fbpx

ಬಿಳಿಕಾಂಡಕೊರಕ ಭೀತಿಯಲ್ಲಿ ಕಾಫಿ ಬೆಳೆಗಾರರು

ವರದಿ: ಲಕ್ಷ್ಮಿಕಾಂತ್ ಕೊಮರಪ್ಪ

ಕೊಡಗು(ಸೋಮವಾರಪೇಟೆ ): ಮಳೆಗಾಲದಲ್ಲಿ
ಬಿಸಿಲ ಧಗೆ ಹೆಚ್ಚಾದಂತೆ, ಕಾಫಿ ತೋಟದಲ್ಲಿ
ಬಿಳಿಕಾಂಡಕೊರಕ ಹಾವಳಿ ಮಿತಿಮೀರಿದ
ಹಿನ್ನೆಲೆಯಲ್ಲಿ ಬೆಳೆಗಾರರು ಆತಂಕಗೊಂಡಿದ್ದಾರೆ. ರೋಗ ಪೀಡಿತ ಕಿತ್ತ ಕಾಫಿ ಗಿಡಗಳನ್ನು ತೋಟದ ಸಮೀಪ ಸಂಗ್ರಹಿಸಿಟ್ಟ ಪರಿಣಾಮ ಬಿಳಿಕಾಂಡಕೊರಕ ಕೀಟಬಾಧೆ ಆರೋಗ್ಯವಂತ ಗಿಡಗಳನ್ನು ಬಾಧಿಸುತ್ತಿವೆ.
ಕರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಾಫಿ
ಬುಡಗಳಿಗೆ ಬೇಡಿಕೆ ಕಡಿಮೆಯಾಗಿ, ಬೆಲೆಯಿಲ್ಲದೆ ಕೊಳ್ಳುವವರು ಇಲ್ಲದೆ ಕಿತ್ತ ಕಾಫಿ ಬುಡಗಳನ್ನು ತೋಟದ ಸಮೀಪ ಸಂಗ್ರಹಿಸಿಡುವಂತಾಗಿದೆ ಎಂದು ಬೆಳೆಗಾರರು
ಹೇಳಿದ್ದಾರೆ.

ಬುಡಕ್ಕೆ ಬೆಲೆಯಿಲ್ಲ:
ಕಳೆದ ವರ್ಷ ಒಂದು ಕಾಫಿ ಬುಡಕ್ಕೆ
10ರಿಂದ 15 ರೂ.ಗಳಿಗೆ ಮಾರಾಟವಾಗಿತ್ತು.
ಪ್ರಸಕ್ತ ವರ್ಷ 5 ರೂ.ಗಳಿಗೆ ಕೆಲವರು ಖರೀದಿ
ಮಾಡುತ್ತಿದ್ದಾರೆ. ಮೈಸೂರು, ಹಾಸನ ಜಿಲ್ಲೆಯ
ಹೊಗೆಸೊಪ್ಪು ಬೆಳೆಗಾರರು, ಕಾಫಿ ಬುಡಗಳನ್ನು
ದುಪ್ಪಟ್ಟು ಹಣ ನೀಡಿ ಖರೀದಿ ಮಾಡುತ್ತಿದ್ದರು.
ಆದರೆ ಪ್ರಸಕ್ತ ಕೃಷಿ ಚಟುವಟಿಕೆ ಕಡಿಮೆಯಾಗಿರುವ ಪರಿಣಾಮ ಕೊಳ್ಳುವವರು ಇಲ್ಲದಂತಾಗಿದೆ.
ಕಾಫಿ ಬುಡಗಳು ಗಟ್ಟಿಯಿರುವುದರಿಂದ
ಕೆಲ ಬೆಳೆಗಾರರು ಮನೆಯ ಉಪಯೋಗಕ್ಕೆ
ಉಪಯೋಗಿಸಲು ಸಂಗ್ರಹ ಮಾಡಿರುವುದರಿಂದ ಸಮಸ್ಯೆ ಎದುರಾಗಿದೆ.

