ಬದುಕು ರೂಪಿಸುವ ಬೋಧಕರು ನಿತ್ಯಸ್ಮರಣೀಯರಾಗಿರುತ್ತಾರೆ: ಬೋಸ್ ಮಂದಣ್ಣ ನುಡಿ

ವಿದ್ಯಾರ್ಥಿಗಳ ಬದುಕು ರೂಪಿಸುವಲ್ಲಿ ಬೋಧಕರು ಸದಾ ಮಹತ್ತರ ಪಾತ್ರ ವಹಿಸುತ್ತಾರೆ. ವಿದ್ಯಾರ್ಥಿಗಳ ಭವಿಷ್ಯ ಕಟ್ಟಿಕೊಳ್ಳುವಲ್ಲಿ ನೆರವಾಗುವ ಇಂಥ ಬೋಧಕರು ಜೀವನಪರ್ಯಂತ ನಿತ್ಯಸ್ಮರಣೀಯರಾಗಿರುತ್ತಾರೆ. ಈ ಸಾಲಿಗೆ ಸಾಹಿತಿ ಡಾ. ಜೆ. ಸೋಮಣ್ಣ ಸೇರುತ್ತಾರೆ ಎಂದು ಬಾಳೆಲೆ ಸೆಂಟರ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಆಳಮೆಂಗಡ ಬೋಸ್ ಮಂದಣ್ಣ ಹೇಳಿದರು.

ಬಾಳೆಲೆಯ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಇತ್ತೀಚಿಗೆ ನಿವೃತ್ತರಾದ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಜೆ. ಸೋಮಣ್ಣ ಅವರಿಗಾಗಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸುವ ಮೂಲಕ ಗೌರವಿಸಿ ಮಾತನಾಡಿದ ಅವರು, ಬಾಳೆಲೆ ಕಾಲೇಜಿನಲ್ಲಿ ಕಳೆದ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸೋಮಣ್ಣ ಅವರು ಉತ್ತಮ ಬೋಧಕರಾಗಿದ್ದರಲ್ಲದೆ, ಜಿಲ್ಲೆಯ ಶ್ರೇಷ್ಠ ಸಾಹಿತಿಗಳೆಂದು ಕರೆಸಿಕೊಂಡಿರುವುದು ಅಭಿಮಾನಕರ ಸಂಗತಿಯಾಗಿದೆ ಎಂದು ಶ್ಲಾಘಿಸಿದರು.

ಡಾ. ಜೆ. ಸೋಮಣ್ಣ ಅವರ ಅವರ ಬೋಧನಾ ಶೈಲಿಯೇ ವಿಭಿನ್ನವಾದದ್ದು. ಇವರ ಕನ್ನಡ ಪಾಠಕ್ಕೆ ಮನಸೋಲದ ವಿದ್ಯಾರ್ಥಿಗಳಿಲ್ಲ ಎಂದು ಸ್ಮರಿಸಿದರಲ್ಲದೆ, ಇಲಾಖೆ ಮತ್ತು ಆಡಳಿತ ಮಂಡಳಿಯ ಜೊತೆ ಉತ್ತಮ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುತ್ತಿದ್ದ ಸೋಮಣ್ಣ ಅವರು ಮಾದರಿ ಪ್ರಾಂಶುಪಾಲರಾಗಿದ್ದರು. ಮುಂದೆ ಬರುವ ಎಲ್ಲರೂ ಕೂಡ ಇವರ ಮಾರ್ಗವನ್ನೇ ಅನುಸರಿಸಲಿ ಇಂದು ಆಶಯ ವ್ಯಕ್ತಪಡಿಸಿದರಲ್ಲದೆ, ಇದರಿಂದ ವಿದ್ಯಾಸಂಸ್ಥೆ ಮತ್ತಷ್ಟು ಪ್ರಗತಿ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಅವರ ರೂಪದ ವಿಶೇಷ ಸ್ಮರಣಿಕೆಯೊಂದಿಗೆ ಸೋಮಣ್ಣ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

error: Content is protected !!