಚದ ಸಂಪರ್ಕಕ್ಕೆ ಸಿಗದ ಕಟ್ಟಕಡೆಯ ಜನಾಂಗಗಳಲ್ಲಿ ಸೆಂಟಿನೆಲ್ ಜನಾಂಗವು ಒಂದಾಗಿದೆ. ಇದು ಭಾರತದ ಭೂಪ್ರದೇಶಕ್ಕೆ ಸೇರಿದೆ ಎನ್ನುವುದನ್ನು ಬಿಟ್ಟರೆ ಭಾರತದ ಯಾವುದೇ ಸವಲತ್ತುಗಳು ಅವರಿಗೆ ದೊರೆತಿಲ್ಲ. ಅಂಡಮಾನ್ ಆಡಳಿತವು ಕೂಡ ಅಲ್ಲಿಯ ಜನರು ಸ್ವಾತಂತ್ರ್ಯ ಬಯಸುತ್ತಾರೆಂದು 1997 ರ ನಂತರ ಅಲ್ಲಿಗೆ ಜನರ ಪ್ರವೇಶವನ್ನೂ ನಿಷೇಧಿಸಿದೆ . ಆ ಪ್ರದೇಶದಿಂದ ಹೊರಗೆ ಬಂದು ಜನರು ಜೀವಿಸಿರುವ ಯಾವುದೇ ಉದಾಹರಣೆಗಳಿಲ್ಲ, ಹಾಗೆಯೇ ಇಲ್ಲಿಂದ ಆ ದ್ವೀಪಕ್ಕೆ ಹೋಗಿ ಹಿಂತಿರುಗಿ ಬಂದಿರುವ ಸಂಖ್ಯೆಯೂ ಕೂಡ ತೀರಾ ಕಡಿಮೆ!

ಸೆಂಟಿನಲ್ ದ್ವೀಪದ ಬುಡಕಟ್ಟು ಜನರು

1880 ರಲ್ಲಿ ಮೋರಿಸ್ ಪೋರ್ಟ್‌ಮ್ಯಾನ್ ಎಂಬ ಬ್ರಿಟಿಷ್ ಆಡಳಿತಧಿಕಾರಿ ಮತ್ತು ಸ್ವತಂತ್ರ ನಂತರ Archaeological survey of India (ASI) ನಿರ್ದೇಶಕರಾಗಿದ್ದ ತ್ರಿಲೋಕಾನಾಥ ಪಂಡಿತ್ ಮತ್ತು ಸಂಗಡಿಗರು ಅಲ್ಲಿಯ ಜನರೊಂದಿಗೆ ಶಾಂತಿಯುತ ಸಂಪರ್ಕ ಸಾಧಿಸಿದರು.


ASI ತಂಡವು ಸೆಂಟಿನಲ್ ದ್ವೀಪದ ಬುಡಕಟ್ಟು ಜನರೊಂದಿಗೆ ಸ್ನೇಹ ಸಾಧಿಸಿರುವ ಚಿತ್ರ

ಇನ್ನುಳಿದಂತೆ ಎಲ್ಲರೂ ಬಿಲ್ಲು ಬಾಣಗಳಿಂದ ಅವರಿಂದ ಅತಿಥಿ ಸತ್ಕಾರ ಮಾಡಿಸಿಕೊಂಡವರೇ! 1997 ನಂತರ ಅಲ್ಲಿಗೆ ಪ್ರವೇಶ ನಿಷೇಧಿಸಿದ್ದರೂ, 2004 ರ ಸುನಾಮಿಯ ಬಳಿಕ ಆಹಾರದ ಪೊಟ್ಟಣಗಳನ್ನು ಎಸೆಯಲು ಹೋದ ಹೆಲಿಕಾಪ್ಟರ್ ಗೂ ಬಾಣಗಳ ಪರಿಚಯವಾಗಿತ್ತು. 2006 ರಲ್ಲಿ ದಾರಿ ತಪ್ಪಿ ದ್ವೀಪಕ್ಕೆ ತಲುಪಿದ ಮೀನುಗಾರರೊಬ್ಬರು ಅವರಿಂದ ಕೊಲೆಯಾದರು. ಈಗಲೂ ಸೆಂಟಿನಲ್ ಜನಾಂಗದವರು ಆ ದ್ವೀಪದಲ್ಲಿ ವಾಸಿಸುತ್ತಾರೆ. ತೀರಾ ಇತ್ತೀಚೆಗೆ ಒಬ್ಬ ವಿದೇಶಿ ಪ್ರಜೆ ಧರ್ಮ ಪ್ರಚಾರಕ್ಕೆ ಹೋಗಿ ಕೊಲೆ ಆದದ್ದು ನಿಮಗೆ ನೆನಪಿರಬಹುದು. ಇಂದಿಗೂ ಅಲ್ಲಿನ ಜನತೆ ಆಧುನಿಕ ಪ್ರಪಂಚದಿಂದ ದೂರವಾಗಿ ಅಪರಿಚಿತ ಅತಿಥಿಗಳಿಗೆ ಸ್ವಾಗತ ಮಾಡಲು ಬಿಲ್ಲು ಬಾಣ ಹಿಡಿದು ಕಾಯತ್ತಾ ಕಾಲ ಕಳೆಯುತ್ತಿದ್ದಾರೆ. ಇಂತಹ ನಂಬಲಾರದ ಅನೇಕ ರೋಚಕ ಸತ್ಯಗಳು ಇನ್ನೂ ಈ ಭೂಮಿಯ ಮೇಲೆ ಜೀವಂತವಾಗಿದೆ. ನಮಗೆ ತಿಳಿದುಕೊಳ್ಳುವ ಕುತೂಹಲ ಇರಬೇಕು ಅಷ್ಟೇ !!!

ವರ್ಚಸ್ವಿ, ಹವ್ಯಾಸಿ ಬರಹಗಾರರು

error: Content is protected !!