ಬೆಲೆ ಏರಿಕೆಯಿಂದ ದುಬಾರಿ ಆಗಲಿದೆ ಹೋಟೆಲ್ ಊಟ, ತಿಂಡಿಯ ದರ

ಬೆಂಗಳೂರು: ಈಗಾಗಲೇ ದೇಶವಾಸಿಗಳು ಬೆಲೆ ಏರಿಕೆಯಿಂದ ತತ್ತರಿಸಿಹೋಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಏಪ್ರಿಲ್ 1 ರಿಂದ ಹೋಟೆಲ್ ಗಳಲ್ಲಿ ಊಟ, ತಿಂಡಿಯ ದರದಲ್ಲೂ ಶೇ.10ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ದೇಶದಲ್ಲಿ ಅಡುಗೆ ಎಣ್ಣೆ, ಇಂಧನ, ದಿನಬಳಕೆ ವಸ್ತುಗಳ ದರ ಏರಿಕೆಯಾಗಿದೆ. ಹಾಗಾಗಿ ಹೋಟೆಲ್ ಗಳಲ್ಲಿ ಊಟ, ತಿಂಡಿ ದರದಲ್ಲೂ ಶೇ.10 ರಷ್ಟು ಹೆಚ್ಚಳ ಮಾಡಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ಹೊಸ ದರಗಳು ಏ.1 ರಿಂದ ಜಾರಿಯಾಗಲಿವೆ ಎನ್ನಲಾಗುತ್ತಿದೆ.
ಮಾರುಕಟ್ಟೆಯಲ್ಲಿ ಸನ್ ಫ್ಲವರ್ ರಿಫೈನ್ಡ್ ಆಯಿಲ್ ದರ 200 ರೂ.ಗಳ ಗಡಿ ಮುಟ್ಟಿದ್ದು ಹಾಗಾಗಿ ಹೋಟೆಲ್ ಗಳಲ್ಲಿ ಪೂರಿ, ಚಪಾತಿ, ಪಲ್ಯ, ವಡೆ, ಬೋಂಡ, ಬಜ್ಜಿ, ಕಬಾಬ್, ಚೈನೀಸ್ ಫುಡ್ ಸೇರಿ ಹಲವು ವೆಜ್-ನಾನ್ ವೆಜ್ ಪದಾರ್ಥಗಳನ್ನು ತಯಾರಿಸಲು ಖರ್ಚು ಹೆಚ್ಚಾಗುತ್ತಿದೆ. ಆದ್ದರಿಂದ ಏಪ್ರಿಲ್ 1 ರಿಂದ ಊಟ, ತಿಂಡಿಯ ದರ ಏರಿಕೆ ಮಾಡುವ ಸಂಬಂಧ ಹೋಟೆಲ್ ಮಾಲೀಕರ ಸಂಘವು ಸಭೆ ನಡೆಸಿ ತೀರ್ಮಾನ ಕೈಗೊಂಡಿದೆ. ಏಪ್ರಿಲ್ 1 ರಿಂದ ಏರಿಕೆಯಾಗುವ ಸಂಭವವಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ತಿಳಿದ್ದಾರೆ.