ಬೆಳಗಾವಿ Quick RoundUp

ಮಳೆ ಅಬ್ಬರ ಜೋರು : ಏಳು ಸೇತುವೆಗಳು ಜಲಾವೃತ

ಬೆಳಗಾವಿ : ಮಹಾರಾಷ್ಟ್ರ ಸೇರಿದಂತೆ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಜಿಲ್ಲೆಯ ಕೃಷ್ಣಾ ನದಿ ನೀರಿನ ಮಟ್ಟ ಏರಿಕೆಯಾಗಿದ್ದು ಜಿಲ್ಲೆಯ ಹುಕ್ಕೇರಿ, ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ಏಳು ಸೇತುವೆಗಳು ಜಲಾವೃತಗೊಂಡಿವೆ.

ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ ,ದೂದಗಂಗಾ, ವೇದಗಂಗಾ, ಹಿರಣ್ಯಕೇಶಿ ನದಿಗಳಲ್ಲಿ ನೀರಿನ ಮಟ್ಟ ಏರಿಕಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸುಮಾರು 14 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಜತ್ರಾಟ – ಭೀವಶಿ, ಯಡೂರು – ಕಲ್ಲೋಳ, ಮಮದಾಪೂರ – ಹುನ್ನರಗಿ ಹಾಗೂ ನಾಗನೂರು – ಗೋಟೂರ ಸೇತುವೆಗಳು ಜಲಾವೃತಗೊಂಡಿದ್ದು ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು ಕುಡಚಿ ಸೇತುವೆ ಮಳುಗಡೆ ಆಗುವ ಸಾಧ್ಯತೆ ಇದೆ.‌ ಈಗಾಗಲೇ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆಯಾಗಿ ಜಾಗ್ರತೆಯಿಂದ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದು, ಎನ್ ಡಿ ಆರ್ ಎಫ್ ತಂಡವನ್ನು ನಿಯೋಜನೆ ಮಾಡಲಾಗಿದೆ.‌
ಖಾನಾಪುರ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಹಣಬರಹಟ್ಟಿಯ ಆಂಜನೇಯ ದೇವಸ್ಥಾನ ಮುಳುಗಡೆಯಾಗಿದೆ. ನದಿ ಪಕ್ಕದಲ್ಲೇ ಈ ದೇವಸ್ಥಾನ ಇದ್ದು ಮಲಪ್ರಭಾ ನದಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ದೇವಸ್ಥಾನ ಜಲಾವೃತವಾಗಿದೆ.


ಬೆಳಗಾವಿಯಲ್ಲಿ ಭಾರಿ ಮಳೆಗೆ ಮರ ಬಿದ್ದು ಕಾರು ಜಖಂ

ಬೆಳಗಾವಿ: ಕಳೆದ ಕೆಲವು ದಿನಗಳಿಂದ ಬೆಳಗಾವಿಯಲ್ಲಿ ಮಳೆ ಸುರಿತುತ್ತಿದ್ದು ನಗರದಲ್ಲಿ ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ಸುರಿದ ಭಾರಿ ಮಳೆಯಿಂದ ಕೆ ಎಲ್ ಇ ಆಸ್ಪತ್ರೆ ಹತ್ತಿರ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಕೆಳಗೆ ನಿಂತಿದ್ದ ಕಾರು ಜಖಂ ಆಗಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಚರಂಡಿಗಳು ತುಂಬಿ ಹರಿಯುತ್ತಿವೆ.‌ ಜೊತೆಗೆ ಬೆಳಗಾವಿ ಹೊರ ವಲಯದ ಗದ್ದೆಗಳಲ್ಲಿ ನೀರು ನಿಂತಿದ್ದು ಬೆಳೆ ಹಾನಿಯಾಗುವ ಆತಂಕ ರೈತರಲ್ಲಿ ಮನೆಮಾಡಿದೆ.

ಇನ್ನೂ ಬೆಳಗಾವಿ ನಗರದಲ್ಲಿ ಸುರಿಯುತ್ರಿರುವ ಧಾರಾಕಾರ ಮಳೆಯಿಂದ‌ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ದರ್ಶನವಾಗುತ್ತಿದೆ.‌ ಅಲ್ಲಲ್ಲಿ ರಸ್ತೆಗಳಲ್ಲಿ ಗುಂಡಿ ಬಿಳುತ್ತಿದ್ದು ವಾಹನ ಸವಾರರು ಪರದಾಡುವ ದೃಶ್ಯ ಸಾಮಾನ್ಯವಾಗಿದೆ. ಅಷ್ಟೇ ಅಲ್ಲದೆ ಕೋಟ್ಯಾಂತರ ಹಣ ಜರ್ಚು ಮಾಡಿ ನಿರ್ಮಾಣ ಮಾಡುತ್ತಿರುವ ಬೆಳಗಾವಿ ಸ್ಮಾರ್ಟ್ ಸಿಟಿ ಕಾಮಗಾರಿ ಮಳೆಯಲ್ಲಿ ಮಳೆಯಲ್ಲಿ ಹೋಮ ಮಾಡಿದಂತಾಗಿದೆ. ರಸ್ತೆ ಪಕ್ಕದ ಚರಂಡಿ ನೀರು ಪ್ರವಾಹವನ್ನು ಸೃಷ್ಟಿಸಿದ್ದು ಜನರು ಹಿಡಿಶಾಪ ಹಾಕುತ್ತಿದ್ದಾರೆ.


ಧುಮ್ಮಿಕ್ಕುತ್ತಿರುವ ಗೋಕಾಕ್ ಜಲಪಾತ : ಪ್ರವಾಸಿಗರಿಗೆ ಕೊರೋನಾ ಕಂಟಕ

ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಗೋಕಾಕ್ ಜಲಪಾತ ಮೈದುಂಬಿ ಹರಿಯುತ್ತಿದ್ದು ನೀರಿನ ರುದ್ರರಮಣೀಯ ದೃಶ್ಯ ನೋಡುಗರ ಕಣ್ಣಿಗೆ ಮದ ನೀಡುತ್ತಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಘಟಪ್ರಭಾ ನದಿ ನೀರಿನ ಮಟ್ಟ ಹೆಚ್ಚಾಗಿದ್ದು ಗೋಕಾಕ್ ಜಲಪಾತ ಧುಮುಕುತ್ತಿದೆ.

ಮಳೆಗಾಲ ಪ್ರಾರಂಭವಾದರೆ ಸಾಕು ಜಿಲ್ಲೆಯ ನಾನಾ ಭಾಗಗಳಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಗೋಕಾಕ್ ಜಲಪಾತಕ್ಕೆ ಭೇಟಿ ನೀಡುತ್ತಿದ್ದರು.‌ಆದರೆ ಕೊರೋನಾ ಹಿನ್ನಲೆಯಲ್ಲಿ ಸಧ್ಯ ಲಾಕ್ ಡೌನ್ ಜಾರಿ ಮಾಡಿದ್ದು ಪ್ರವಾಸಿಗರು ಇತ್ತ ಸುಳಿಯುತ್ತಿಲ್ಲ. ಸಮೀಪದ ಊರಿನ ಜನ ಬಂದು ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ.


error: Content is protected !!