ಭಾರತದಿಂದ ಬಾಂಗ್ಲಾಗೆ 12 ಲಕ್ಷ ಕೋವಿಡ್ ಲಸಿಕೆ ಉಡುಗೊರೆ!

ಢಾಕಾ (ಬಾಂಗ್ಲಾದೇಶ): ಭಾರತವು ಶನಿವಾರ ಬಾಂಗ್ಲಾದೇಶಕ್ಕೆ 12 ಲಕ್ಷ ಕೋವಿಡ್-19 ಲಸಿಕೆಯ ಡೋಸ್‌ಗಳನ್ನು ಉಡುಗೊರೆಯಾಗಿ ನೀಡಿದೆ. ಎರಡು ದಿನಗಳ ಪ್ರವಾಸಕ್ಕಾಗಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಲಸಿಕೆಗಳನ್ನೊಳಗೊಂಡ ಪ್ರಾತಿನಿಧಿಕ ಪೆಟ್ಟಿಗೆಯೊಂದನ್ನು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರಿಗೆ ಹಸ್ತಾಂತರಿಸಿದರು.

ಅದೇ ವೇಳೆ, ಮೋದಿ 109 ಆಯಂಬುಲೆನ್ಸ್‌ಗಳ ಪ್ರಾತಿನಿಧಿಕ ಕೀಯೊಂದನ್ನೂ ಹಸೀನಾರಿಗೆ ನೀಡಿದರು.

ಈ ಸಂದರ್ಭದಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಸಹಕಾರ ಮತ್ತು ಪರಸ್ಪರ ಹಿತಾಸಕ್ತಿಗಳ ಬಗ್ಗೆ ಮಾತುಕತೆ ನಡೆಸಿದರು. ಸಂಪರ್ಕ, ಇಂಧನ, ವ್ಯಾಪಾರ, ಆರೋಗ್ಯ ಮತ್ತು ಅಭಿವೃದ್ಧಿ ಸಹಕಾರಗಳ ಕ್ಷೇತ್ರಗಳಲ್ಲಿ ಸಾಧಿಸಲಾದ ಪ್ರಗತಿಯ ಬಗ್ಗೆಯೂ ಅವರು ಚರ್ಚಿಸಿದರು.

ಬಳಿಕ ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿ 5 ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿದವು.

error: Content is protected !!