fbpx

ಪೌರಕಾರ್ಮಿಕರ ದಿನಾಚರಣೆ;ಹಸಿ ಮತ್ತು ಒಣ ಕಸ ಬೇರ್ಪಡಿಸಿ ನೀಡಿ: ಡಾ.ಬಿ.ಸಿ.ಸತೀಶ

ಮಡಿಕೇರಿ ಸೆ.23:-ನಗರದಲ್ಲಿ ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. 

ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈಗಾಗಲೇ ನಿಷೇಧಿತ ಪ್ಲಾಸ್ಟಿಕ್‍ನ್ನು ಬಳಸದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಹಾಗೆಯೇ ಮನೆಯಲ್ಲಿ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ನಗರಸಭೆ ವಾಹನಕ್ಕೆ ನೀಡಬೇಕು. ಈ ರೀತಿ ಹಸಿ ಮತ್ತು ಒಣಕಸ ಬೇರ್ಪಡಿಸಿ ನೀಡಬೇಕು. ಈ ಬಗ್ಗೆ ಒಂದಲ್ಲ ಎರಡು-ಮೂರು ಬಾರಿ ಮಾಹಿತಿ ನೀಡಿ ತಿಳುವಳಿಕೆ ಮೂಡಿಸಬೇಕು. ಬಳಿಕವೂ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡದಿದ್ದಲ್ಲಿ ಕಸವನ್ನು ತೆಗೆದುಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುವುದರಿಂದ ಗೊಬ್ಬರವನ್ನಾಗಿ ಪರಿವರ್ತಿಸಲು ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು.

ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ಮನೆ ನಿರ್ಮಿಸಲಾಗುತ್ತದೆ. ಪೌರ ಕಾರ್ಮಿಕರಿಗೂ ಮನೆ ನೀಡಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಡಾ.ಬಿ.ಸಿ.ಸತೀಶ ಅವರು ತಿಳಿಸಿದರು.

ಪೌರ ಕಾರ್ಮಿಕರು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ಪೌರ ಕಾರ್ಮಿಕರು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಕೈಗವಸು, ಗಂಬೂಟ್, ಮಾಸ್ಕ್ ಧರಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು.  ಪೌರ ಕಾರ್ಮಿಕರು ಆರೋಗ್ಯ ತಪಾಸಣೆಯನ್ನು ಮೂರು ತಿಂಗಳಿಗೊಮ್ಮೆಯಾದರೂ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಮಾತನಾಡಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪೌರ ಕಾರ್ಮಿಕರು ಕೆಲಸ ನಿರ್ವಹಿಸಬೇಕು. ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಸಮಸ್ಯೆಗಳು ಇದ್ದಲ್ಲಿ ಗಮನಕ್ಕೆ ತರಬೇಕು ಎಂದು ಅವರು ಹೇಳಿದರು.
ಪೌರಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಹಂತ ಹಂತವಾಗಿ ಈಡೇರಿಸುತ್ತಿದ್ದು, ಆ ನಿಟ್ಟಿನಲ್ಲಿ ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಲು ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು.

ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ನೀಡಬೇಕು. ಇಲ್ಲದಿದ್ದಲ್ಲಿ ಕಸವನ್ನು ತೆಗೆದುಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಅವರ ಮಾತಿಗೆ ನಗರಸಭೆ ಅಧ್ಯಕ್ಷರು ಧ್ವನಿಗೂಡಿಸಿದರು.
ಎಲ್ಲೆಂದರಲ್ಲಿ ಕಸ ಎಸೆಯಬಾರದು. ಕಸ ಎಸೆಯುವವರ ವಿರುದ್ಧ ದಂಡ ಕಟ್ಟಿಸಬೇಕು. ನಮ್ಮ ನಗರ, ನಮ್ಮ ಸ್ವಚ್ಛತೆ, ನಮ್ಮ ಪರಿಸರ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕು ಎಂದು ಹೇಳಿದರು.
ಪೌರಕಾರ್ಮಿಕರಿಗೆ ಗಂಬೂಟ್, ಸ್ವೆಟರ್, ಗ್ಲೌಸ್, ಹೀಗೆ ಎಲ್ಲಾ ರೀತಿಯ ಪರಿಕರ ನೀಡಲಾಗುತ್ತದೆ. ಆ ನಿಟ್ಟಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು. ಗೃಹಭಾಗ್ಯದಡಿ 11 ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗುತ್ತದೆ. ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಿದೆ ಎಂದರು.