ಇದರ ಜೊತೆಯಲ್ಲೆ ಮಳೆಗಾಲದಲ್ಲಿ ಹೆಚ್ಚಿನ
ಬಿಸಿಲು ಇರುವುದರಿಂದ, ಕಾಂಡಕೊರಕ
ಕೀಟಗಳ ಸಂತನೋತ್ಪತಿ ಜಾಸ್ತಿಯಾಗುತ್ತಿದ್ದು,
ಬೆಳೆಗಾರರಿಗೆ ಆತಂಕ ಹೆಚ್ಚಾಗಿದೆ.

ನಿರ್ವಹಣೆ ಕಷ್ಟ
ಬಿಳಿಕಾಂಡಕೊರಕ ಗಳು ಕಾಫಿ ಗಿಡದ ಕಾಂಡವನ್ನು ಕೊರೆದು ತಿನ್ನುತ್ತಿರುವುದರಿಂದ, ಫಸಲು ಕೊಡುತ್ತಿದ್ದ ಗಿಡಗಳು ಸಾಯುತ್ತಿವೆ. ಹತ್ತು ವರ್ಷಗಳ ಹಳೆಯದಾದ ಗಿಡಗಳು ಸಾಯುತ್ತಿರುವುದರಿಂದ ಬೆಳೆಗಾರರು ಆರ್ಥಿಕ
ನಷ್ಟ ಅನುಭವಿಸಬೇಕಾಗಿದೆ. ಹೊಸದಾಗಿ ಕಾಫಿ ಗಿಡ ನೆಟ್ಟು ಫಸಲು ತೆಗೆಯಬೇಕಾದರೆ ನಾಲ್ಕರಿಂದ 5 ವರ್ಷಗಳು ಬೇಕಾಗುತ್ತದೆ. ಕಾಫಿ ತೋಟಗಳಲ್ಲಿ ಫಸಲು
ನೀಡುವ ಆರೋಗ್ಯವಂತ ಗಿಡಗಳು ನಾಶವಾಗುತ್ತಿರುವುದರಿಂದ ಕಾಫಿ ತೋಟದ ನಿರ್ವಹಣೆ ಅಸಾಧ್ಯ ಎಂದು ಬೆಳೆಗಾರರ ಅಭಿಪ್ರಾಯವಾಗಿದೆ.

ತಾಲೂಕಿನಲ್ಲಿ ಅರೇಬಿಕಾ ಕಾಫಿ :
ಅರೇಬಿಕಾ ತೋಟಗಳಲ್ಲಿ ಮಾತ್ರ
ಬಿಳಿಕಾಂಡಕೊರಕ(ಕ್ಸೈಲೋಟ್ರೀಕಸ್‍ಕ್ವಾಡ್ರಿಪಸ್)
ಹಾವಳಿ ಹೆಚ್ಚಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಅತೀಹೆಚ್ಚು ಅರೇಬಿಕಾ ಬೆಳೆಯಲಾಗುತ್ತಿದೆ. ಒಟ್ಟು 28,540ಹೆ. ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. 22,940ಹೆ. ನಲ್ಲಿ ಅರೇಬಿಕಾ, 5,600ಹೆ.ನಲ್ಲಿ ರೋಬಾಸ್ಟಾ
ಬೆಳೆಯಲಾಗುತ್ತಿದೆ.

ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ ಕಸಬಾ, ಸುಂಟಿಕೊಪ್ಪ, ಶಾಂತಳ್ಳಿ ಹೋಬಳಿಯಲ್ಲಿ ಹೆಚ್ಚು ಅರೇಬಿಕಾ ಬೆಳೆಯಲಾಗುತ್ತಿದೆ. ಇಲ್ಲಿ ಕೀಟಬಾಧೆ
ಹೆಚ್ಚಾಗಿದೆ. ಎಕರೆಯೊಂದರಲ್ಲಿ 700ರಿಂದ800
ಕಾಫಿ ಗಿಡಗಳು ಇದ್ದರೆ, ಅದರಲ್ಲಿ ಫಸಲು
ಕೊಡುವ ನೂರು ಗಿಡಗಳು ಕಾಂಡಕೊರಕ
ಕೀಟಬಾಧೆಗೆ ತುತ್ತಾಗಿವೆ. ಕಿತ್ತ ಗಿಡಗಳನ್ನು
ಕೂಡಲೆ ಸುಟ್ಟು ನಾಶಪಡಿಸಬೇಕಾದ
ಅನಿವಾರ್ಯತೆ ಒದಗಿದ ಇಲ್ಲದಿದ್ದರೆ ದೊಡ್ಡ
ಪ್ರಮಾಣದಲ್ಲಿ ಹಾನಿ ಉಂಟಾಗಲಿದೆ ಎಂದು
ಕೆಲ ಬೆಳೆಗಾರರು ಹೇಳಿದ್ದಾರೆ.

ಕೀಟ ನಿಯಂತ್ರಣ ಕ್ರಮಗಳು ;
ಪ್ರತಿವರ್ಷ ಫೆಬ್ರವರಿ, ಮಾರ್ಚ್, ಏಪ್ರಿಲ್,
ಮೇ ತಿಂಗಳಲ್ಲಿ ಕೀಟ ಪೀಡಿತ ಗಿಡಗಳನ್ನು
ತೆಗೆಯಬೇಕು, ಕ್ರಿಮಿನಾಶಕ ಸಿಂಪಡಿಸಬೇಕು,
ಜುಲೈನಿಂದ, ಸೆಪ್ಟಂಬರ್ ಒಳಗೆ ತೋಟದಲ್ಲಿ
ಹದವಾದ ನೆರಳು ನಿರ್ವಹಣೆ ಮಾಡಿಕೊಳ್ಳಬೇಕು.
ನಂತರ ಅಕ್ಟೋಬರ್ ನಿಂದ ಡಿಸೆಂಬರ್ ತನಕ
ಕೀಟ ನಿಯಂತ್ರಣದ ಕೆಲಸದ ಪುನರಾವರ್ತನೆ
ಮಾಡಬೇಕು ಎಂಬುದು ಕೀಟತಜ್ಞರ ಸಲಹೆ.

ಕಾಫಿ ಮಂಡಳಿ ಸೂಚನೆ:
ಬಿಳಿಕಾಂಡಕೊರಕ ಪೀಡಿತ ಕಾಫಿ ಗಿಡಗಳನ್ನು ಕಿತ್ತು ಕೂಡಲೆ ಸುಡಬೇಕು. ತೋಟದ
ಬದಿಯಲ್ಲಿ ಸಂಗ್ರಹ ಮಾಡಬಾರದು. ಈ ಬಗ್ಗೆ ಎಲ್ಲಾ ಬೆಳೆಗಾರರಿಗೆ ತಿಳುವಳಿಕೆ ನೀಡಲಾಗಿದೆ.
ಬುಡಗಳನ್ನು 15 ದಿನಗಳ ಕಾಲ ನೀರಿನಲ್ಲಿ ಮುಳುಗಿಸಿಟ್ಟು, ನಂತರ ಮಾರಾಟ ಮಾಡಬಹುದು.
ಈ ಕೆಲಸವನ್ನು ಎಲ್ಲಾ ಬೆಳೆಗಾರರು ಸಾಮೂಹಿಕವಾಗಿ ನಿಗದಿತ ಸಮಯದಲ್ಲಿ ಮಾಡಿದರೆ
ರೋಗಬಾಧೆ ಹತೋಟಿ ಸಾಧ್ಯ ಎಂದು ಹಿರಿಯ ಸಂಪರ್ಕಾಧಿಕಾರಿ, ಕಾಫಿ ಮಂಡಳಿ ಮಾಹಿತಿ ನೀಡಿದ್ದಾರೆ.

error: Content is protected !!