ನಗರಸಭೆ ಉಪಾಧ್ಯಕ್ಷರಾದ ಸವಿತಾ ರಾಕೇಶ್ ಅವರು ಮಾತನಾಡಿ ಕಠಿಣ ಪರಿಸ್ಥಿತಿಯಲ್ಲಿಯೂ ಪೌರ ಕಾರ್ಮಿಕರು ಸಾರ್ವಜನಿಕರಿಗಾಗಿ ನಗರದ ಸ್ವಚ್ಛತೆಗೆ ಗಮನಹರಿಸುತ್ತಾರೆ. ಆ ನಿಟ್ಟಿನಲ್ಲಿ ಪೌರಕಾರ್ಮಿಕರ ಕಾಯಕವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದರು.
ಪೌರ ಕಾರ್ಮಿಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಗಮನಹರಿಸಬೇಕು. ಮದ್ಯಪಾನವನ್ನು ಬಿಟ್ಟು ಉತ್ತಮ ಬದುಕು ಕಟ್ಟಿಕೊಳ್ಳುವತ್ತ ಗಮನಹರಿಸಬೇಕು ಎಂದರು.
ಪೌರಾಯುಕ್ತರಾದ ವಿಜಯ ಅವರು ಮಾತನಾಡಿ 2012 ರಿಂದ ಸ್ವಚ್ಛತಾ ಸೇನಾನಿಗಳ ದಿನವನ್ನು ಆಚರಿಸಲಾಗುತ್ತಿದೆ. ಸಮಾಜದಲ್ಲಿ ಕಟ್ಟಕಡೆಯ ಕೆಲಸ ಮಾಡುವವರು ಪೌರಕಾರ್ಮಿಕರಾಗಿದ್ದಾರೆ. ಅವರಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ವೇತನ ತಾರತಮ್ಯ ನಿವಾರಣೆ, ಪ್ರತಿ ವರ್ಷ ಎರಡು ಬಾರಿ ಆರೋಗ್ಯ ತಪಾಸಣೆ, ಜೀವ ವಿಮೆ ಸೌಲಭ್ಯ, ಸಂಕಷ್ಟ ಭತ್ಯೆ, ಸುರಕ್ಷತಾ ಉಪಕರಣಗಳ ವಿತರಣೆ, ಹೀಗೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದರು.

ನಗರದ ನೈರ್ಮಲ್ಯ ಮತ್ತು ಸ್ವಚ್ಛತೆ ಕಾಪಾಡುವಲ್ಲಿ ಪ್ರತಿಯೊಬ್ಬರೂ ಪೌರ ಕಾರ್ಮಿಕರ ಜೊತೆ ಕೈಜೋಡಿಸಬೇಕು. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು. ವಿದ್ಯಾರ್ಥಿ ನಿಲಯ ಸೌಲಭ್ಯಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದರು.
ಮೂವರು ಪೌರಕಾರ್ಮಿಕರಿಗೆ ಇದೇ ಸಂದರ್ಭದಲ್ಲಿ ಶಾಲೂ, ತಾಂಬೂಲ ನೀಡಿ ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪೌರಕಾರ್ಮಿಕರಿಗೆ ಕಣ್ಣಿನ ತಪಾಸಣೆ ನಡೆಯಿತು.

ನಗರಸಭಾ ಸದಸ್ಯರು ಇತರರು ಇದ್ದರು. ನಗರಸಭೆ ಕಂದಾಯ ಅಧಿಕಾರಿ ತಾಹಿರ್ ಸ್ವಾಗತಿಸಿದರು, ರಾಜೇಶ್ವರಿ, ಪುನಿತಾ ಪ್ರಾರ್ಥಿಸಿದರು. ಪರಿಸರ ಎಂಜಿನಿಯರ್ ಸೌಮ್ಯ ನಿರೂಪಿಸಿದರು. ವ್ಯವಸ್ಥಾಪಕರಾದ ಸುಜಾತ ವಂದಿಸಿದರು.

error: Content is protected !!